ಹಣವಿದ್ದವರನ್ನು “ಅಂಬಾನಿಪುತ್ರ’ ಎಂದು ಕರೆಯುವುದನ್ನ ಕೇಳಿದ್ದೀರಿ. ಆದರೆ ಹಣವಿಲ್ಲದವರನ್ನೂ “ಅಂಬಾನಿಪುತ್ರ’ ಅಂತ ಕರೆಯಬಹುದಂತೆ! ಅದು ಹೇಗೆ ಅನ್ನೋದನ್ನ ಇಲ್ಲೊಂದು ಹೊಸಬರ ತಂಡ ತಮ್ಮ ಚಿತ್ರದಲ್ಲಿ ತೆರೆಮೇಲೆ ಹೇಳುತ್ತಿದೆ. ಹೌದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಸೆಟ್ಟೇರಿದ್ದ “ಅಂಬಾನಿಪುತ್ರ’ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ತಯಾರಿ ನಡೆಸುತ್ತಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಭಾ.ಮಾ ಹರೀಶ್, ಲಹರಿ ವೇಲು ಇತರರು ಹಾಜರಿದ್ದು “ಅಂಬಾನಿಪುತ್ರ’ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದರು. ಸದ್ಯ ತನ್ನ ಆಡಿಯೋ ಬಿಡುಗಡೆಗೊಳಿಸುವ ಮೂಲಕ ಚಿತ್ರದ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿರುವ “ಅಂಬಾನಿಪುತ್ರ’ ಚಿತ್ರತಂಡ, ಇದೇ ಜುಲೈ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ.
“ಅಂಬಾನಿಪುತ್ರ’ ಚಿತ್ರಕ್ಕೆ ದೊರೆರಾಜ್ ತೇಜ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ನವ ಪ್ರತಿಭೆ ಸುಪ್ರೀಮ್ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಆಶಾ ಭಂಡಾರಿ, ಕಾವ್ಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ, ಮಂಜೆಗೌಡ್ರು. ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್ ಆದಿತ್ಯ, ಮಾಸ್ಟರ್ ಸುಹಾಸ್ ಮೊದಲಾದ ಬಹುತೇಕ ಹೊಸ ಕಲಾವಿದರು ಚಿತ್ರದ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದ್ದು, ಚಿತ್ರವನ್ನು ನೋಡಿದಾಗ ನಮ್ಮ ಸುತ್ತಮುತ್ತ ಕಂಡಿರುವ, ಕೇಳಿರುವ ಕಥೆ ಇಲ್ಲೂ ಇದೆ ಎನಿಸುತ್ತದೆ. ಕಂಪ್ಲೀಟ್ ಮನರಂಜನೆ ಪ್ಯಾಕೇಜ್ ಇರುವ ಚಿತ್ರ ನಮ್ಮದು. ಚಂಚಲ ಮನಸ್ಸಿನ ಹುಡುಗ ತನ್ನ ಪ್ರೀತಿ, ನಂಬಿಕೆ ಎರಡನ್ನೂ ಹೇಗೆ ಉಳಿಸಿಕೊಳ್ಳುತ್ತಾನೆ. ಅನೇಕ ಅಡೆ-ತಡೆ ಸವಾಲುಗಳನ್ನು ದಾಟಿ ಹೇಗೆ ಗುರಿ ಮುಟ್ಟುತ್ತಾನೆ ಅನ್ನೋದು “ಅಂಬಾನಿಪುತ್ರ’ ಚಿತ್ರದ ಕಥೆಯ ಒಂದು ಎಳೆ’ ಎನ್ನುವುದು ನಿರ್ದೇಶಕ ದೊರೆ ರಾಜ್ ತೇಜ ಅವರ ಮಾತು.
ಇನ್ನು “ಅಂಬಾನಿಪುತ್ರ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅಭಿಷೇಕ್ ಜಿ. ರಾಯ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಸಜ್ಜು, ಅನನ್ಯಾ ಭಟ್, ಹೇಮಂತ್ ಕುಮಾರ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮಧು ದೇವಲಾಪುರ, ರೋಹಿತ್ ಆದಿತ್ಯ, ದೊರೆ ರಾಜ್ ತೇಜ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. “ವಿಎಸ್‌ಪಿಎಸ್ ಮೂವೀಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಅಂಬಾನಿಪುತ್ರ’ ಚಿತ್ರಕ್ಕೆ ವೆಂಕಟೇಶ್ ಕೆ.ಎನ್, ವರುಣ್ ಗೌಡ, ಎಸ್.ವಿ ನಂದೀಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಹಾಸನ, ಮಂಡ್ಯ, ಸಕಲೇಶಪುರ, ಕುಮುಟ ಸೇರಿದಂತೆ ಹಲವು ಕಡೆ ಚಿತ್ರೀಕರಿಸಲಾಗಿದೆ.