Advertisement

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

03:11 PM Apr 16, 2024 | Suhan S |

ಶಿವಮೊಗ್ಗ: ಅಂಬೇಡ್ಕರ್‌ ಜಯಂತಿಯ ಪವಿತ್ರ ದಿನದಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಈ ಪ್ರಣಾಳಿಕೆಗೆ ದೇಶದ ಅನೇಕ ಹಿರಿಯರು ಮತ್ತು ತಜ್ಞರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ 10 ವರ್ಷಗಳಲ್ಲಿ ಏನು ಮಾಡಬೇಕು ಎಂಬುದನ್ನು ನಮೋ ಆ್ಯಪ್‌ ಮೂಲಕ 40 ಲಕ್ಷಕ್ಕೂ ಸಾರ್ವಜನಿಕರು ಸಲಹೆಗಳನ್ನು ನೀಡಿದ್ದರು. ಅದನ್ನು ಸ್ವೀಕರಿಸಿ ಪಕ್ಷದಿಂದ ಉತ್ತಮವಾದ ಪ್ರಣಾಳಿಕೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ ಎಂದರು.

ದೇಶದ ಜನಸಾಮಾನ್ಯರು ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷದಿಂದ ಜೀವನ ನಡೆಸಲು ಬೇಕಾದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಭಾರತ ವಿಶ್ವದಲ್ಲೇ ಸೂಪರ್‌ ಪವರ್‌ ಆಗಲು ಯೋಜನೆ ರೂಪಿಸಲಾಗಿದೆ. ಇಡೀ ವಿಶ್ವವೇ ಭಾರತದ 18ನೇ ಲೋಕಸಭೆ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಲವಾರು ರಾಷ್ಟ್ರಗಳ ರಾಜತಾಂತ್ರಿಕರು ಭಾರತದಲ್ಲಿ ಬೀಡುಬಿಟ್ಟಿದ್ದಾರೆ. 95 ಕೋಟಿಗೂ ಅಧಿಕ ಮತದಾರರು ದೇಶದಲ್ಲಿ ಸುಮಾರು 10 ಲಕ್ಷ ಬೂತ್‌ಗಳಲ್ಲಿ ಮತ ಚಲಾಯಿಸಲಿದ್ದಾರೆ ಎಂದರು.

ಮೋದಿ ಸರ್ಕಾರ ಬರುವ ಹಿಂದಿನ 10 ವರ್ಷಗಳಲ್ಲಿ ನಡೆದ ಆಡಳಿತವನ್ನು ಜನ ನೋಡಿದ್ದಾರೆ. 60 ವರ್ಷ ಆಳಿದ ಕಾಂಗ್ರೆಸ್‌ ದೇಶದ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಿರಲಿಲ್ಲ. 10 ವರ್ಷ ಆಳಿದ ಮೋದಿ ಸರ್ಕಾರ ಎಲ್ಲಾ ಅಭಿವೃದ್ಧಿಯ ಅಂಕಿ- ಅಂಶಗಳ ಸಹಿತ ಶ್ವೇತ ಪತ್ರ ಹೊರಡಿಸಿದ್ದು, ವಿಶ್ವದಲ್ಲೇ ಮೂರನೇ ಸ್ಥಾನದತ್ತ ಬೃಹತ್‌ ಆರ್ಥಿಕ ಶಕ್ತಿಯಾಗಿ ಭಾರತ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್‌ ಅವಧಿಯಲ್ಲಿ 10 ವರ್ಷದಲ್ಲಿ 2800 ಮೆ. ವ್ಯಾ. ಸೋಲಾರ್‌ ಶಕ್ತಿ ಉತ್ಪತ್ತಿಯಾಗುತ್ತಿತ್ತು. ಮೋದಿ ಅವ ಧಿಯಲ್ಲಿ 72 ಸಾವಿರ ಮೆ.ವ್ಯಾ. ಸೋಲಾರ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಬರುವ ದಿನಗಳಲ್ಲಿ ಮನೆ- ಮನೆಗಳಲ್ಲಿ ಸೋಲಾರ್‌ ವಿದ್ಯುತ್‌ ಉಚಿತ ಉತ್ಪಾದನೆಯಾಗಲಿದೆ ಎಂದರು.

ಡಿಜಿಟಲ್‌ ಪೇಮೆಂಟ್‌ ಸಿಸ್ಟಂ, ಯುಪಿಐ, ಆರ್ಥಿಕ ಸ್ಥಿರತೆ ಕಾಪಾಡಿ ಕೊಂಡು ಬಂದಿದ್ದು ವಿಶೇಷವಾಗಿ ಅನಿವಾಸಿ ಭಾರತೀಯರಿಗೆ ವಿಶ್ವದೆಲ್ಲೆಡೆ ಗೌರವ ಸಿಗುತ್ತಿದೆ. ಮಹಿಳೆಯರಿಗೆ ಶೇ. 33 ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದರು.

Advertisement

ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಮಾತನಾಡಿ, ಏ. 18ರಂದು ಬೆಳಗ್ಗೆ 9 ಗಂಟೆಗೆ ರಾಮಣ್ಣ ಪಾರ್ಕ್‌ನಲ್ಲಿ ಪೂಜೆ ಸಲ್ಲಿಸಿ ಬೃಹತ್‌ ಮೆರವಣಿಗೆಯೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಗೋಪಿ ಸರ್ಕಲ್‌ ಬಳಿ ಸಾರ್ವಜನಿಕ ಸಭೆ ಕೂಡ ನಡೆಯಲಿದೆ. ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ.ಕುಮಾರ ಸ್ವಾಮಿ, ಬಿ.ವೈ. ವಿಜಯೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಶಾರದಾ ಪೂರ್ಯಾ ನಾಯ್ಕ, ಡಿ.ಎಸ್‌. ಅರುಣ್‌, ಭಾರತಿಶೆಟ್ಟಿ, ಎಸ್‌. ರುದ್ರೇಗೌಡ, ಮಾಜಿ ಶಾಸಕರಾದ ಕುಮಾರ್‌ ಬಂಗಾರಪ್ಪ, ಅಶೋಕ್‌ ನಾಯ್ಕ, ಹರತಾಳು ಹಾಲಪ್ಪ, ಕೆ.ಬಿ. ಪ್ರಸನ್ನ ಕುಮಾರ್‌, ಎಂ.ಬಿ. ಭಾನು ಪ್ರಕಾಶ್‌, ಆರ್‌.ಕೆ. ಸಿದ್ದರಾಮಣ್ಣ ಸೇರಿದಂತೆ ಅನೇಕರು ಭಾಗವಹಿಸಲಿದ್ದು ಹಬ್ಬದ ವಾತಾವರಣದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಬೃಹತ್‌ ರಣಕಹಳೆ ಮೊಳಗಿಸಲಾಗುವುದು ಎಂದರು.

ಡಿ.ಎಸ್‌. ಅರುಣ್‌, ಮಾಲತೇಶ್‌, ನಾಗರಾಜ್‌, ಮೋಹನ್‌ ರೆಡ್ಡಿ, ಹರಿಕೃಷ್ಣ, ಜ್ಯೋತಿಪ್ರಕಾಶ್‌, ಐಡಿಯಲ್‌ ಗೋಪಿ, ಅಣ್ಣಪ್ಪ, ಚಂದ್ರಶೇಖರ್‌, ಮೊದಲಾದವರಿದ್ದರು.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಯನ್ನು ಮಾಮೂಲಿನಂತೆ ಘೋಷಿಸಿದ್ದು, ಈ ಬಗ್ಗೆ ಜನ ವಿಶ್ವಾಸ ಕಳೆದುಕೊಂಡು ತಿರಸ್ಕಾರ ಮಾಡಿದ್ದಾರೆ. ಸ್ಟ್ಯಾಂಪ್‌ ಡ್ಯೂಟಿ, ಅಬಕಾರಿ ಎಲ್ಲವೂ ಶೇ.80ರಷ್ಟು ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ತನ್ನದೆಂದು ಸುಳ್ಳು ಹೇಳುವ ಕಾಂಗ್ರೆಸ್‌ ಮೋಸವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಏ.18 ಮತ್ತು 19 ರಂದು ಶಿವಮೊಗ್ಗ ಕ್ಷೇತ್ರದ ಜನತೆ ಹುಬ್ಬೇರಿಸುವಂತೆ ಕಾಂಗ್ರೆಸ್‌ನ ಪ್ರಮುಖರು ಬಿಜೆಪಿ ಸೇರಲಿದ್ದಾರೆ.– ಬಿ.ವೈ. ರಾಘವೇಂದ್ರ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next