Advertisement

Abu Dhabi ಐಐಟಿ ದೆಹಲಿ ಕ್ಯಾಂಪಸ್‌: ಪ್ರಧಾನಿ-ಯುಎಇ ಅಧ್ಯಕ್ಷರ ಸಮ್ಮುಖದಲ್ಲಿ ಒಪ್ಪಂದ

11:28 PM Jul 15, 2023 | Team Udayavani |

ನವದೆಹಲಿ/ಅಬುಧಾಬಿ:ಇನ್ನು ಮುಂದೆ ಯುಎಇನಲ್ಲಿ ಇರುವ ಭಾರತೀಯರಿಗೆ ಮತ್ತು ಆ ದೇಶದ ನಾಗರಿಕರಿಗೆ ದೇಶದ ಪ್ರತಿಷ್ಠ ತಾಂತ್ರಿಕ ಸಂಸ್ಥೆ ಐಐಟಿ ಶಿಕ್ಷಣ ಪಡೆಯುವ ಅವಕಾಶ ಲಭ್ಯವಾಗಲಿದೆ. ಐಐಟಿ ದೆಹಲಿ ಅಬುಧಾಬಿಯಲ್ಲಿ ಕ್ಯಾಂಪಸ್‌ ಸ್ಥಾಪನೆ ಮಾಡುವ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಯುಎಇಯ ಶಿಕ್ಷಣ ಮತ್ತು ಜ್ಞಾನ ವಿಭಾಗ (ಎಡಿಇಕೆ) ನಡುವೆ ಒಪ್ಪಂದಕ್ಕೆ ಶನಿವಾರ ಸಹಿ ಹಾಕಲಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಪ್ರವಾಸದ ವೇಳೆ ಈ ಬಗ್ಗೆ ಅಲ್ಲಿನ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಜತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ಮುಂದಿನ ವರ್ಷದ ಜನವರಿಯಿಂದ ಸ್ನಾತಕೋತ್ತರ ಪದವಿ, ಮುಂದಿನ ವರ್ಷದ ಸೆಪ್ಟೆಂಬರ್‌ನಿಂದ ಪದವಿ ಕೋರ್ಸ್‌ಗಳು ಶುರುವಾಗಲಿವೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ “ದೇಶದ ಶಿಕ್ಷಣ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. ಪ್ರಧಾನಿಯವರ ಯುಎಇ ಪ್ರವಾಸದ ಅವಧಿಯಲ್ಲಿ ಐಐಟಿ ದೆಹಲಿಯ ಕ್ಯಾಂಪಸ್‌ ಅನ್ನು ಅಬುಧಾಬಿಯಲ್ಲಿಯಲ್ಲಿ ಆರಂಭಿಸಲು ಒಪ್ಪಂದಕ್ಕೆ ಬರಲಾಗಿದೆ. 2 ದೇಶಗಳ ಸ್ನೇಹ ಬಾಂಧವ್ಯಕ್ಕೆ ಇದು ದ್ಯೋತಕ. ಜಾಗತಿಕ ದೃಷ್ಟಿಕೋನದಲ್ಲಿರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಪರಿಚಯಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಕಳೆದ ವಾರ ಐಐಟಿ ಮದ್ರಾಸ್‌ ತಾಂಜೇನಿಯಾದ ಝಾಂಝಿಬಾರ್‌ನಲ್ಲಿ ಮೊದಲ ಕ್ಯಾಂಪಸ್‌ ಸ್ಥಾಪಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು.

ಪ್ರಧಾನಿ ಬೆಂಬಲ:
ಇದೇ ವೇಳೆ, ಯುಎಇ ಅಧ್ಯಕ್ಷತೆಯ ಹವಾಮಾನ ಬದಲಾವಣೆಯ ಶೃಂಗಕ್ಕೆ ಭಾರತದ ಬೆಂಬಲ ಇದೆ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಶೇಖ್‌ ಮೊಹಮ್ಮದ್‌ಗೆ ತಿಳಿಸಿದ್ದಾರೆ.

ಪೂರ್ಣ ಸಸ್ಯಾಹಾರಿ ಭೋಜನ:
ಪ್ರಧಾನಿ ಮೋದಿಯವರ ಗೌರವಾರ್ಥ ಯುಎಇ ಸರ್ಕಾರ ಪೂರ್ಣ ಸಸ್ಯಾಹಾರದ ಭೋಜನ ಸಿದ್ಧಪಡಿಸಿತ್ತು. ಸಾವಯವ ಪದ್ಧತಿಯಲ್ಲಿ ಸ್ಥಳೀಯವಾಗಿ ಬೆಳೆದ ಹಣ್ಣುಗಳ ಜತೆಗೆ ಗೋಧಿ ಮತ್ತು ಖರ್ಜೂರದ ಸಲಾಡ್‌, ಗ್ರಿಲ್ಡ್‌ ವೆಜಿಟೆಬಲ್ಸ್‌ ವಿತ್‌ ಮಸಾಲಾ ಸಾಸ್‌ ಸೇರಿದಂತೆ ಹಲವು ಅತ್ಯುತ್ಕೃಷ್ಟ ತಿನಸುಗಳು ಊಟದ ಮೆನುವಿನಲ್ಲಿ ಉಲ್ಲೇಖವಿತ್ತು. ಪ್ರಧಾನಿಯವರಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಅಡುಗೆ ಎಣ್ಣೆಯನ್ನು ಬಳಕೆ ಮಾಡಲಾಗಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next