ಉದ್ಯಾವರ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಪೇಟೆಯಿಂದ ಉದ್ಯಾವರ ಸಿದ್ಧಿ ವಿನಾಯಕ ದೇವಸ್ಥಾನ ಸಂಪರ್ಕದ ಪ್ರಮುಖ ರಸ್ತೆಯೊಂದರ ತಿರುವು ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಈ ತಿರುವಿನಲ್ಲಿ ತಡೆ ಬೇಲಿಯನ್ನು ನಿರ್ಮಿಸುವ ಮೂಲಕ ಅವಘಡದ ಭೀತಿಯಿಂದ ವಾಹನ ಸವಾರರು ಸ್ವಲ್ಪ ನಿರಾಳರಾಗಿದ್ದಾರೆ.
ಹೆಚ್ಚು ಅಪಘಾತದ ಕೂಪವಾಗಿ ಕಂಡು ಬರುತ್ತಿದ್ದ ಈ ಪ್ರದೇಶದಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದರು. ಆ ಹಿನ್ನಲೆಯಲ್ಲಿ ಉದಯವಾಣಿಯು ಜನಪರ ಕಾಳಜಿಯ ವರದಿಯನ್ನು ಪ್ರಕಟಿಸಿತ್ತು. ಎಚ್ಚೆತ್ತ ಜನಪ್ರತಿನಿಧಿಗಳು ಸೂಕ್ತ ಅನುದಾನವನ್ನು ಹೊಂದಿಸಿಕೊಂಡು ಈ ಭಾಗದಲ್ಲಿ ಇದೀಗ ತಡೆ ಬೇಲಿ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದು, ಅದೀಗ ಪೂರ್ಣಗೊಳ್ಳುವ ಹಂತದಲ್ಲಿದೆ.
ಮೊದಲೇ ಅಗಲ ಕಿರಿದಾದ ರಸ್ತೆ ಇದಾಗಿದ್ದು, ವಾಹನಗಳು ಎದುರು ಬದುರಾದಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಹೆಚ್ಚಾಗಿ ದ್ವಿಚಕ್ರ ಸವಾರರು, ರಿಕ್ಷಾದಂತಹ ಲಘು ವಾಹನಗಳು ಹೆಚ್ಚು ಅವಘಾತಕ್ಕೀಡಾಗುತ್ತಿತ್ತು.
ಹರಿರಾಮ್ ಭವನ್, ಅಲಕಾನಂದ ಬಳಿಯ ಈ ತಿರುವಿನಲ್ಲಿ ನೀರು ಹರಿಯುವ ತೋಡು ಇದ್ದು, ಅಳವಡಿಸಲಾಗಿದ್ದ ಒಂದು ಸಾಲು ಕಲ್ಲು ಕಟ್ಟಿದ್ದ ತಡೆದಂಡೆಯೂ ಕಿತ್ತು ಬಂದಿದ್ದು ಅಸುರಕ್ಷತೆ ಕಾಡುತ್ತಿದ್ದು, ವಾಹನ ಸವಾರರು ಗೊಂದಲಕೊಂಡು ಕೆಳಕ್ಕೆ ಈ ತೋಡಿಗೂ ಬಿದ್ದಿªರುತ್ತಾರೆ. ಸಾಕಷ್ಟು ಅಪಘಾತಗಳೂ ಸಂಭವಿಸಿತ್ತು ಆಳೆತ್ತರ ಗಾತ್ರದ ಹುಲ್ಲು ಪೊದೆಯಿಂದ ಆವ್ರತವಾಗಿ ನೀರು ಹರಿಯುವ ತೋಡು ಇರುವುದು ಅರಿವಿಗೆ ಬಾರದೇ ಅಪಘಾತ ತೀವ್ರ ಸ್ವರೂಪ ಪಡೆಯುತ್ತಿತ್ತು. ಈ ಭಾಗದ ರಸ್ತೆಯ ಇಕ್ಕೆಲಗಳಲ್ಲೂ ತಡೆಬೇಲಿಯನ್ನು ನಿರ್ಮಿಸಿ ಮತ್ತು ವಾಹನಗಳ ವೇಗಕ್ಕೆ ಕಡಿವಾಣ ಹಾಕಿ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುವಂತೆ ಸಾರ್ವಜನಿಕರು ಹಲವು ವರ್ಷಗಳಿಂದಲೂ ಆಗ್ರಹಿಸುತ್ತಾ ಬಂದಿದ್ದರು. ಇದೀಗ ಇಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮದ ಬಗ್ಗೆ ಬಡಾಕೇರಿ ನಿವಾಸಿ ಆಬಿದ್ ಆಲಿ, ಸ್ಥಳೀಯ ಸುಧಾಕರ್ ಕೋಟ್ಯಾನ್, ನಿತ್ಯ ವಾಹನ ಸವಾರರು ಹರ್ಷ ವ್ಯಕ್ತಪಡಿಸಿದ್ದು, ಉದಯವಾಣಿ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುರಕ್ಷತಾ ಕ್ರಮ
ಜನಪರ ಬೇಡಿಕೆ ಮತ್ತು ಈ ಭಾಗದ ಅಪಾಯದ ತೀವ್ರತೆಯನ್ನು ಗ್ರಹಿಸಿ ತಾ.ಪಂ. ಸದಸ್ಯರ ನಿಧಿಯಲ್ಲಿ 40 ಸಾವಿರ ರೂ. ಅನುದಾನ ಹೊಂದಿಸಿರುತ್ತೇನೆ. ಅಂದಾಜುಪಟ್ಟಿ ಸಿದ್ಧಪಡಿಸಿ, ಕೂಡಲೇ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರು, ಎಂಜಿನಿಯರ್ ಗಮನಕ್ಕೆ ತಂದು ಕಾಮಗಾರಿಯನ್ನು ಪೂರೈಸಲಾಗಿದೆ. ಆ ಮೂಲಕ ಈ ಪ್ರದೇಶದಲ್ಲಿ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ. ವಾಹನ ಸವಾರರು ನಿರಾಳರಾಗಿ ಜಾಗರೂಕತೆಯಿಂದ ಸಂಚರಿಸಬಹುದು .
– ರಜನಿ ಆರ್. ಅಂಚನ್, ತಾ.ಪಂ. ಸದಸ್ಯೆ
ಅಭಿನಂದನೆ
ಹಲವು ವರ್ಷಗಳಿಂದಲೂ ಇಲ್ಲಿನ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುತ್ತಾ ಬಂದಿದ್ದೇವೆ. ಆದರೆ ಈ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ ಉದಯವಾಣಿಯ ಜನಪರ ವರದಿಯಿಂದ ಎಚ್ಚೆತ್ತು ಸುರಕ್ಷತಾ ಕಾಮಗಾರಿ ನಡೆದಿರುವುದು ಬಹಳಷ್ಟು ಸಂತಸ ತಂದಿದೆ.
– ಆಬಿದ್ ಆಲಿ, ಗ್ರಾಮಸ್ಥ