ಕಾರವಾರ: ಜಿಲ್ಲೆಯ 20 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸುವ ಕಾರ್ಯಕ್ರಮಕ್ಕೆ ಸಂಸದ ಅನಂತ ಕುಮಾರ್ ಹೆಗಡೆ ಗೈರು ಹಾಜರಾಗಲು ಅವರ ಆರೋಗ್ಯದಲ್ಲಿ ಏರುಪೇರು ಕಾರಣ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಸ್ಪಷ್ಟೀಕರಣ ನೀಡಿದರು.
ಕುಮಟಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಂಸದರ ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರು ಸಂಸತ್ ಅಧಿವೇಶನಕ್ಕೂ ಹೋಗಿರಲಿಲ್ಲ. ಈಗ ಅಧಿವೇಶನಕ್ಕೆ ಅಟೆಂಡ್ ಆಗಿದ್ದಾರೆ. ಬರುವ ದಿನಗಳಲ್ಲಿ ನನ್ನ ಕ್ಷೇತ್ರಕ್ಕೆ ಕರೆಯಿಸುವೆ ಎಂದರು.
ಕುಮಟಾ ಕ್ಷೇತ್ರದಲ್ಲಿ ಅವರು ಈ ಸಲ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದರಲ್ಲಿ ಸತ್ಯಾಂಶವಿಲ್ಲ. ನಾನು ಅವರ ಜೊತೆ ಆಗಾಗ ಮಾತಾಡುವೆ. ಅವರ ಪಿಎ ಜೊತೆ ಸಹ ಮಾತಾಡಿದ್ದೇನೆ. ಆ ರೀತಿ ಚಿಂತನೆ ನಡೆದಿಲ್ಲ. ಪಕ್ಷದಲ್ಲಿ ಸಹ ಈ ವಿಚಾರ ಚರ್ಚೆಯಾಗಿಲ್ಲ ಎಂದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಹಿಂದೆ ನನಗೆ ಟಿಕೆಟ್ ಸಿಗುವಲ್ಲಿ ಸಂಸದರ ಪಾತ್ರವಿದೆ. ಈಗ ಅವರು ಕುಮಟಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನೇ ಅವರಿಗೆ ಕ್ಷೇತ್ರ ಬಿಟ್ಟುಕೊಡುವೆ ಹಾಗೂ ಅವರ ಪಕ್ಕದಲ್ಲಿ ಮೊದಲಿಗನಾಗಿ ನಿಂತು ಕೆಲಸ ಮಾಡುವೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಇದನ್ನೂ ಓದಿ:ವೇಗಮಿತಿ ಲೆಕ್ಕಕ್ಕಿಲ್ಲ! ಆತಂಕ ಸೃಷ್ಟಿಸುತ್ತಿವೆ ಮಂಗಳೂರು ಸರಣಿ ರಸ್ತೆ ಅಪಘಾತಗಳು
ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಭೂಮಿ ಹಸ್ತಾಂತರದ ಬಗ್ಗೆ ಸರಕಾರಿ ಆದೇಶ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಜಾಗ ಕೊಡಲು ಮುಂದೆ ಬಂದಿವೆ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ ಪಟ್ಟಣದ ಆಯ ಕಟ್ಟಿನ ಜಾಗದಲ್ಲಿ ಇರಬೇಕು. ಅದನ್ನು ಮಾಡಿಸುವೆ. ಸರ್ಕಾರದಿಂದ ಭೂಮಿ ಹಸ್ತಾಂತರದ ಜಿ.ಒ. ಮಾಡಿಸಿಕೊಂಡು ಬರುವೆ. ನಂತರ ಟೆಂಡರ್ ನೋಟಿಫಿಕೇಶನ್ ಅಂತಿಮ ಮಾಡಿದ ನಂತರ ಶಂಕುಸ್ಥಾಪನೆ ಮಾಡಲಾಗುವುದು. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದರು.