Advertisement

ಹೈಕಮಾಂಡ್‌ ಸೂಚನೆ, ಸ್ಪೀಕರ್‌ ಕ್ರಮ ಆಧರಿಸಿ ನಡೆ

09:05 AM Jul 27, 2019 | Sriram |

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯ ಆರ್‌.ಶಂಕರ್‌ ಸೇರಿದಂತೆ ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಅವರನ್ನು ಸ್ಪೀಕರ್‌ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಬಿಜೆಪಿಯ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ.

Advertisement

ರಾಜ್ಯದಲ್ಲಿ ಸರ್ಕಾರ ರಚನೆಗೆ ಅವಕಾಶ ಸೃಷ್ಟಿಯಾದಂತಿದ್ದು, ಇದನ್ನು ಬಳಸಿಕೊಳ್ಳಲು ಅನುಮತಿ ಕೋರಿ ನವದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದ ಬಿಜೆಪಿ ನಿಯೋಗ, ವರಿಷ್ಠರ ಸೂಚನೆಯ ನಿರೀಕ್ಷೆಯಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದೆ. ಇನ್ನೊಂದೆಡೆ, ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಶಾಸಕ ಆರ್‌.ಶಂಕರ್‌ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಉತ್ಸಾಹದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಉಳಿದ ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸ್ಪೀಕರ್‌ ಕ್ರಮದತ್ತ ಗಮನ ಹರಿಸಿದ್ದು, ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಆರು ವರ್ಷಗಳ ಬಳಿಕ ಬಿಜೆಪಿಗೆ ಸರ್ಕಾರ ರಚನೆ ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವರಿಷ್ಠರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿ ಕೊಡಲು ಜಗದೀಶ ಶೆಟ್ಟರ್‌, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಶಾಸಕ ಜೆ.ಸಿ.ಮಾಧುಸ್ವಾಮಿ ಯವರನ್ನೊಳಗೊಂಡ ನಿಯೋಗ ಗುರುವಾರ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿತು. ರಾಜ್ಯ ರಾಜಕೀಯ ವಿದ್ಯ ಮಾನಗಳ ಬಗ್ಗೆ ಮಾಹಿತಿ ನೀಡಿ, ಬಿಜೆಪಿ ಸರ್ಕಾರ ರಚನೆಗಿರುವ ಅವಕಾಶಗಳ ಬಗ್ಗೆಯೂ ವಿವರಿಸಿತು.

ರಾಜ್ಯ ಬಿಜೆಪಿ ನಾಯಕರು ಪ್ರಸ್ತಾಪಿಸಿದ ಅಂಶಗಳ ಬಗ್ಗೆ ತೃಪ್ತರಾದಂತೆ ಕಾಣದ ಅಮಿತ್‌ ಶಾ, ಯಾವುದೇ ಸ್ಪಷ್ಟ ಸೂಚನೆ ನೀಡಿದಂತಿಲ್ಲ. ಈ ನಡುವೆ ರಾಜ್ಯ ಬಿಜೆಪಿ ನಾಯಕರು ಪ್ರಸ್ತಾಪಿಸಿದ ವಿಚಾರಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಸಾಧಕ-ಬಾಧಕ ಕುರಿತು ಹಿರಿಯ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದುವರಿಯಲು ಅಮಿತ್‌ ಶಾ ನಿರ್ಧರಿಸಿದಂತಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೆ ಕಾದು ನೋಡುವುದು ಸೂಕ್ತ ಎಂಬ ಚಿಂತನೆಯಲ್ಲಿ ವರಿಷ್ಠರಿದ್ದಾರೆ ಎನ್ನಲಾಗಿದೆ.

ಜತೆಗೆ, ಅತೃಪ್ತ ಶಾಸಕರು ತಮ್ಮ ನಿಲುವಿಗೆ ಎಷ್ಟರ ಮಟ್ಟಿಗೆ ಬದ್ಧವಾಗಿದ್ದಾರೆ ಎಂಬ ಬಗ್ಗೆಯೂ ಅಮಿತ್‌ ಶಾ ಅವರಿಗೆ ಸಂಶಯವಿದೆ. ಮುಖ್ಯವಾಗಿ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿ ನಂತರ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿರುವ ಶಾಸಕರ ನಿಷ್ಠೆ ಬಗ್ಗೆಯೂ ಪೂರ್ಣ ವಿಶ್ವಾಸ ಮೂಡದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಮುಂದುವರಿ ಯುವುದು ಸೂಕ್ತ ಎಂದು ರಾಷ್ಟ್ರೀಯ ಅಧ್ಯಕ್ಷರು ಭಾವನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

ಹಾಗಾಗಿ, ದೆಹಲಿಯಲ್ಲೇ ಬಿಜೆಪಿ ನಾಯಕರು ಮೊಕ್ಕಾಂ ಹೂಡಿದ್ದಾರೆ. ಗುರುವಾರ ತಡರಾತ್ರಿ ಇಲ್ಲವೇ ಶುಕ್ರವಾರ ವರಿಷ್ಠರನ್ನು ಮತ್ತೂಮ್ಮೆ ಭೇಟಿ ಮಾಡಿ ಮಾಹಿತಿ ನೀಡಲು ಮುಂದಾಗಿದ್ದು, ಸದ್ಯ ವರಿಷ್ಠರ ಸೂಚನೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಇನ್ನೊಂದೆಡೆ, ಸರ್ಕಾರ ರಚಿಸುವ ಉತ್ಸಾಹದ ಲ್ಲಿರುವ ಬಿ.ಎಸ್‌.ಯಡಿಯೂರಪ್ಪ ಅವರು ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಕ್ರಮದ ಬಗ್ಗೆ ಗಮನ ಹರಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಬೆಂಬಲಿಸುವುದಾಗಿ ಪ್ರಕಟಿಸಿದ್ದ ಆರ್‌.ಶಂಕರ್‌ ಅನರ್ಹಗೊಂಡಿರುವುದರಿಂದ ಬಿಜೆಪಿಯೂ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬುಧವಾರ ಯಡಿಯೂರಪ್ಪ ಅವರ ನಿವಾಸ ಹಾಗೂ ಬಿಜೆಪಿ ಕಚೇರಿ ಬಳಿ ಕಂಡು ಬಂದಿದ್ದ ಸಂಭ್ರಮದ ವಾತಾವರಣ ಗುರುವಾರ ಕಾಣಲಿಲ್ಲ.

ರಾಜ್ಯ ಬಿಜೆಪಿಯಿಂದಲೇ ಮನವಿ

ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಮುಂದಾಗಿ ವಿಶ್ವಾಸ ಮತ ಯಾಚಿಸಿ ಹಣಕಾಸು ವಿಧೇಯಕಕ್ಕೆ ಜು.31ರೊಳಗೆ ವಿಧಾನಮಂಡಲದಲ್ಲಿ ಅನುಮೋದನೆ ನೀಡಿ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ರಾಜ್ಯ ಬಿಜೆಪಿ ನಾಯಕರು ತೋರಿದ ಉತ್ಸಾಹವನ್ನು ರಾಷ್ಟ್ರೀಯ ನಾಯಕರು ತೋರಿದಂತೆ ಕಾಣಲಿಲ್ಲ. ಹಾಗಾಗಿ, ನಿಯೋಗದಲ್ಲಿ ತೆರಳಿ ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ದೆಹಲಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್‌, ಭೇಟಿಗೆ ಸಮಯ ಕೋರಲಾಯಿತು. ವರಿಷ್ಠರು ಸಮಯ ನೀಡಿದ್ದರಿಂದ ಭೇಟಿಯಾಗಿ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದು, ವರಿಷ್ಠರ ಸೂಚನೆಯಂತೆ ಮುಂದುವರಿಯುತ್ತೇವೆ ಎಂದು ಹೇಳಿದರು.

ಎಚ್ಚರ ವಹಿಸುವುದು ಮುಖ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ನಡೆಯನ್ನು ನಿರ್ಲಕ್ಷಿಸುವಂ ತಿಲ್ಲ. ಅವರ ನಡೆ ಆಧರಿಸಿ ಮುಂದುವರಿಯುವುದು ಒಳಿತು. ಮೈತ್ರಿ ಸರ್ಕಾರ ಪತನವಾಗಿರುವ ಈ ಹಂತದಲ್ಲಿ ಎಚ್ಚರ ವಹಿಸುವುದು ಮುಖ್ಯ ಎಂಬ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next