Advertisement

ಮೋಟರ್‌ ಕೆಟ್ಟರೂ ಕ್ರಮವಿಲ್ಲ: ನೀರಿಗೆ ಅಲೆದಾಟ

09:38 PM Aug 04, 2019 | Lakshmi GovindaRaj |

ಹುಣಸೂರು: ಇಲ್ಲಿನ ಹಾಡಿಯಲ್ಲಿ ಕಳೆದ 15-20 ದಿನಗಳಿಂದ ನೀರಿಲ್ಲದೇ ಆದಿವಾಸಿಗಳು ಪರದಾಡುತ್ತಿದ್ದಾರೆ. ಬೋರ್‌ವೆಲ್‌ನ ಮೋಟರ್‌ ಪಂಪ್‌ ಕೆಟ್ಟು ಹಲವು ದಿನಗಳಾದರೂ ದುರಸ್ತಿಪಡಿಸಿಲ್ಲ. ಹೀಗಾಗಿ ಗಿರಿಜನರು ದೂರದ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರು ತರುವುದೇ ನಿತ್ಯ ಕಾಯಕವಾಗಿದೆ. ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಗಿರಿಜನರು ಅವಲತ್ತುಕೊಂಡಿದ್ದಾರೆ.

Advertisement

ಆದಿವಾಸಿಗಳ ಹಾಡಿಗೆಯಲ್ಲಿ ರಸ್ತೆ-ಚರಂಡಿಗೆ ನಿರ್ಮಿಸಲು ಆದ್ಯತೆ ನೀಡುವ ಜನಪ್ರತಿನಿಧಿಗಳು ದೈನಂದಿನ ಬದುಕಿಗೆ ಅಗತ್ಯವಿರುವ ಕುಡಿಯುವ ನೀರೊದಗಿಸಲು ವಿಫಲರಾಗಿರುವುದು ಇಲ್ಲಿನ ಪರಿಸ್ಥಿತಿ ಕೈಗನ್ನಡಿಯಾಗಿದೆ.

ಕೈಕೊಟ್ಟ ಮೋಟರ್‌: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹೆಜ್ಜೂರು ಹಾಡಿಯ ಗಿರಿಜನರಿಗೆ ನೀರು ಪೂರೈಸುವ ಬೋರ್‌ವೆಲ್‌ ಪಂಪ್‌ ಮೋಟರ್‌ ಸುಟ್ಟು 15 ದಿನ ಕಳೆದಿದ್ದರೂ ದುರಸ್ತಿಪಡಿಸದ‌ ಪರಿಣಾಮ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂ ಕ್ರಮ ಕೈಗೊಂಡಿಲ್ಲ. ದೂರು ನೀಡಿದರೆ ಆಗಾಗ್ಗೆ ವಿದ್ಯುತ್‌ ಸಮಸ್ಯೆಯಿಂದ ಹೀಗಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

ಬತ್ತಿದ ಬೋರ್‌ವೆಲ್‌: ಈ ಹಾಡಿಯಲ್ಲಿ ನೀರು ಪೂರೈಸುತ್ತಿದ್ದ ಎರಡು ಕೈಪಂಪ್‌ ಅಳವಡಿಸಿರುವ ಬೋರ್‌ವೆಲ್‌ಗ‌ಳಲ್ಲೂ ಸಹ ನೀರು ಬರುತ್ತಿಲ್ಲ. ಮತ್ತೂಂದರಲ್ಲಿ 2 ಗಂಟೆಗೊಮ್ಮೆ ಒಂದು ಬಿಂದಿಗೆ ನೀರು ಬರುತ್ತಿದ್ದದೆ. ಪರಿಸ್ಥಿತಿ ಹೀಗಿದ್ದರೂ ಕೆಟ್ಟಿರುವ ಬೋರ್‌ವೆಲ್‌ ದುರಸ್ತಿಪಡಿಸಿಲ್ಲ.

ವಿದ್ಯುತ್‌ ವ್ಯತ್ಯಯ: ಹಾಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ನಿತ್ಯ ಕೂಲಿಮಾಡಿ ಜೀವನ ಮಾಡಬೇಕಾದ ಸ್ಥಿತಿ ಇದೆ. ಇದೀಗ ಕೆಲಸ ಬಿಟ್ಟು ಅಕ್ಕಪಕ್ಕದ ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರು ಹೊತ್ತು ತರುವ ಕಾಯಕ ಮಾಡುವಂತಾಗಿದೆ. ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಿದ್ದರೂ ಈ ಭಾಗದಲ್ಲಿ ಯಾವಾಗಲೂ ವಿದ್ಯುತ್‌ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಕರೆಂಟ್‌ ಇರುವ ವೇಳೆ ನೀರು ಹಿಡಿಯಬೇಕಿದೆ. ಇನ್ನು ಪಂಪ್‌ಸೆಟ್‌ ಹೊಂದಿರುವ ಅಕ್ಕಪಕ್ಕದ ರೈತರು ಮಾನವೀಯತೆ ದೃಷ್ಟಿಯಿಂದ ನೀರು ಕೊಡುತ್ತಿರುವುದರಿಂದ ಹಾಡಿ ಮಂದಿಯ ನೀರಿನ ಸಮಸ್ಯೆ ಅಲ್ಪ ಪರಿಹಾರ ಸಿಕ್ಕಿದೆ.

Advertisement

ನೀರು ಹೊರುವುದೇ ಕಾಯಕ: ಹಾಡಿಯ ಬಹುತೇಕ ಮಂದಿಗೆ ಜಮೀನು ಇಲ್ಲ, ಜೀವನಕ್ಕಾಗಿ ಕೊಡಗಿನ ಕೂಲಿಯನ್ನೇ ಅವಲಂಬಿಸಿದ್ದು, ಬೆಳಗ್ಗೆ ಕೊಡಗಿಗೆ ಹೊರಟರೆ ಬರುವುದು ಮತ್ತೆ ಸಂಜೆಯಾಗುತ್ತದೆ. ಹೀಗಾಗಿ ನೀರು ಹಿಡಿಯುವುದೇ ಈ ಆದಿವಾಸಿಗಳ ನಿತ್ಯದ ಗೋಳಿನ ಕಥೆಯಾಗಿದೆ. ಕೂಡಲೇ ಗ್ರಾಪಂ ಕ್ರಮ ಕೈಗೊಂಡು ಮೋಟರ್‌ ದುರಸ್ತಿಪಡಿಸಿ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗಿರಿಜನರು ಆಗ್ರಹಿಸಿದ್ದಾರೆ.

ನಮ್ಮ ಹಾಡಿಯ ಪಂಪ್‌ಸೆಟ್‌ ಮೋಟರ್‌ ಆಗಾಗ್ಗೆ ಸುಟ್ಟು ಹೋಗುತ್ತಿರುತ್ತದೆ. ಸಕಾಲದಲ್ಲಿ ಸರಿಪಡಿಸಲ್ಲ, ಹೀಗಾಗಿ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳನ್ನು ಅವಲಂಬಿಸಬೇಕಿದೆ. ನಾವು ಆದಿವಾಸಿಗಳೆಂಬ ಕಾರಣಕ್ಕೆ ನಿರ್ಲಕ್ಷ್ಯವಹಿಸುತ್ತಾರೆ. ಈಗಲಾದರೂ ಅಧಿಕಾರಿಗಳು ಹಾಡಿ ಸಮಸ್ಯೆಗೆ ಸ್ಪಂದಿಸಲಿ.
-ಸುಧಾ, ಚಿಕ್ಕಹೆಜ್ಜೂರು ಹಾಡಿ

ಈ ಹಾಡಿಯು ನಾಗರಹೊಳೆ ಉದ್ಯಾನದಂಚಿನಲ್ಲಿದ್ದು, ಪ್ರತಿ ಎರಡು- ಮೂರು ತಿಂಗಳಿಗೊಮ್ಮೆ ಮೋಟರ್‌ ಸುಟ್ಟು ಹೋಗುತ್ತಿದೆ. ದುರಸ್ತಿಗೆ 15-20 ದಿನ ಕಾಯಬೇಕಿದೆ. ಇಲ್ಲಿನ ಎರಡು ಬೋರ್‌ವೆಲ್‌ಗ‌ಳಲ್ಲೂ ನೀರು ಬರಲ್ಲ, ಪಕ್ಕದ ಮುದಗನೂರು ಹೊಸ ಕೆರೆಯಲ್ಲೂ ನೀರಿಲ್ಲ, ಹಾಡಿಯ ಮಹಿಳೆಯರು ಕೆಲಸ ಬಿಟ್ಟು ನೀರಿಗಾಗಿಯೇ ಅಲೆದಾಡುತ್ತಾರೆ. ಬಟ್ಟೆ ಒಗೆಯಲು, ಸ್ನಾನ ಮಾಡಲು ನೀರಿಲ್ಲ. ಇದು ನಿತ್ಯದ ಗೋಳಾಗಿದ್ದು, ಸರಿಪಡಿಸುವವರು ಯಾರೂ ಇಲ್ಲ.
-ದೇವರಾಜ್‌, ಸಾಮಾಜಿಕ ಕಾರ್ಯಕರ್ತ, ಚಿಕ್ಕಹೆಜ್ಜೂರು

ಹಾಡಿಯ ಪಂಪ್‌ಸೆಟ್‌ಗೆ ನೀಡಿರುವ ವಿದ್ಯುತ್‌ ಲೈನ್‌ನಲ್ಲಿ ಆಗಾಗ್ಗೆ ಹೆಚ್ಚು ವಿದ್ಯುತ್‌ ಪ್ರವಹಿಸುವುದರಿಂದ ಮೋಟರ್‌ ಸುಟ್ಟು ಹೋಗುತ್ತಿದೆ. ಮೋಟರ್‌ ದುರಸ್ತಿ ಮಾಡಿಸಿ ನೀರು ನೀಡಲು ಕ್ರಮವಹಿಸಲಾಗುವುದು.
-ಶಿವಣ್ಣ. ದೊಡ್ಡ ಹೆಜ್ಜೂರು ಗ್ರಾಪಂ ಪಿಡಿಒ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next