Advertisement

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

03:04 PM Jul 16, 2023 | Team Udayavani |

ಆತ್ಮೀಯರೂ, ಕುಟುಂಬ ಸ್ನೇಹಿತರೂ ಆಗಿರುವ ಪ್ರವೀಣ್‌- ಸಾರಿಕಾ ಗೋಡ್ಖಿಂಡಿ ದಂಪತಿ ಇತ್ತೀಚೆಗೊಮ್ಮೆ ಫೋನ್‌ ಮಾಡಿ ಹೇಳಿದರು: “ಇಲ್ಲೊಬ್ಬರು ವಿಶಿಷ್ಟ ವ್ಯಕ್ತಿ ಇದ್ದಾರೆ. ವೇಣುಗೋಪಾಲ್‌ ಅಂತ. ಅವರ ಕಥೆ ನೂರಾರು ಮಂದಿಗೆ ಸ್ಪೂರ್ತಿ ಆಗುವಂಥದು ಅನ್ನಿಸ್ತದೆ. ಒಮ್ಮೆ ಭೇಟಿಯಾಗಬಹುದಾ?’

Advertisement

ಗೋಡ್ಖಿಂಡಿ ದಂಪತಿಯ ಮಾತುಗಳಲ್ಲಿ ಉತ್ಪ್ರೇಕ್ಷೆ ಇರಬಹುದಾ ಎಂಬ ಸಣ್ಣ ಅನುಮಾನವನ್ನು ಜೊತೆಗಿಟ್ಟುಕೊಂಡೇ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ್ದಾಯಿತು. ಆಗ ಗೊತ್ತಾದದ್ದು: ಈತ ಕ್ಯಾನ್ಸರ್‌ ಗೆದ್ದವರು. ಆ ಹೋರಾಟದಲ್ಲಿ ಕಾಲು ಕಳೆದುಕೊಂಡರು. ಕಾಲಿಲ್ಲ ಎಂದು ತಿಳಿದಮೇಲೂ ಸವಾಲುಗಳ ಎದುರು ನಿಂತು ತೊಡೆ ತಟ್ಟಿದವರು. ಆಕಸ್ಮಿಕವಾಗಿ ಆಟದ ಅಂಗಳಕ್ಕಿಳಿದು, ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆಲ್ಲುತ್ತಾ ಹೋದವರು. ಅನುಮಾನವೇ ಬೇಡ; ಈತ ಸೋಲದ ಸರದಾರ. ಸೋಲಿಲ್ಲದ ಸರದಾರ!

ಅವರ ಎದುರು ಕೂತು, ಇದೆಲ್ಲಾ ಹೇಗಾಯ್ತು ಸಾರ್‌, ಎಂದು ಕೇಳಿದೆ. ಅವರು ಹೇಳುತ್ತಾ ಹೋದರು…

“ನಮ್ಮೂರು ಚಿಕ್ಕಬಳ್ಳಾಪುರ. ನಮ್ಮ ತಂದೆ ಟಿ.ಬಿ. ಜಯಚಂದ್ರ, ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಆಗಿದ್ದರು. ಅಮ್ಮ ಗೃಹಿಣಿ. ತಮ್ಮ ಸಾಫ್ಟ್‌ ವೇರ್‌ ಇಂಜಿನಿಯರ್‌. ಎಂಬಿಎ ಪದವಿಯ ನಂತರ ನಾನು ಬೆಂಗಳೂರಲ್ಲಿ ನೆಲೆನಿಂತೆ. 4000 ನೌಕರರಿದ್ದ ದೊಡ್ಡ ಕಂಪನಿಯಲ್ಲಿ ಎಚ್‌ಆರ್‌ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೆ. ಒಂದೇ ಮಾತಲ್ಲಿ ಹೇಳಬೇಕೆಂದರೆ-ಕಷ್ಟವೆಂದರೆ ಏನೆಂದೇ ಗೊತ್ತಿಲ್ಲದ ಸುಖೀ ಕುಟುಂಬ ನಮ್ಮದಾಗಿತ್ತು. ಆದರೆ ಆನಂತರದಲ್ಲಿ ನಡೆದದ್ದು ವಿಧಿಯ ಆಟ, ನನ್ನ ಹೋರಾಟ!

2016ರಲ್ಲಿ ನನ್ನ ಬಲಗಾಲಿನಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಳ್ತು. ನಾಲ್ಕು ದಿನದ ನಂತರ ಪ್ಯಾಂಟ್‌ ಹಾಕಿಕೊಳ್ಳಲೂ ಆಗದಂತೆ ಕಾಲು ಊದಿಕೊಂಡಿತು. ಸರ್ಜನ್‌ ಆಗಿದ್ದ ಗೆಳೆಯನೊಬ್ಬ, “ಮಣಿಪಾಲ ಆಸ್ಪತ್ರೆಗೆ ಹೋಗಿ ಚೆಕ್‌ ಮಾಡಿಸು’ ಅಂದ. ಅಲ್ಲಿ ನಾಲ್ಕಾರು ಬಗೆಯ ಚೆಕಪ್‌ ಮಾಡಿದ್ರೂ ಏನೂ ಗೊತ್ತಾಗಲಿಲ್ಲ! ಕಡೆಗೆ ಆಂಕೋಲಜಿ ವಿಭಾಗದಲ್ಲಿ ಟೆಸ್ಟ್ ಮಾಡಿಸಿದ್ದೂ ಆಯಿತು. ಅಲ್ಲಿದ್ದ ಡಾಕ್ಟರ್ಸ್‌ ಮತ್ತು ನನ್ನ ನಡುವೆ ನಡೆದ ಮಾತುಕತೆ ಹೀಗಿತ್ತು: “ಮದುವೆ ಆಗಿದೆಯಾ?’ “ಆಗಿದೆ ಸರ್‌’ “ಮಕ್ಕಳಿದ್ದಾರಾ?’ “ಹೌದು ಸರ್‌. ಇಬ್ಬರು ಹೆಣ್ಣುಮಕ್ಕಳು’. “ಎಷ್ಟು ವಯಸ್ಸು ಅವರಿಗೆ?’ “ಒಬ್ಬಳಿಗೆ 11ವರ್ಷ, ಇನ್ನೊಬ್ಬಳಿಗೆ ಏಳು ವರ್ಷ.’ “ಹೆಂಡತಿ ಮಕ್ಕಳಲ್ಲದೆ ಮನೆಯಲ್ಲಿ ಮತ್ತೆ ಯಾರಿದ್ದಾರೆ?’ ಈ ಪ್ರಶ್ನೆಗೆ ನಾನು ಉತ್ತರಿಸಲಿಲ್ಲ. ಬದಲಾಗಿ- “ಸಾರ್‌, ಯಾಕೆ ಈ ಥರದ ಪ್ರಶ್ನೆನೆಲ್ಲಾ ಕೇಳ್ತಾ ಇದ್ದೀರಾ? ಅಂದೆ. ಆಗ ವೈದ್ಯರು ಹೇಳಿದರು: “ನಿಮಗೆ ಕ್ಯಾನ್ಸರ್‌ ಇದೆ. ಅದರಿಂದ ಪಾರಾಗೋದಕ್ಕೆ ಬಹಳ ಎಫರ್ಟ್‌ ಹಾಕಬೇಕಾಗುತ್ತೆ…’‌

Advertisement

ನನಗಿರುವುದು ಯಾವ ಬಗೆಯ ಕ್ಯಾನ್ಸರ್‌ ಅಂತ ತಿಳಿಯಲು ಮೈಕ್ರೋಸ್ಕೋಪ್‌ ಬಯಾಪ್ಸಿ ಮಾಡಿದ್ರು. ಈ ಆಪರೇಷನ್‌ ಮಾಡುವ ತಂಡದಲ್ಲಿ ನನ್ನ ಫ್ರೆಂಡ್‌ ಕೂಡ ಇದ್ದ. ನಂತರ- “10 ದಿನ ಬಿಟ್ಟು ಇನ್ನೊಂದು ಸರ್ಜರಿ ಮಾಡ್ತೇವೆ. ಈಗ ಮನೆಗೆ ಹೋಗಿ’ ಅಂದ್ರು. 3 ದಿನದ ನಂತರ ಕಾಲು ಮತ್ತೆ ಊದಿಕೊಳ್ತು. ಹೆಜ್ಜೆ ಇಡಲಿಕ್ಕೂ ಆಗುತ್ತಿರಲಿಲ್ಲ. ಮತ್ತೆ ಆಸ್ಪತ್ರೆ ಸೇರಿ ಚೆಕ್‌ ಮಾಡಿಸಿದಾಗ-“ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗಿ ಊತ ಕಾಣಿಸಿಕೊಂಡಿದೆ’ ಅಂದರು. ಅದನ್ನು ಸರಿಪಡಿಸಲು ಒಂದು ಆಪರೇಷನ್‌ ಆಯ್ತು. ಆನಂತರದಲ್ಲಿ ಮತ್ತೆ ಮತ್ತೆ ಒಂದೊಂದೇ ತೊಂದರೆಗಳು ಕಾಣಿಸಿಕೊಂಡು, ಅರ್ಧ ದಿನ ಜನರಲ್‌ ವಾರ್ಡ್‌, ಇನ್ನರ್ಧ ದಿನ ಐಸಿಯು-ಅನ್ನುವಂತಾಯ್ತು. 6 ದಿನಗಳ ಅವಧಿಯಲ್ಲಿ ನನ್ನ ಕಾಲಿಗೆ 5 ಆಪರೇಷನ್‌ ಮಾಡಿದರು. ಮರುದಿನ, ವೈದ್ಯರುಗಳ ಜೊತೆ ನನ್ನ ಪತ್ನಿಯೂ ಬೆಡ್‌ ಬಳಿ ಬಂದಳು. ಎಲ್ಲರೂ ತಲೆ ತಗ್ಗಿಸಿಕೊಂಡು ನಿಂತಿದ್ದರು. ಒಬ್ಬರೂ ಮಾತಾಡುತ್ತಿಲ್ಲ. ಎಲ್ರೂ ಸೈಲೆಂಟ್‌ ಆಗಿದ್ದೀರಲ್ಲ ಯಾಕೆ? ಏನಾಯ್ತು? ಅಂತ ಕೇಳಿದಾಗ- ನಿಮಗೆ ಇರೋದು ವಿರಳ ರೀತಿಯ ಕ್ಯಾನ್ಸರ್‌. ಅದರ ಕಾರಣದಿಂದಲೇ ಮಾಂಸಖಂಡ ಸತ್ತುಹೋಗಿ, ಆ ಭಾಗಕ್ಕೆ ರಕ್ತಸಂಚಾರ ಆಗದೆ, ಗ್ಯಾಂಗ್ರಿನ್‌ ಆಗಿಬಿಟ್ಟಿದೆ. ಈಗ ನಿಮ್ಮ ಜೀವ ಉಳಿಯಬೇಕು ಅಂದ್ರೆ, ಬಲಗಾಲು ಕತ್ತರಿಸಬೇಕು ಅಂದರು! ಆ ಮಾತು ಕೇಳುತ್ತಿದ್ದಂತೆ, ನಿಂತ ನೆಲ ಕುಸಿದಂತಾಯ್ತು.

ಟಾಲ್‌, ಸ್ವೀಟ್‌ ಅಂಡ್‌ ಹ್ಯಾಂಡ್ಸಮ್‌ ಎಂದು ಎಲ್ಲರಿಂದ ಕರೆಸಿಕೊಂಡಿದ್ದವ ನಾನು. ಎಷ್ಟೋ ಜನ ನನ್ನನ್ನು ಮಿಲಿಟರಿ ಆಫೀಸರ್‌ ಅಂದುಕೊಂಡಿದ್ರು. ನನ್ನ ಫಿಟ್ನೆಸ್‌ ಹಾಗಿತ್ತು. ಆದರೆ ಈಗ ಕ್ಯಾನ್ಸರ್‌ನ ಕಾರಣಕ್ಕೆ ಕಾಲು ಕಳೆದುಕೊಳ್ಳುವ ಹಂತ ತಲುಪಿದ್ದೆ. ಆಪರೇಷನ್‌ಗೂ ಮೊದಲು, ನನಗೆ ಚಿಕಿತ್ಸೆ ನೀಡುವ ವೈದ್ಯರ ತಂಡದಲ್ಲಿದ್ದ ಡಾ. ರಾಮಚಂದ್ರ ಅನ್ನುವವರು, ನಿನಗೆ ಈ ಥರ ಆಗಬಾರದಿತ್ತು ಕಣಪ್ಪ ಅನ್ನುತ್ತಾ ನನ್ನನ್ನು ತಬ್ಬಿಕೊಂಡು ಅತ್ತೇಬಿಟ್ಟರು. ಆಗ ನನಗೆ- “ಒಹ್‌, ಈ ಆಪರೇಷನ್‌ ನಂತರ ನಾನು ಸತ್ತುಹೋಗ್ತೀನೆ ಅನ್ನಿಸ್ತದೆ. ಅದಕ್ಕೇ ಈ ಡಾಕ್ಟರ್‌ ಅಳುತ್ತಿದ್ದಾರೆ’ ಅನ್ನಿಸಿಬಿಡ್ತು. ಆ ಕ್ಷಣದಲ್ಲೇ, ನಾನು ಸಾವನ್ನು ಸ್ವೀಕರಿಸಲು ಸಿದ್ಧನಾದೆ. ಹೆಚ್ಚಿನ ಸಾಲವಿಲ್ಲ. ಆಸ್ಪತ್ರೆಯ ಖರ್ಚನ್ನು ಇನ್ಶೂರೆನ್ಸ್‌ ನಿಂದ ತುಂಬಬಹುದು. ಹೆಂಡತಿಗೆ ನೌಕರಿಯಿದೆ. ಮಕ್ಕಳು ದೊಡ್ಡವರಾಗಿದ್ದಾರೆ. ಕುಟುಂಬದ ಎಲ್ಲರ ಜೊತೆ ನಾನು ಸಾಕಷ್ಟು ದಿನಗಳನ್ನು ಕಳೆದಿದ್ದೇನೆ. ಸೋ, ಒಂದುವೇಳೆ ನಾನು ಸತ್ತರೂ ಯಾರಿಗೂ ಅಂಥಾ ದೊಡ್ಡ ಲಾಸ್‌ ಆಗಲ್ಲ!- ಹೀಗೆಲ್ಲಾ ಯೋಚಿಸುತ್ತಲೇ ರಾತ್ರಿ ಕಳೆದೆ.

ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆ ಆಪರೇಷನ್‌ ಇತ್ತು. “ಸಾರ್‌, ಮಂಡಿಯ ತನಕ ಕಟ್‌ ಮಾಡ್ತೀರೋ ಅಥವಾ ತೊಡೆಯವರೆಗೂ ಕಟ್‌ ಮಾಡ್ತೀರೋ?’ ಅಂತ ವೈದ್ಯರಿಗೆ ಕೇಳಿದೆ. ಅವರು- “ಆಪರೇಷನ್‌ ಥಿಯೇಟರ್‌ಲಿ ಅದು ಗೊತ್ತಾಗುತ್ತೆ’ ಅಂದರು. ಇದೇ ಕಡೆಯ ಸಲ ಅನ್ನುವಂತೆ ಎಲ್ಲರನ್ನೂ ನೆನಪಿಸಿಕೊಂಡೆ. ಎಲ್ಲವನ್ನೂ ಕಣ್ತುಂಬಿಕೊಂಡೆ. ನಂತರ ನನಗೆ ಅನಸ್ತೇಶಿಯಾ ಇಂಜೆಕ್ಷನ್‌ ಕೊಟ್ಟು ಆಪರೇಷನ್‌ ಶುರು ಮಾಡಿದ್ರು. ನನ್ನ ಮುಖದ ಮುಂದೆ ಒಂದು ಸ್ಕ್ರೀನ್‌ ಕಟ್ಟಿದ್ದರು. ಅದರಲ್ಲಿ, ಆಪರೇಷನ್‌ ಆಗುವ ರೀತಿ ಕಾಣಿಸ್ತಾ ಇತ್ತು. ನೋವಿನ ಅನುಭವ ಆಗುತ್ತಿರಲಿಲ್ಲ. ಆದರೆ ಪ್ರಜ್ಞೆ ಇತ್ತು. ನನ್ನ ಕಾಲು, ನರಗಳನ್ನು ಕತ್ತರಿಸುವುದು, ರಕ್ತನಾಳಗಳನ್ನು ಬೇರ್ಪಡಿಸುವುದನ್ನೆಲ್ಲಾ ನೋಡಿದೆ. ಜಿಸಿಬಿಯಿಂದ ರಸ್ತೆಯಲ್ಲಿ ಡ್ರಿಲ್‌ ಮಾಡಿದಾಗ ನೆಲ ಅದುರುತ್ತಲ್ಲ; ಹಾಗೆ ಅನ್ನಿಸ್ತಿತ್ತು. ಒಂದು ಹಂತದಲ್ಲಿ – “ಸಾರ್‌, ನನ್ನ ಕಾಲನ್ನು ನೀವು ತುಂಬಾ ಅಲ್ಲಾಡಿಸ್ತಾ ಇದ್ದೀರಾ’ ಅಂದುಬಿಟ್ಟೆ. ನನ್ನ ಮಾತು ಕೇಳಿ ಬೆಚ್ಚಿದ ವೈದ್ಯರು- “ಓಹ್‌, ಇವರಿಗೆ ಕೊಟ್ಟಿರುವ ಅನಸ್ತೇಶಿಯಾ ಸಾಲದು ಅನ್ನಿಸ್ತದೆ. ಇನ್ನೊಂದು ಇಂಜೆಕ್ಷನ್‌ ಕೊಡೋದಾ?’ ಅಂತ ಮಾತಾಡಿಕೊಂಡರು. ಆಮೇಲಿನ ಕಥೆ ಕೇಳಿ. ಆಪರೇಷನ್‌ ಮೂಲಕ ತೆಗೆದಿದ್ದ, ತೊಡೆಯ ಭಾಗದವರೆಗಿನ ಕಾಲನ್ನು ಟೇಬಲ್‌ ಮೇಲೆ ಇಟ್ಟಿದ್ರು. ನಾನು-“ಸಾರ್‌, ಈ ಕಾಲಿನಿಂದ ನಾನು ಸಾಕಷ್ಟು ಆಟವಾಡಿದ್ದೇನೆ. ಇದರ ಜೊತೆಗೆ ನನ್ನಲ್ಲಿ ಅಸಂಖ್ಯ ನೆನಪುಗಳಿವೆ. ಏನೋ ಸೆಂಟಿಮೆಂಟ್‌. ಅದನ್ನು ಕೊಡ್ತೀರಾ? ಮನೆಗೆ ತಗೊಂಡು ಹೋಗಿ ಇಟ್ಕೊಳ್ತೇನೆ…’ ಅಂತ ಕೇಳಿಬಿಟ್ಟೆ. “ಇಲ್ಲ ಇಲ್ಲ, ನಿಯಮಗಳ ಪ್ರಕಾರ ಹಾಗೆಲ್ಲಾ ಕೊಡಲು ಆಗಲ್ ಅಂದರು.

ಇಷ್ಟು ದಿನ ಚಿಗರೆಯಂತೆ ಜಿಗಿಯುತ್ತಿದ್ದೆ. ವೇಗವಾಗಿ ನಡೆಯುತ್ತಿದ್ದೆ. ಆದರೆ ಈಗ ಒಂದು ಕಾಲೇ ಇಲ್ಲ. ಮನೆಯಲ್ಲಿ ಮೆಟ್ಟಿಲು ಹತ್ತುವುದು ಹೇಗೆ? ಹೊರಗೆ ಹೋಗುವುದು ಹೇಗೆ? ಆಫೀಸ್‌ ತಲುಪೋದು ಹೇಗೆ? ಇನ್ಮುಂದೆ ನಾನು ಎಲ್ಲರಿಗೂ ಹೊರೆ ಆಗಿಬಿಡ್ತೀನಿ. ಹಾಗೆ ಬದುಕುವ ಬದಲು, ಆತ್ಮಹತ್ಯೆ ಮಾಡಿಕೊಳ್ಳೋದೇ ಬೆಸ್ಟ್ ಎಂಬ ಯೋಚನೆ ಪದೇಪದೆ ಬರತೊಡಗಿತು. ವಿಪರೀತ ಡಿಪ್ರಶನ್‌ಗೆ ಹೋಗಿಬಿಟ್ಟೆ. ಈ ಮಧ್ಯೆ ಕಿಮೋಥೆರಪಿ, ರೇಡಿಯೋಥೆರಪಿ ಕೂಡ ಆಗುತ್ತಿತ್ತು. ಚಿಂತೆಯ ಕಾರಣಕ್ಕೆ ನನಗೆ ಬದುಕಿನಲ್ಲಿ ಆಸಕ್ತಿಯೇ ಉಳಿಯಲಿಲ್ಲ. ಕಡೆಗೆ, ಎಲ್ಲವನ್ನೂ ಹೆಂಡತಿಯ ಬಳಿ ಹೇಳಿಕೊಂಡೆ. ಆಕೆ- “ಛೆ ಛೆ, ಹಾಗೆಲ್ಲಾ ಯೋಚನೆ ಮಾಡಬೇಡಿ. ನಿಮ್ಮ ಜೊತೆಗೆ ಇಡೀ ಕುಟುಂಬ ಇದೆ. ನೀವು ನಮ್ಮ ಪಾಲಿನ ಹೀರೋ. ಮೊದಲಿನಂತೆ ಜಾಲಿಯಾಗಿ ಇರಿ’ ಎಂದು ಧೈರ್ಯ ಹೇಳಿದಳು. ‌

ಈ ಮಧ್ಯೆ, ಕೃತಕ ಕಾಲುಗಳನ್ನು ಹಾಕಿಕೊಂಡು ನಡೆದಾಡಬಹುದು ಎಂಬ ಸಂಗತಿ ತಿಳಿಯಿತು. ಅವನ್ನು ಧರಿಸಿ ಆಫೀಸ್‌ಗೆ ಹೋದರೆ, ಅಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಡಿಪ್ರಶನ್‌ನಿಂದ ಪಾರಾಗಬೇಕಾದರೆ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಬೇಕು ಅನ್ನಿಸಿತು. ಶ್ವೇತಾ ಅಂತ ನನ್ನ ಗೆಳತಿಯೊಬ್ಬರಿದ್ದಾರೆ. ಅವರ ಅಂಕಲ್‌ ಸ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಕೋಚ್‌ ಆಗಿದ್ದರು. ನನ್ನ ಫೀಲಿಂಗ್ಸ್‌ ನೆಲ್ಲಾ ಅವರಲ್ಲಿ ಹೇಳಿಕೊಂಡೆ. ಈವೇಳೆಗೆ ನನಗೆ 41ವರ್ಷವಾಗಿತ್ತು. ಈ ವಯಸ್ಸಲ್ಲಿ ಏನೂ ಮಾಡಲು ಆಗಲ್ಲ ಅನ್ನಿಸಿದರೂ, ಏನಾದರೂ ಮಾಡೋಣ ಅನ್ನುವ ಫೀಲ್‌ ಜೊತೆಯಾಗ್ತಾ ಇತ್ತು. ಈ ಸಂದರ್ಭದಲ್ಲೇ ನ್ಪೋರ್ಟ್ಸ್ ವಿಡಿಯೋಗಳನ್ನು ನೋಡಲು ಆರಂಭಿಸಿದೆ. ಒಂದು ಕೈ, ಎರಡೂ ಕಾಲು ಇಲ್ಲದ ವ್ಯಕ್ತಿಯೊಬ್ಬ ಪ್ಯಾರಾಲಿಂಪಿಕ್ಸ್ ಸೈಕ್ಲಿಂಗ್‌ನಲ್ಲಿ ಪದಕ ಗೆಲ್ಲುವ ವಿಡಿಯೋ ನೋಡಿದ್ದೇ ಆಗ. ಅವನ ಸಾಧನೆ ನೋಡುತ್ತಿದ್ದಂತೆ ರೋಮಾಂಚನವಾಯಿತು. ಒಂದು ಕೈ, ಎರಡೂ ಕಾಲು ಇಲ್ಲದವ ಸೈಕ್ಲಿಸ್ಟ್ ಆಗಬಹುದಾದರೆ, ಒಂದು ಕಾಲು ಮಾತ್ರ ಇಲ್ಲದ ನಾನು ಕ್ರೀಡಾಪಟು ಆಗಬಾರದೇಕೆ ಅನ್ನಿಸಿತು.

ಆನಂತರ ನಡೆದಿದೆಯಲ್ಲ; ಅದು ನಿಜವಾದ ಪವಾಡ. ಕೃತಕ ಕಾಲುಗಳಿಗೆ ನನ್ನನ್ನು ಒಗ್ಗಿಸಿಕೊಂಡೆ. ವ್ಹೀಲ್‌ಚೇರ್‌ನಲ್ಲಿ ಕುಳಿತು ಓಡಾಡಲು ಅಭ್ಯಾಸ ಮಾಡಿಕೊಂಡೆ. ನನ್ನ ಶಕ್ತಿ-ಮಿತಿಯನ್ನು ಅರಿತೆ. ಸವಾಲುಗಳನ್ನು ಸೋಲಿಸು ವುದೇ ಜೀವನ ಎಂದು ಮತ್ತೆ ಮತ್ತೆ ಹೇಳಿಕೊಂಡೆ. ಆಡಿಕೊಳ್ಳುವವರನ್ನು ನಿರ್ಲಕ್ಷಿಸಿದೆ. ಹಾರೈಕೆಗಳಿಗೆ ತಲೆಬಾಗಿದೆ. ಮೊದಲು ಶಾಟ್‌ಪುಟ್‌, ನಂತರ ಶೂಟಿಂಗ್‌, ಆನಂತರದಲ್ಲಿ ಟೆನ್‌ಪಿನ್‌ ಬೌಲಿಂಗ್‌ ಸ್ಪರ್ಧೆಗಳಲ್ಲಿ ಪಾಲ್ಗೊಂಡೆ. ಆನ್‌ ಲೈನ್‌ ಮೂಲಕ ಕೂಡ ಕೋಚಿಂಗ್‌ ತಗೊಂಡೆ. ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ರಾಜ್ಯವನ್ನು, ದೇಶವನ್ನು ಪ್ರತಿನಿಧಿಸಿದೆ. ವಿದೇಶಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡೆ. ಪದಕಗಳಿಗೆ ಕೊರಳೊಡ್ಡಿದೆ. ಏಶಿಯನ್‌ ಗೇಮ್ಸ…ನಲ್ಲಿ ಎರಡನೇ ರ್‍ಯಾಂಕಿಂಗ್‌ ತಲುಪಿದೆ. ಈಗ ನನಗೆ 47 ವರ್ಷ ಆಗಿದೆ. ದೇಹಕ್ಕೆ ವಯಸ್ಸಾದರೂ ಮನದಲ್ಲಿ ಹುಮ್ಮಸ್ಸಿದೆ. ಮುಂದೆ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆಲ್ಲಬೇಕು ಅನ್ನುವ ಛಲದಲ್ಲಿ ಅಭ್ಯಾಸ ಮಾಡುತ್ತಿರುವೆ. ಹೇಳಲೇಬೇಕಾದ ಮಾತೊಂದಿದೆ: ಪ್ಯಾರಾಲಿಂಪಿಕ್ಸ್ ಕ್ರೀಡಾಪಟುವಾಗಲು ತುಂಬಾ ಖರ್ಚು ಇರುತ್ತದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಅಗತ್ಯವಿರುವ ವಸ್ತು ಒದಗಿಸುವ ಪ್ರಾಯೋಜಕರು ಸಿಕ್ಕರೆ ತುಂಬಾ ಜನರಿಗೆ ಅನುಕೂಲ. ‌

ನಡೆದುಬಂದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಿದಾಗ, ನನ್ನ ಬದುಕಲ್ಲಿ ಹೀಗೆಲ್ಲಾ ನಡೆದುಹೋಯ್ತಾ ಅನ್ನಿಸಿ ಬೆರಗಾಗುತ್ತೆ. ನನ್ನ ಬದುಕಿನ ಕಥೆ ಹತ್ತಾರು ಮಂದಿಗೆ ಸ್ಫೂರ್ತಿದಾಯಕವಾಗಿದೆ ಅನ್ನಲು ಖುಷಿಯಾಗುತ್ತೆ. ಈ ಹಂತದಲ್ಲಿ ತುಂಬಾ ಜನರನ್ನು ನೆನಪು ಮಾಡಿಕೊಳ್ಳಬೇಕು. ನನ್ನ ತಮ್ಮ ಮತ್ತು ಹೆಂಡತಿ- ನನ್ನನ್ನು ಪುಟ್ಟ ಮಗುವಿನಂತೆ ಜೋಪಾನ ಮಾಡಿದರು. ಬಂಧುಗಳು ಧೈರ್ಯ ಹೇಳಿದರು. “ಆಸ್ಪತ್ರೆಯ ಬಿಲ್‌ ಬಗ್ಗೆ ಯೋಚಿಸಬೇಡ, ನಿನ್ನ ಸಹಾಯಕ್ಕೆ ನಾವೆಲ್ಲಾ ಇದ್ದೇವೆ’ ಎಂದು ಗೆಳೆಯರು ಬೆನ್ನಿಗೆ ನಿಂತರು. ಅಪ್ಪನ ಕಾಲು ಕತ್ತರಿಸಿದ್ದಾರೆ ಎಂದು ಗೊತ್ತಾದಾಗ, ಆ ಸತ್ಯ ಅರಗಿಸಿಕೊಳ್ಳುವ ಮನಸ್ಸಿಲ್ಲದೆ ನಾಲ್ಕು ದಿನ ಆಸ್ಪತ್ರೆಗೇ ಬಾರದ ಮಗಳು, ನಂತರ ಬಂದು-ಅಪ್ಪಾ, ಹೆದರಬೇಡ. ಇವತ್ತಿಂದ ನಿನ್ನ ಕಾಲಾಗಿ ನಾನು ಜೊತೆಗಿರ್ತೇನೆ, ಅಂದಳು. ಅದು ನನ್ನ ಬದುಕಿನ ಮರೆಯಲಾಗದ ಕ್ಷಣಗಳಲ್ಲಿ ಒಂದು.

ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೇ: ಕಷ್ಟವೋ, ಕಾಯಿಲೆಯೋ ಬಂದಾಗ ನಾವು ಕುಗ್ಗಬಾರದು. ಕಷ್ಟಗಳನ್ನೇ ಕುಗ್ಗಿಸಬೇಕು. ಬದುಕಿದ್ದಾಗಲೇ ದಂತಕತೆಯಾಗಿ ಮೆರೆಯಬೇಕು. ನಾನು ಕ್ಯಾನ್ಸರ್‌ ಗೆದ್ದುದು ಮಾತ್ರವಲ್ಲ, ಕ್ರೀಡೆಯಲ್ಲೂ ಗೆದ್ದೆ. ಆ ಮೂಲಕ ಬದುಕಿನ ಸಂಭ್ರಮವನ್ನು ಹೆಚ್ಚಿಸಿಕೊಂಡೆ, ಈ ಪಯಣದಲ್ಲಿ ನನ್ನ ಜೊತೆಗಿರುವ ಎಲ್ಲರಿಗೂ ಋಣಿ ಎನ್ನುವ ವೇಣುಗೋಪಾಲ್‌ ಅವರಿಗೆ ಅಭಿನಂದನೆ ಹೇಳಲು-9845140874

 –ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next