ಚನ್ನಪಟ್ಟಣ: ಜೀವನದಲ್ಲಿ ಕತ್ತಲು ಕಳೆದು ಬೆಳಕು ತರುವ ಬೆಳಕಿನ ಹಬ್ಬವೇ ದೀಪಾವಳಿ ಎಂದು ಮುಖ್ಯ ಶಕ್ಷಕಿ ಶಬಾನಾಬೇಗಂ ಅಭಿಪ್ರಾಯಪಟ್ಟರು.
ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಪಟಾಕಿ ಬೇಡ ಎಂಬ ಅಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂತೋಷ, ಸಡಗರ ತರಲಿ. ಪ್ರತಿಯೊಬ್ಬರೂ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳು, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಪಟಾಕಿ ಹಚ್ಚದೇ ಹಸಿರು ದೀಪಾವಳಿ ಆಚರಿಸುವ ಪ್ರತಿಜ್ಞೆ ಮಾಡಬೇಕೆಂದರು.
ಪಟಾಕಿ ಎಂಬುದು ಮಾರಕವಾಗಿದ್ದು, ಪಟಾಕಿ ಸಿಡಿಸುವ ಹಾಗೂ ಪಟಾಕಿ ಸಿಡಿದ ಸಂದರ್ಭದಲ್ಲಿ ಅವಘಡಗಳು ಸಂಭವಿಸಿ, ಪ್ರತಿವರ್ಷ ಅನೇಕರು ಕಣ್ಣು ಕಳೆದುಕೊಂಡಿದ್ದಾರೆ. ಪಟಾಕಿಗಳಿಂದ ಬರುವ ಕಲುಷಿತ ದಟ್ಟ ಹೊಗೆಯಿಂದ ಮಕ್ಕಳಲ್ಲಿ ಅನೇಕ ರೀತಿಯ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಪಟಾಕಿಯ ಸಿಡಿಸಿದಾಗ ಹೊರಬರುವ ಶಬ್ದದಿಂದ ಹೃದಯ ಕಾಯಿಲೆ, ಉಸಿರಾಟದ ತೊಂದರೆ, ನರಗಳ ದೌರ್ಬಲ್ಯವಿರುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಹಣ ಕೊಟ್ಟು ರೋಗಕ್ಕೆ ತುತ್ತಾಗುವ ಪಟಾಕಿಗಳನ್ನು ಸಿಡಿಸುವುದನ್ನು ಇಂದಿನಿಂದಲೇ ನಿಲ್ಲಿಸಿ ಬಿಡೋಣ.ಈ ನಿಟ್ಟಿನಲ್ಲಿ ಸರ್ಕಾರ ಪಟಾಕಿ ನಿಷೇಧಿಸಬೇಕೆಂದರು. ಶಾಲೆಯ ನೂರಾರು ವಿದ್ಯಾರ್ಥಿಗಳು, ನಗರದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ,ಅಂಚೆ ಕಚೇರಿ ರಸ್ತೆ, ಡ್ನೂಂ ಲೈಟ್ ಸರ್ಕಲ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹಳೆಯ ಕೋರ್ಟ್ ರಸ್ತೆ ಹಾಗೂ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪಟಾಕಿನಿರ್ಮೂಲನೆಗೆ ಒತ್ತಾಯಿಸಿ ಆಂದೋಲನ ನಡೆಸಿದರು. ಶಾಲೆಯ ಹಿರಿಯ ದೈಹಿಕ ಶಿಕ್ಷಕ ಚಂದ್ರಯ್ಯ, ಶಿಕ್ಷಕಿಯರಾದ ಗಾಯಿತ್ರಿ, ಅಶ್ವಿನಿ, ಹೇಮಾವತಿ, ಲತಾ, ಮಮತಾ, ವಿನೋದ್ ಹಾಗೂ ಹಲವಾರು ಮಂದಿ ಶಿಕ್ಷಕರು ಹಾಜರಿದ್ದರು.