Advertisement

ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿ

03:05 AM Aug 02, 2019 | mahesh |

ಹಲವಾರು ಉತ್ತಮ ಅಂಶಗಳನ್ನು ಒಳಗೊಂಡಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಮಂಜೂರು ಗೊಂಡಿ ರುವುದು ಸ್ವಾಗತಾರ್ಹ ಬೆಳವಣಿಗೆ. ಸಾರಿಗೆ ವ್ಯವಸ್ಥೆಯಲ್ಲಿ, ನಿರ್ದಿಷ್ಟವಾಗಿ ಹೇಳುವುದಾದರೆ ಸಂಚಾರಿ ನಿಯಮಗಳ ಪಾಲನೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಈ ಮಸೂದೆಯಿಂದಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಒಳಿತಾಗಲಿದೆ.

Advertisement

ಹೀಗೊಂದು ಸಮಗ್ರ ಮಸೂದೆಯ ಅಗತ್ಯ ಬಹಳ ಹಿಂದೆಯೇ ಕಂಡುಬಂದಿದ್ದರೂ ರಾಜಕೀಯ ಒಮ್ಮತ ಮೂಡಿ ಅದು ಮಂಜೂರಾಗಲು ಇಷ್ಟು ಸಮಯ ಹಿಡಿಯಿತು. ಎನ್‌ಡಿಎ ಸರಕಾರ ಹಿಂದಿನ ಅವಧಿಯಲ್ಲೇ ಈ ಮಸೂದೆಯನ್ನು ಸಿದ್ಧಪಡಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿದ್ದ ಕಾರಣ ಅದು ಮಂಜೂರಾಗಿರಲಿಲ್ಲ. ಇನ್ನೀಗ ರಾಷ್ಟ್ರಪತಿ ಅಂಕಿತ ಬಿದ್ದ ಕೂಡಲೇ ಅದು ಕಾನೂನು ರೂಪದಲ್ಲಿ ಅನುಷ್ಠಾನಗೊಳ್ಳಲಿದೆ.

ಹೊಸ ಮಸೂದೆಯಲ್ಲಿ ರಸ್ತೆ ಸುರಕ್ಷತೆಗೆ ಗರಿಷ್ಠ ಆದ್ಯತೆಯನ್ನು ನೀಡಲಾಗಿದೆ. ಸಾಮಾನ್ಯ ಎಂಬಂತೆ ಉಲ್ಲಂಘನೆಯಾಗುತ್ತಿರುವ ಮಾಮೂಲು ರಸ್ತೆ ನಿಯಮಗಳತ್ತಲೂ ಮಸೂದೆಯಲ್ಲಿ ಗಮನ ಹರಿಸಲಾಗಿದೆ ಎನ್ನುವುದು ಮೆಚ್ಚತಕ್ಕ ಅಂಶ. ನಮ್ಮ ದೇಶದ ವೈಶಿಷ್ಟ್ಯ ಎಂದರೆ ಇಲ್ಲಿ ನಿಯಮಗಳಿರುವುದೇ ಮುರಿಯಲು ಎಂಬ ಸಾರ್ವತ್ರಿಕ ಭಾವನೆ ಜನರಲ್ಲಿರುವುದು. ಅದರಲ್ಲೂ ನಿಯಮ ಉಲ್ಲಂಘನೆಯಲ್ಲಿ ರಸ್ತೆ ಸಂಚಾರ ನಿಯಮಗಳಿಗೆ ಅಗ್ರಸ್ಥಾನ. ಮೊಪೆಡ್‌ನ‌ಂಥ ದ್ವಿಚಕ್ರ ವಾಹನ ಸವಾರರಿಂದ ಹಿಡಿದು ಬಿಎಂಡಬ್ಲ್ಯು ಕಾರಿನಲ್ಲಿ ಹೋಗುವವರ ತನಕ ನಿಯಮ ಮುರಿಯಲು ಸಿಗುವ ಒಂದು ಸಣ್ಣ ಅವಕಾಶವನ್ನು ಬಿಡುವುದಿಲ್ಲ. ಒಂದು ಕೈಯಲ್ಲಿ ಮೋಟಾರ್‌ ಬೈಕಿನ ಹ್ಯಾಂಡಲ್ ಹಿಡಿದು ಇನ್ನೊಂದು ಕೈಯಲ್ಲಿ ಮೊಬೈಲ್ ಕಿವಿಗಾನಿಸಿಕೊಂಡ ಗಂಡ- ಹೆಂಡತಿ, ಐದು ಮಕ್ಕಳು, ಒಂದಷ್ಟು ಸಾಮಾನು ಸರಂಜಾಮುಗಳ ಜತೆಗೆ ಸವಾರಿ ಮಾಡುವಂಥ ದೃಶ್ಯಗಳನ್ನು ಭಾರತದ ರಸ್ತೆಗಳಲ್ಲಿ ಮಾತ್ರ ಕಾಣಲು ಸಾಧ್ಯ ಎನ್ನುವುದು ಕುಚೋದ್ಯದಂತೆ ಕಂಡರೂ ಇದರಲ್ಲಿ ವಾಸ್ತವವಿದೆ. ಈ ಮಾದರಿಯ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲ ಕಠಿನ ಅಂಶಗಳು ಹೊಸ ಕಾನೂನಿನಲ್ಲಿ ಇವೆ. ದಂಡಗಳ ಮೊತ್ತವನ್ನು ಹತ್ತುಪಟ್ಟು ಹೆಚ್ಚಿಸಿರುವುದು ತುಸು ಅತಿಯಾಯಿತು ಎಂಬಂತೆ ಕಂಡುಬರುತ್ತಿದ್ದರೂ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಮಾಣದ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿತ್ತು. ಭಾರೀ ಮೊತ್ತದ ದಂಡ ಕಕ್ಕ ಬೇಕಾಗುತ್ತದೆ ಎಂಬ ಭಯದಿಂದಲಾದರೂ ಜನರು ಸಂಚಾರ ನಿಯಮಗಳನ್ನು ಪಾಲಿಸಿಯಾರು ಎಂಬ ಆಶಯ ಇದರ ಹಿಂದೆ ಇದೆ.

ವಾಹನಗಳ ದೋಷದಿಂದ ಅಪಘಾತ ಸಂಭವಿಸಿದರೆ ವಾಹನ ತಯಾರಿಸಿದ ಕಂಪೆನಿಗಳಿಗೆ 100 ಕೋ. ರೂ. ದಂಡ ವಿಧಿಸುವುದು, ಪರಿಹಾರ ಮೊತ್ತದಲ್ಲಿ ಹೆಚ್ಚಳ, ರಸ್ತೆ ಬಳಕೆದಾರರಿಗೆ ವಿಮೆ ಕಡ್ಡಾಯ, ಅಪಘಾತ ಗಾಯಾಳುಗಳಿಗೆ ಒಂದು ತಾಸಿನೊಳಗೆ ಉಚಿತ ಚಿಕಿತ್ಸೆಯಂಥ ಕ್ರಾಂತಿಕಾರಕ ನಿಯಮಗಳು ಶ್ಲಾಘನೀಯ. ಚಾಲನೆ ತರಬೇತಿಗೆ ವಿದ್ಯಾರ್ಹತೆ ಬೇಕಿಲ್ಲ ಎನ್ನುವ ನಿಯಮದಿ ಂದ ಕೌಶಲವನ್ನೇ ಹೆಚ್ಚು ಬೇಡುವ ಚಾಲಕ ವೃತ್ತಿಗೆ ಅನುಕೂಲವಾಗಲಿದ್ದರೂ ವಾಹನ ಚಲಾಯಿಸುವವನಿಗೆ ಕನಿಷ್ಠ ಸೂಚನಾ ಫ‌ಲಕ ಮತ್ತು ನಿಯಮಗಳನ್ನು ತಿಳಿದುಕೊಳ್ಳುವಷ್ಟಾದರೂ ಓದು ಬರಹ ಇರುವುದು ಅಗತ್ಯ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಗೆ ಸುಮಾರು ಒಂದೂವರೆ ಲಕ್ಷ ಪ್ರಾಣಗಳು ಬಲಿಯಾಗುತ್ತಿವೆ ಮತ್ತು ಐದು ಲಕ್ಷದಷ್ಟು ಜನರು ಅಂಗವಿಕಲರಾಗುತ್ತಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಅಂಕಿಅಂಶವೇ ರಸ್ತೆ ಸುರಕ್ಷತೆಯ ನಿಯಮಗಳನ್ನು ನಾವೆಷ್ಟು ಹಗುರವಾಗಿ ಪರಿಗಣಿಸಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಹೇಳುತ್ತದೆ.

ಆದರೆ ಹೊಸ ನಿಯಮ ಪೊಲೀಸರಿಗೆ ಚಾಲಕರನ್ನು ಶೋಷಿಸುವ ಅಸ್ತ್ರವಾಗಿ ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಅಪರಾಧವನ್ನು ದಾಖಲಿಸದೆಯೇ ದಂಡ ಹಾಕುವುದು, ರಸೀದಿ ನೀಡದೆ ಹಣ ವಸೂಲು ಮಾಡುವಂಥ ಅಭ್ಯಾಸಗಳಿಗೆ ಹೊಸ ನಿಯಮ ಎಡೆಮಾಡಿಕೊಡಬಾರದು. ಅಂತೆಯೇ ಅಪಘಾತಗಳಿಗೆ ಹೆಚ್ಚು ಕಾರಣವಾಗುವ ಅವೈಜ್ಞಾನಿಕ ರಸ್ತೆ ವಿಭಾಜಕಗಳು, ಕಳಪೆ ಗುಣಮಟ್ಟದ ರಸ್ತೆಗಳತ್ತಲೂ ತುರ್ತಾಗಿ ಗಮನ ಹರಿಸಬೇಕಿದೆ. ಹೊಸ ನಿಯಮದಲ್ಲಿ ಪಾದಚಾರಿಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಒಂದು ಲೋಪ. ಪಾದಚಾರಿಗಳು ಮೋಟಾರು ವಾಹನ ಕಾಯಿದೆ ವ್ಯಾಪ್ತಿಗೊಳಪಡುವುದಿಲ್ಲ, ಆದರೆ ರಸ್ತೆ ಬಳಕೆದಾರರಲ್ಲಿ ಅವರೂ ಸೇರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next