Advertisement

ಮೋಟಾರು ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಾಧ್ಯತೆ

12:27 PM Jun 27, 2018 | Team Udayavani |

ಮೈಸೂರು: ವಾಹನ ಚಾಲಕರ ಅನುಕೂಲಕ್ಕಾಗಿ ರೂಪಿಸಲಾಗಿರುವ ಮೋಟಾರು ಕಾಯ್ದೆ ತಿದ್ದುಪಡಿ ಮಸೂದೆ ಮುಂದಿನ ಚಳಿಗಾಲದ ಅಧಿವೇಶನದ ವೇಳೆ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಲಿದೆ ಎಂದು ಕೆ.ಆರ್‌. ಕ್ಷೇತ್ರದ ಶಾಸಕ ರಾಮದಾಸ್‌ ವಿಶ್ವಾಸ ವ್ಯಕ್ತಪಡಿಸಿದರು. 

Advertisement

ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ 7ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬ್ರಿಟಿಷರ ಕಾಲದ ಮೋಟಾರು ವಾಹನ ಕಾಯ್ದೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿತ್ತು.

ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡು ಎರಡೂವರೆ ವರ್ಷಗಳಾಗಿದ್ದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳು ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡುವಂತೆ ರಾಜ್ಯದ ಎಲ್ಲ ಸಂಸದರನ್ನು ಮನವಿ ಮಾಡಿದ್ದು, ಅದರಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲೂ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರವಾಗುವ ವಿಶ್ವಾಸವಿದೆ ಎಂದರು.

ಮೋದಿಕೇರ್‌ ಯೋಜನೆ: ದೇಶದಲ್ಲಿ ಆಟೋ ಚಾಲಕರು ಪ್ರವಾಸಿ ವಾಹನಗಳ ಚಾಲಕರು ಫ‌ುಟ್‌ಪಾತ್‌ ವ್ಯಾಪಾರಿಗಳು ಸೇರಿದಂತೆ ಅಂದಾಜು 48 ಕೋಟಿ ಶ್ರಮಜೀವಿಗಳಿದ್ದಾರೆ. ಈ ಎಲ್ಲಾ ಅಸಂಘಟಿತ ವಲಯಗಳ ಜನರ ಆರೋಗ್ಯ ಸುಧಾರಣೆಗೆ ಅನುಕೂಲ ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ.

ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ “ಮೋದಿಕೇರ್‌’ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದು, ಇದಕ್ಕೆ ದೇಶದ ಎಲ್ಲಾ ರಾಜ್ಯಗಳು ಒಪ್ಪಿಗೆ ನೀಡಿವೆ.ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವೇ 1,200 ಕೋಟಿ ರೂ.ಗಳನ್ನು ಪಾವತಿಸಲಿದ್ದು ರಾಜ್ಯ ಸರ್ಕಾರಗಳು ಕೇವಲ ಯೋಜನೆಯನ್ನು ಅರ್ಹ ಫ‌ಲಾನುಭವಿಗಳಿಗೆ ವಿತರಿಸಬೇಕಿದೆ. 

Advertisement

ಆದರೂ ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಇದಕ್ಕೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಮೋದಿಕೇರ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಪರ್ಮಿಟ್‌ ಹೊಂದಿರುವ ವಾಹನ ಚಾಲಕರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರತಿ 25 ಕಿ.ಮೀ.ಗೆ ಒಂದು ತಂಗುದಾಣ ನಿರ್ಮಿಸಲು ಪ್ರಧಾನ ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ದೊಡ್ಡ ಜವಾಬ್ದಾರಿ: ಮೈಸೂರು ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರಿಗೆ ನಮ್ಮ ಕಲೆ ಸಂಸ್ಕೃತಿ ಇತಿಹಾಸವನ್ನು ಪರಿಚಯ ಮಾಡಿಕೊಡುವ ಪ್ರವಾಸಿ ವಾಹನಗಳ ಚಾಲಕರು ಪ್ರವಾಸೋದ್ಯಮದ ರಾಯಭಾರಿಗಳಾಗಿ ಕೆಲಸ ಮಾಡುತ್ತಾರೆ.

ಯಾವುದೇ ಸ್ಥಳದ ಸಂಸ್ಕೃತಿ ಹಾಗೂ ಜನರ ಮನಸ್ಥಿತಿ ಏನೆಂಬುದು ಪ್ರವಾಸಿ ವಾಹನ ಚಾಲಕರ ನಡವಳಿಕೆಯಿಂದ ಗೊತ್ತಾಗಲಿದೆ ಹೀಗಾಗಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯ ಮಾಡಿಸಿ ಅವರ ಪ್ರೀತಿ ವಿಶ್ವಾಸ ಗಳಿಸುವ ದೊಡ್ಡ ಜವಾಬ್ದಾರಿ ಪ್ರವಾಸಿ ವಾಹನ ಚಾಲಕರ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕರಾದ ರಾಮದಾಸ್‌ ಹಾಗೂ ನಾಗೇಂದ್ರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ$ಪ್ರಶಾಂತ್‌, ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಜಯಕುಮಾರ್‌, ನಾಸಿರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next