Advertisement

ಮೊವಾಡಿ: ಸೇತುವೆ ಪೂರ್ಣಗೊಂಡರೂ ಆರಂಭವಾಗಿಲ್ಲ ಸಂಚಾರ

12:51 AM Mar 27, 2021 | Team Udayavani |

ತ್ರಾಸಿ: ತ್ರಾಸಿ ಹಾಗೂ ನಾಡ ಗ್ರಾಮಗಳನ್ನು ಸಂಪರ್ಕಿಸುವ ಮೊವಾಡಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಇನ್ನೂ ಎರಡೂ ಕಡೆಗಳ ಸಂಪರ್ಕ ರಸ್ತೆ ಕಾಮಗಾರಿ ವಿಳಂಬದಿಂದಾಗಿ ಸಂಚಾರ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

Advertisement

ನಾಡದಿಂದ ತ್ರಾಸಿಗೆ ಸಂಪರ್ಕಿಸುವ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮಂಜೂರಾದ 9.28 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಇದಾಗಿದೆ. ಕಾಮ ಗಾರಿಗೆ 2018ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದ್ದರೂ ಕಾಮಗಾರಿ ಆರಂಭವಾಗಿದ್ದು 2019ರ ಮಾರ್ಚ್‌ನಲ್ಲಿ. 2020ರ ಮೇಯೊಳಗೆ ಕಾಮಗಾರಿ ಪೂರ್ಣಕ್ಕೆ ಗಡುವು ನೀಡಲಾಗಿತ್ತು. ಆದರೆ ಕೊರೊನಾ, ಲಾಕ್‌ಡೌನ್‌ನಿಂದಾಗಿ ವಿಳಂಬಗೊಂಡಿತ್ತು.

ಈಗ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ ಎರಡೂ ಕಡೆಗಳಿಂದ ರಸ್ತೆಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ತೊಡಕಾಗಿದ್ದರಿಂದ ಸಂಪರ್ಕ ರಸ್ತೆ ಕಾಮಗಾರಿ ವಿಳಂಬಗೊಂಡಿತ್ತು. ಇದಲ್ಲದೆ ರಸ್ತೆ ನಿರ್ಮಾಣಕ್ಕೆ ಬೇಕಾದ ಜಲ್ಲಿ, ಕ್ರಷರ್‌ ಸಾಗಾಟ ನಿರ್ಬಂಧದಿಂದಾಗಿಯೂ ತೊಂದರೆಯಾಗಿದೆ ಎನ್ನುವುದು ಅಧಿಕಾರಿಗಳ ವಾದ.

ತಲಾ 100 ಮೀ. ವಿಸ್ತರಣೆ
ಈ ಸೇತುವೆಯನ್ನು ಮೊವಾಡಿ ಹಾಗೂ ನಾಡ ಕಡೆಯಿಂದ ಸಂಪರ್ಕಿಸುವ ಕಡೆಗಳಲ್ಲಿ ತಲಾ 35 ಮೀ. ರಸ್ತೆ ನಿರ್ಮಾಣಕ್ಕೆ ಈ ಮೊದಲು ತಯಾರಿಸಿದ ಕರಡು ನಕ್ಷೆಯಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಇದರಿಂದ ಅಷ್ಟೇನು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಊರವರ ಬೇಡಿಕೆ ಮೇರೆಗೆ ರಸ್ತೆ ವಿಸ್ತರಣೆಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿ, ಭೂಸ್ವಾಧೀನ ಪ್ರಕ್ರಿಯೆಯೂ ಆಗಿದೆ. ಮೊವಾಡಿ ಕಡೆಯಿಂದ 103 ಮೀ. ಹಾಗೂ ನಾಡ ಕಡೆಯಿಂದ 100 ಮೀ. ರಸ್ತೆ ವಿಸ್ತರಣೆಯಾಗಲಿದೆ.

ಆದಷ್ಟು ಬೇಗ ಪೂರ್ಣ
ರಸ್ತೆ ವಿಸ್ತರಣೆಗೆ ತಾಂತ್ರಿಕ ಒಪ್ಪಿಗೆ ಪ್ರಕ್ರಿಯೆ ಎಲ್ಲ ಪೂರ್ಣಗೊಂಡು, ಕಾಮಗಾರಿ ಆರಂಭಗೊಂಡಿತ್ತು. ಆದರೆ ಕಾಮಗಾರಿಗೆ ಜಲ್ಲಿ, ಕ್ರಷರ್‌ ಸಮಸ್ಯೆಯಿಂದಾಗಿ ಕೆಲವು ದಿನ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಆದಷ್ಟು ಬೇಗ ಎರಡೂ ಕಡೆಗಳ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
– ಸಂಗಮೇಶ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

Advertisement

ಇನ್ನೆಷ್ಟು ದಿನ?
ಮೊವಾಡಿ ಸೇತುವೆಯನ್ನು ಸಂಪರ್ಕಿಸುವ ರಸ್ತೆಗಾಗಿ ಇಲ್ಲಿನ ನಿವಾಸಿಗರು ಜಾಗ ಬಿಟ್ಟುಕೊಟ್ಟಿದ್ದು, ಆದರೆ ಸೇತುವೆಯಿಂದ ಮೊವಾಡಿ ಶಾಲೆಯವರೆಗೆ 18 ಅಡಿ ರಸ್ತೆ ನಿರ್ಮಿಸಿದರೆ ಅನುಕೂಲವಾಗಲಿದೆ. ಇಲ್ಲಿ ಸರಕಾರಿ ಜಾಗವಿದ್ದು, ಅದನ್ನು ಸ್ವಾಧೀನಪಡಿಸಿಕೊಂಡು ಕಾಮಗಾರಿ ಮಾಡಿದರೆ ಒಳ್ಳೆಯದು. ಇದಲ್ಲದೆ ಹೆದ್ದಾರಿಯಿಂದ ಮೊವಾಡಿಗೆ ಡೈವರ್ಶನ್‌ ಇಲ್ಲದೇ ಸಮಸ್ಯೆಯಾಗಿದೆ. ಇನ್ನು ಎಷ್ಟು ದಿನ ಬೇಕೋ ಗೊತ್ತಿಲ್ಲ ಕಾಮಗಾರಿಗೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ.

– ರೆನ್ಸಮ್‌ ಪಿರೇರಾ, ಸ್ಥಳೀಯ ಗ್ರಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next