Advertisement

Belthangady ಹೆಚ್ಚುವರಿ ಬಸ್‌ ಇಲ್ಲದೆ ವಿದ್ಯಾರ್ಥಿಗಳ ಪರದಾಟ

01:32 AM Mar 14, 2024 | Team Udayavani |

ಬೆಳ್ತಂಗಡಿ: ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಬುಧವಾರ ನಡೆದಿದ್ದು ಇದು ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚುವರಿ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಪರದಾಡುವಂತಾಯಿತು.

Advertisement

ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದರೂ ಶಿಕ್ಷಣ ಇಲಾಖೆ ಹಾಗೂ ಸರಕಾರ ರೂಪಿಸಿರುವ ನಿಯಮದ ಪ್ರಕಾರ ಅವರಿಗೆ ಅಲ್ಲಿ ಪರೀಕ್ಷೆಗೆ ಅವಕಾಶ ನೀಡದೆ ಬೇರೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ಅನಿವಾರ್ಯ ಇದೆ.

ಉಜಿರೆ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ದಿಡುಪೆ ಮೊದಲಾದ ಕಡೆಗಳ ವಿದ್ಯಾರ್ಥಿಗಳು ಬೆಳ್ತಂಗಡಿ, ಪುಂಜಾಲಕಟ್ಟೆ ಮೊದಲಾದ ಕಾಲೇಜುಗಳಲ್ಲಿ ಪರೀಕ್ಷೆ ಬರೆದರೆ ಆ ಭಾಗದ ವಿದ್ಯಾರ್ಥಿಗಳು ಈ ಭಾಗದ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಬೇಕು. ಈ ಕಾರಣದಿಂದ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಕಂಡುಬಂದರು.
ಪರೀಕ್ಷಾ ಕೇಂದ್ರಗಳನ್ನು ಬದಲಿಸಿದ್ದರೂ ಅಲ್ಲಿಗೆ ಹೋಗಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಮತ್ತೊಂದೆಡೆ ಶಿರಾಡಿ ಘಾಟಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಅಪಘಾತದಿಂದ ಆ ಭಾಗದ ಬಸ್‌ಗಳ ಓಡಾಟವಿರಲಿಲ್ಲ. ಈ ಎಲ್ಲ ಕಾರಣದಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದರು.

ತಾಲೂಕಿನ ಹೆಚ್ಚಿನ ಕಾಲೇಜುಗಳು ಪೇಟೆ ಪ್ರದೇಶಗಳಿಂದ ಹೊರಭಾಗದಲ್ಲಿರುವ ಕಾರಣ ಹಲವೆಡೆ ವೇಗದೂತ ಬಸ್‌ಗಳು ನಿಲುಗಡೆ ನೀಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಾಮೂಲಿ ಸಂಚರಿಸುವ ಲೋಕಲ್‌ ಬಸ್‌ಗಳೇ ಆಧಾರ. ಇವು ಹೊರಡುವ ಸ್ಥಳದಿಂದಲೇ ತುಂಬಿ ಬರುತ್ತಿದ್ದು ಏರಲು ಜಾಗವಿಲ್ಲದಷ್ಟು ಜನಸಂದಣಿ ಇತ್ತು.

ಉಜಿರೆ ಪೇಟೆಯಲ್ಲಿ ಹಾಗೂ ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ 9ರ ಸುಮಾರಿಗೆ ನೂರಾರು ವಿದ್ಯಾರ್ಥಿಗಳು ಕಾಯುತ್ತಿರುವುದು ಕಂಡುಬಂತು. ಇದು ಪ್ರತಿನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರ ಮೇಲೂ ಪರಿಣಾಮ ಬೀರಿತು.

Advertisement

ಕಾದು ಸುಸ್ತಾದ ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತಲುಪಲು ಬಾಡಿಗೆ ವಾಹನಗಳಿಗೆ ದುಬಾರಿ ಮೊತ್ತ ಪಾವತಿಸಿ ಸಂಚರಿಸಿದರು. ಹೊಸ ಹೊಸ ನಿಯಮಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವ ಇಲಾಖೆ ನಿಯಮಗಳನ್ನು ರೂಪಿಸುವಾಗ ಅದಕ್ಕೆ ಸರಿಯಾದ ಅಗತ್ಯ ವ್ಯವಸ್ಥೆಗಳ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next