ಭಗವಂತನು ವೇದಗಳ ರೂಪದಲ್ಲಿ ನಮಗೆ ಧರ್ಮವನ್ನು ಉಪದೇಶಿಸಿದ. ಸಾಧಾರಣವಾಗಿ ಮನುಷ್ಯರನ್ನು ಕೆಲವು ಪ್ರಶ್ನೆಗಳು ಕಾಡುತ್ತವೆ… “ಭಗವಂತ ನಮ್ಮ ಮುಂದೆ ಪ್ರತ್ಯಕ್ಷನಾಗುತ್ತಾನೆಯೇ? ಅವನು ನಮ್ಮ ಎದುರಿಗೆ ಬಂದು ನಮಗೇನಾದರೂ ಹೇಳುತ್ತಾನೆಯೇ? ಭಗವಂತನ ಅನುಗ್ರಹವೆಂದರೇನು?- ಈ ಪ್ರಶ್ನೆಗಳೊಂದಿಗೆ ಕೆಲವು ಆಧುನಿಕರು, ಭಗವಂತನ ಮೇಲಿನ ಭಕ್ತಿಯನ್ನು ಹಗುರವಾಗಿ ಕಾಣುವುದುಂಟು. ಭಗವಂತನ ಅನುಗ್ರಹ ಹೇಗಿರುತ್ತದೆ ಎನ್ನುವುದಕ್ಕೆ ನಮ್ಮ ಪ್ರಾಚೀನರ ಯೋಗ್ಯ ಉತ್ತರ ಹೀಗಿದೆ: “ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್, ಯಂ ತು ರಕ್ಷಿತುಮಿತ್ಛಂತಿ ಬುದ್ಧಾ ಸಂಯೋಜಯಂತಿ ತಮ್’.
ಭಗವಂತನ ಅನುಗ್ರಹವೆಂದರೆ, ಆತ ಒಂದು ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಪಶುಗಳನ್ನು ಕಾಯುವವನು. ಪಶುಗಳನ್ನು ಬಯಲಿಗೆ ಹೊಡೆದುಕೊಂಡು ಹೋಗುವಂತೆ ಆತ ಜನಗಳ ಸುತ್ತಲೂ ತಿರುಗುತ್ತಾನೆಂಬ ಅರ್ಥವಲ್ಲ. ಆತ ನಮಗೆ ಒಳ್ಳೆಯ ಕೆಲಸಗಳನ್ನು ಮಾಡುವ ಬುದ್ಧಿ ಕೊಡುತ್ತಾನೆ. ನಾವು ಯಾವ ಕೆಲಸ ಮಾಡಿದರೂ, ಅದಕ್ಕೆಲ್ಲವೂ ಅವನ ಪ್ರೇರಣೆಯೇ. ಅಂಥ ಪ್ರೇರಣೆ ಇಲ್ಲದಿದ್ದರೆ, ಯಾರು ಯಾವ ಕೆಲಸವನ್ನೂ ಮಾಡುವುದಿಲ್ಲ. “ಕೆಲಸ ಮಾಡಬೇಕೆಂಬ ಇಚ್ಛೆ- ಪ್ರೇರಣೆಗಳು ಎಲ್ಲಿಂದ ಬರುತ್ತವೆ?’ ಎನ್ನುವ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ಒಂದೇ: “ಅವು ಭಗವಂತನಿಂದ ಬರುತ್ತವೆ’!
ಭಗವಂತನ ಪ್ರೇರಣೆ ಇಲ್ಲದಿದ್ದರೆ, ನಮಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಬುದ್ಧಿ ಬರುವುದಾದರೂ ಹೇಗೆ? ಕೆಲಸಗಳನ್ನು ಮಾಡಲು ಪ್ರೇರಣೆ ಭಗವಂತನಿಂದ ಬರುವ ಪಕ್ಷದಲ್ಲಿ ಒಳ್ಳೆಯ ಕೆಲಸಗಳನ್ನು ಮಾತ್ರ ಮಾಡಲು ಅಂಥ ಪ್ರೇರಣೆ ಬರಬೇಕು. ಕೆಟ್ಟ ಕೆಲಸಗಳನ್ನು ಮಾಡಬೇಕೆಂಬ ಪ್ರೇರಣೆ ಎಲ್ಲಿಂದ ಬರುತ್ತದೆ? - ಎಂದು ಕೆಲವರು ಪ್ರಶ್ನಿಸುತ್ತಾರೆ. ಅದು ಕೂಡ ಭಗವಂತನಿಂದಲೇ ಬರುತ್ತದೆ. ಇದಕ್ಕೆ ಶಾಸ್ತ್ರಗಳಲ್ಲಿರುವ ಉತ್ತರವಿದು… “ನೀನು ಹಿಂದಿನ ಜನ್ಮದಲ್ಲಿ ಯಾವ ಪಾಪಗಳನ್ನು ಮಾಡಿರುತ್ತೀಯೋ, ಅವುಗಳ ಫಲವನ್ನು ನೀನೇ ಅನುಭವಿಸಬೇಕು. ಭಗವಂತ ನಿನ್ನಿಂದ ಆ ಪಾಪದ ಫಲವನ್ನು ಅನುಭವಿಸಲು ದಾರಿ ಮಾಡಿಕೊಡುವ ಕೆಲಸಗಳನ್ನು ಮಾಡಿಸುತ್ತಾನೆ’. ಆದ್ದರಿಂದ, ಈ ವಿಷಯದಲ್ಲಿ ಭಗವಂತನ ಜವಾಬ್ದಾರಿ ಏನೂ ಇಲ್ಲ. ಅವನನ್ನು ದೂಷಿಸುವ ಅಗತ್ಯವೂ ಇಲ್ಲ.
- ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ಶಾರದಾಪೀಠಂ, ಶೃಂಗೇರಿ