ಹುಬ್ಬಳ್ಳಿ: ಕೇಂದ್ರ ಸರಕಾರದ ಮೋಟಾರು ವಾಹನ ನೂತನ ಕಾಯ್ದೆ ಜಾರಿಗೆ ಬಂದಾಗಿನಿಂದ ವಾಹನ ಖರೀದಿ ಪತ್ರ, ಚಾಲನಾ ಪರವಾನಗಿ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ಇನ್ನಿತರೆ ದಾಖಲೆಗಳನ್ನು ಜನರು ಹುಡುಕಾಡುವುದು ಹಾಗೂ ದಾಖಲಾತಿ ಪಡೆಯಲು ಆರ್‌ಟಿಒ ಕಚೇರಿಗೆ ಅಲೆದಾಡುವುದು ಹೆಚ್ಚಿದೆ.
ನೂತನ ವಾಹನ ಕಾಯ್ದೆ ಜಾರಿಗೆ ಬಂದಿದ್ದೇ ತಡ ಪೊಲೀಸರು ವಾಹನಗಳ ಎಲ್ಲ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಹೀಗಾಗಿ ವಾಹನಗಳ ಮಾಲೀಕರು ವಾಹನಕ್ಕೆ ಸಂಬಂಧಿಸಿದ ನೋಂದಣಿ, ಲೈಸನ್ಸ್, ವಿಮೆ ಸೇರಿದಂತೆ ಇನ್ನಿತರೆ ದಾಖಲಾತಿಗಳ ಹುಡುಕಾಟ ನಡೆಸಿದ್ದಾರೆ. ದಾಖಲೆಗಳಿಲ್ಲದಿದ್ದರೆ ಅವನ್ನು ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಹೋಗುವವರ ಸಂಖ್ಯೆ ಅಧಿಕವಾಗಿದೆ.
ಹು-ಧಾ ಪೂರ್ವ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ನೋಂದಣಿ ಸಂಖ್ಯೆ ಏರುತ್ತಲೇ ಸಾಗಿದೆ. ಲಾರಿ/ಗೂಡ್ಸ್ ಕ್ಯಾರಿಯರ್ 24,667, ಓಮ್ನಿ ಬಸ್ 2074, ರಾಜ್ಯ ಸಾರಿಗೆ ಬಸ್ 4086, ಶಿಕ್ಷಣ ಸಂಸ್ಥೆ ಬಸ್ 158, ಎಕ್ಸಾವಾಟರ್ (ವಾಣಿಜ್ಯ) 251, ಮ್ಯಾಕ್ಸಿ ಕ್ಯಾಬ್ 1409, ಮೋಟರ್ ಕ್ಯಾಬ್ 2689, ಖಾಸಗಿ ಸೇವಾ ವಾಹನ 148, ಮೂರು ಚಕ್ರದ ಗೂಡ್ಸ್ ವಾಹನ 2923, ಆಟೋ ರಿಕ್ಷಾ ಸೇರಿ ಮೂರು ಚಕ್ರದ ಪ್ರಯಾಣಿಕರ ವಾಹನ 16,525, ಟ್ರ್ಯಾಕ್ಟರ್ 264, ಟ್ರೇಲರ್ 472, ಆಂಬ್ಯುಲೆನ್ಸ್ 116, ಆರ್ಟಿಕ್ಯುಲೇಟೆಡ್ ವೆಹಿಕಲ್ 96, ಕ್ಯಾಂಪರ್ ವ್ಯಾನ್/ಟ್ರೇಲರ್ 99, ಕ್ಯಾಶ್ ವ್ಯಾನ್ 17, ಇ-ರಿಕ್ಷಾ 4 ವಾಹನಗಳು ಆ. 31ರ ವರೆಗೆ ನೋಂದಣಿಯಾಗಿವೆ.
Advertisement
ಧಾರವಾಡ ಜಿಲ್ಲಾ ಹಾಗೂ ಹು-ಧಾ ಪೂರ್ವ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಅಂದಾಜು 4 ಲಕ್ಷಕ್ಕೂ ಅಧಿಕ ವಾಹನಗಳಿವೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಖ್ಯೆ ಅಧಿಕವಾಗಿದೆ. ವಾಹನಗಳಿಂದ ಮಾಲಿನ್ಯ ತಡೆಗೆ ಜಿಲ್ಲೆಯಲ್ಲಿ 36ಕ್ಕೂ ಅಧಿಕ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿವೆ.
ಮಾಲಿನ್ಯ ತಪಾಸಣಾ ಕೇಂದ್ರದ ಜಾಣತನ!
ವಾಯುಮಾಲಿನ್ಯ ಲೈಸೆನ್ಸ್ ಪಡೆದ ಬಳಿಕ ಏಜೆನ್ಸಿಗಳಿಗೆ ಕೇಂದ್ರ ಕಚೇರಿಯ ವೆಬ್‌ಸೈಟ್‌ಗೆ ಸಂಪರ್ಕ ಪಡೆಯುವ ಕಾರಣ ಪ್ರತಿ ಕೇಂದ್ರಕ್ಕೂ ಪ್ರತ್ಯೇಕ ಗುರುತಿನ ವ್ಯವಸ್ಥೆ ಹಾಗೂ ಪಾಸ್‌ವರ್ಡ್ ಇರುತ್ತದೆ. ವಾಯುಮಾಲಿನ್ಯ ಪರಿಶೀಲನೆ ಮಾಡುವ ಯಂತ್ರ ಕಂಪ್ಯೂಟರೀಕೃತವಾಗಿದ್ದರೂ ಕೆಲವೆಡೆ ರಂಗೋಲಿ ಕೆಳಗೆ ನುಸುಳುವವರಿದ್ದಾರೆ. ತೀರಾ ಹೊಗೆ ಉಗುಳುವ ವಾಹನಗಳ ಸೈಲೆನ್ಸರ್ ಬದಲು ಪರಿಶೀಲನೆ ವೇಳೆ ಸುಸ್ಥಿತಿಯ ವಾಹನಗಳ ಸೈಲೆನ್ಸರ್‌ನಲ್ಲಿ ತಪಾಸಣಾ ಕೊಳವೆ ಇಡುವ ‘ಜಾಣತನ’ ಎಗ್ಗಿಲ್ಲದೆ ಸಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಅತಿ ಜಾಣತನ ತೋರುವ ಏಜೆನ್ಸಿಗಳ ವಿರುದ್ಧ ಕ್ರಮವಾಗದಿದ್ದರೆ ಮಾಲಿನ್ಯ ನಿಯಂತ್ರಣಕ್ಕೇನು ಅರ್ಥ, ಅಲ್ಲವೆ?
•ಶಿವಶಂಕರ ಕಂಠಿ