ಬೆಂಗಳೂರು: ಮಹಿಳಾ ಚಳವಳಿಗಳು ಜಾತಿ, ಧರ್ಮ, ಪಕ್ಷಗಳಿಗೆ ಸೀಮಿತವಾಗುತ್ತಿವೆ ಎಂಬ ಆರೋಪಗಳಿದ್ದು, ಅದು ನಿಜವಾದರೆ ಅದಕ್ಕಿಂತ ದುರಂತ ಮತ್ತೂಂದಿಲ್ಲ ಎಂದು ವಿಮರ್ಶಕ ಸಿ.ಎನ್. ರಾಮಚಂದ್ರನ್ ಅಭಿಪ್ರಾಯಪಟ್ಟರು. ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಎಚ್.ಎಸ್.ಪಾರ್ವತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಹಿಳಾ ಸಂಘಟನೆಗಳು ಸಾಮಾಜಿಕ, ರಾಜಕೀಯ ಅಡೆತಡೆಗಳನ್ನು ಮೀರಿ ನ್ಯಾಯಪರ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡುಬೇಕು. ಆದರೆ ಪ್ರಸ್ತುತ ಹೆಚ್ಚಿನ ಮಹಿಳಾ ಸಂಘಟನೆಗಳು ಕೆಲವು ಘಟನೆಗಳಿಗೆ ಅತಿಯಾಗಿ ಹೋರಾಟ ಮಾಡುತ್ತವೆ. ಇನ್ನೂ ಕೆಲವು ಘಟನೆಗಳನ್ನು ಕಂಡರೂ ಕಾಣದಂತೆ ಉದಾಸೀನ ತೋರಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ,’ ಎಂದರು.
ಸ್ತ್ರೀ ಮತ್ತು ಪುರುಷ ವಿಶ್ವವನ್ನು ನೋಡುವ ಸ್ವರೂಪವೇ ಭಿನ್ನವಾಗಿರುತ್ತದೆ. ಕುಮಾರರಾಮನ ಕಥೆಯನ್ನು ಮಹಿಳೆಯರು ಹಾಡುವಾಗ ಅದು ಸ್ತ್ರೀ ಕೇಂದ್ರೀಕೃತವಾಗಿರುತ್ತದೆ. ಪುರುಷರು ಹಾಡುವಾಗ ರಾಜ ಕೇಂದ್ರೀಕೃತವಾಗಿರುತ್ತದೆ. ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು ಸಂಶೋಧನಾ ಕೃತಿಯಲ್ಲಿ ಗಾಯತ್ರಿ ನಾವಡ ಅವರು ಅದನ್ನು ತುಂಬಾ ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಯಾವುದೇ ವಿಚಾರವಾದರೂ ಕೂಡ ಸಮಾಜವನ್ನು ಸ್ತ್ರೀ, ಪುರುಷರಿಬ್ಬರು ತಮ್ಮದೇ ವಿಭಿನ್ನ ದೃಷ್ಟಿಯಲ್ಲಿ ನೋಡಿ ತಿಳಿದುಕೊಳ್ಳುತ್ತಾರೆಂಬುದು ಸ್ಪಷ್ಟ,’ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತರಾದ ಗಾಯತ್ರಿ ನಾವಡ ಮಾತನಾಡಿ,” ಅಧ್ಯಯನ, ಸಂಶೋಧನೆ ಎಂಬುದೊಂದು ತಪಸ್ಸು. ಮೌನವಾಗಿಯೇ ಅದನ್ನು ಮುಂದುವರೆಸಿಕೊಂಡು ಬಂದಿದ್ದೇನೆ.
ನನ್ನ ಬರಹಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂಬುದೇ ನನಗೆ ಸಂಭ್ರಮ. ಪ್ರಶಸ್ತಿ, ಸನ್ಮಾನಗಳು ನಮ್ಮ ಜವಾಬ್ದಾರಿಗಳನ್ನು ಹೆಚ್ಚು ಮಾಡುತ್ತವೆ,’ ಎಂದು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಹೇಮಲತಾ ಮಹಿಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.