Advertisement

ಸೈಕಲ್ ಮೆಕ್ಯಾನಿಕ್ ಸಮಾಜ ಸೇವೆ ಮಾಡಿ ಪದ್ಮ ಶ್ರೀ ಗೌರವ ಪಡೆದದ್ದು ಹೇಗೆ ಗೊತ್ತಾ ?

06:40 PM May 27, 2020 | Suhan S |

ಮಾನವನ ಮೂಲ ಗುಣ ಮಾನವೀಯತೆ. ಈ ಗುಣವನ್ನು ಮಾನವ ಬೆಳೆಯುತ್ತಾ ಹೋದಂತೆ ಮರೆಯುತ್ತಾ ಹೋಗುತ್ತಿದ್ದಾನೆ ಎನ್ನುವುದು ದುರಂತ. ಬದುಕಿನ ಯಾನವನ್ನು ಎಲ್ಲೋ ಮುಗಿಸುವ ಅಪರಿಚಿತ ದೇಹಗಳ ಸಾವಿಗೆ ಅಂತಿಮ ಘನತೆಯನ್ನು ನೀಡುವ 82 ವರ್ಷದ ಪದ್ಮಶ್ರೀ ಪುರಸ್ಕೃತ ಮಹಮ್ಮದ್ ಶರೀಫ್ ಅವರ ಸ್ಪೂರ್ತಿದಾಯಕ ಯಶೋಗಾಥೆಯಿದು.

Advertisement

ಜನಮಾನಸದಲ್ಲಿ ತಮ್ಮ ನಿಸ್ವಾರ್ಥ ಸಮಾಜ ಸೇವೆಯಿಂದ ಖ್ಯಾತಿ ಆಗಿರುವ ‘ ಶರೀಫ್ ಚಾಚಾ’ ಫೈಜಾಬಾದ್ ನಿವಾಸಿ. ಕಳೆದ ಇಪ್ಪತ್ತೇಳು ವರ್ಷಗಳಿಂದ ಹಕ್ಕುದಾರರಿಲ್ಲದೆ ಅಂತಿಮ ವಿಧಿ ವಿಧಾನಗಳು ಸಮರ್ಪಕವಾಗಿ ದೊರೆಯದ ಸುಮಾರು 4000 ಕ್ಕೂ ಹೆಚ್ಚು ಹೆಣಗಳನ್ನು ಆಯಾ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ.

ಸೇವೆಯ ಹಿಂದೆಯಿದೆ ನೋವಿನ ನೆನಪು : ಅದು 1992 ರ ಕಾಲ. ಸೈಕಲ್ ಮೆಕ್ಯಾನಿಕಲ್  ಆಗಿ ಬದುಕು ಸಾಗಿಸುತ್ತಿದ್ದ ಶರೀಫ್. ಹೇಗೂ ಜೀವನದ ಏರು ಪೇರನ್ನು ಸಹಿಸುತ್ತಾ, ಸಂಭಾಳಿಸುತ್ತಾ ಹೋಗುತ್ತಿದ್ದರು. ಅದೊಂದು ದಿನ ಕಿರಿಯ ಮಗ ಮಹಮ್ಮದ್ ರಾಯಿಸ್ ಖಾನ್  ಕೆಮಿಸ್ಟ್ ಆಗಿ ಕೆಲಸ ಮಾಡಲು ಸುಲ್ತಾನಪುರಕ್ಕೆ ಹೋಗುತ್ತಾನೆ. ಮಗ ಹೋಗಿ ತಲುಪಿದೆ ಎನ್ನುವ ಸಂದೇಶಕ್ಕಾಗಿ ತಂದೆ ಶರೀಫ್ ಕಾಯ್ತಾ ಇದ್ದರು. ಕಾಯುತ್ತಾ ಕೆಲ ವಾರಗಳು ಕಳೆದ ಬಳಿಕ ಚಿಂತಕ್ರಾಂತರಾಗಿ ಸ್ವತಃ ಶರೀಫ್ ಅವರೇ ಸುಲ್ತಾನ್ ಪುರಕ್ಕೆ ಹೋಗಿ ಮಗನ ಪತ್ತೆಗೆ ಇಳಿಯುತ್ತಾರೆ.

ಸುಲ್ತಾನ್ ಪುರದ ಪ್ರತಿ ಮನೆ ಬಾಗಿಲನ್ನು ತಟ್ಟಿ ಮಗನ ಧ್ವನಿಗಾಗಿ ಹುಡುಕುತ್ತಾರೆ. ತಿಂಗಳುಗಳೇ ಕಳೆದು ಹೋದಾಗ ಅದೊಂದು ದಿನ ಶರೀಫ್ ರೈಲ್ವೆ ಹಳಿಯಲ್ಲಿ ಚೀಲದಲ್ಲಿ ಅರೆಬರೆಯಾಗಿ ಪ್ರಾಣಿಗಳು ತಿಂದು ಮುಗಿಸಿದ ರೀತಿಯಲ್ಲಿ ಮಗನ ದೇಹವನ್ನು ನೋಡಿ ದುಃಖದಲ್ಲಿ ಹುಚ್ಚನಾಗಿ ಬಿಡುತ್ತಾರೆ. ಮಾತುಗಳೇ ಹೊರಡದ ಮೌನ ಅವರ ಧ್ವನಿಯನ್ನು ಕಟ್ಟಿ ಹಾಕುತ್ತದೆ. ಅದೇ ಕ್ಷಣದಲ್ಲಿ  ಮಗನ ದುಸ್ಥಿತಿಯ ದೇಹವನ್ನು ನೋಡಿ ಈ ರೀತಿಯ ದೇಹ ಇನ್ನೊಬ್ಬರದಾಗಬಾರದು, ಸಾವಿನ ಬಳಿಕ ಎಲ್ಲರಿಗೂ ಅಂತಿಮ ವಿಧಿ ವಿಧಾನ ದೊರಕುವಂತೆ ಆಗಬೇಕೆಂದು ನಿರ್ಧರಿಸುತ್ತಾರೆ. ಅಲ್ಲಿಂದಲೇ ಶರೀಫ್ ಚಾಚಾರಾಗಿ ಸಮಾಜ ಸೇವೆಯ ಮೂಲಕ ವಾರಸುದಾರಿಲ್ಲದ ಅಪರಿಚಿತ ದೇಹಗಳಿಗೆ ಮುಕ್ತಿ ದೊರಕಿಸುವ ಮಹಾನ್ ವ್ಯಕ್ತಿಯಾಗಿ ಬೆಳೆದರು.

Advertisement

ಸೇವೆ ಮಾಡಲು ಊರೂರು ಅಲೆದಾಟ !  : ಶರೀಫ್ ಪ್ರಾರಂಭದಲ್ಲಿ ವಾರಿಸುದಾರರಿಲ್ಲದ ಸತ್ತ ದೇಹಗಳ ಹುಡುಕಾಟ ನಡೆಸಲು ಆಗಾಗ ಪೊಲೀಸ್ ಠಾಣೆ, ರೈಲ್ವೆ ಹಳಿ,ಶವಾಗಾರ ಹೀಗೆ ಎಲ್ಲಾ ಕಡೆ ಸಂಚರಿಸುತ್ತಾರೆ. ಈ ಸಮಯದಲ್ಲಿ ಅವರೊಂದಿಗೆ ಸಹಾಯಕ್ಕೆ ಯಾರೂ ನಿಲ್ಲಲಿಲ್ಲ. ಇವರ ಸೇವೆಯ ದಾರಿಯಲ್ಲಿ ನಿಂತು ಇವರನ್ನು ಹುಚ್ಚು ಮನುಷ್ಯ ಎನ್ನುವಂತೆ ಹೀಯಾಳಿಸಿದವರೆ ಹೆಚ್ಚು. ಮುಂದುವರೆದ ಅವರು ನಂತರ ಬಳಿಕ ತನ್ನ ಮೊಮ್ಮಗ ಶಬ್ಬೀರ್ ಹಾಗೂ ಇತರ ಕೆಲ ಆಟೋ ಚಾಲಕರ ನೆರವಿನಿಂದ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಇವತ್ತಿಗೂ ಶರೀಫ್ ಪ್ರತಿನಿತ್ಯ ಪೊಲೀಸ್ ಠಾಣೆ, ರೈಲ್ವೆ ‌ನಿಲ್ದಾಣ, ಶವಗಾರಕ್ಕೆ ಭೇಟಿ ಕೊಟ್ಟು ವಾರಸುದಾರಿಲ್ಲದ ಶವಗಳ ಕುರಿತು ವಿಚಾರಿಸುತ್ತಾರೆ. ಇವರ ವಯಸ್ಸಿನ ಬಗ್ಗೆ ಯೋಚಿಸುವ ಪೊಲೀಸ್ ಅಧಿಕಾರಿಗಳು ಹಾಗೇನಾದ್ರು ಶವಗಳಿದ್ರೆ ಅದನ್ನು ಶರೀಫ್ ಅವರಿಗೆ ಸ್ವತಃ ಒಪ್ಪಿಸಿ ಬರುತ್ತಾರೆ. ಅಂತ್ಯಕ್ರಿಯೆ ಮಾಡಲು ದುಬಾರಿ ಆದ್ರು ಅದ್ಯಾಗೋ ಅದನ್ನು ಶರೀಫ್ ಅವರು‌ ನಿಭಾಯಿಸುತ್ತಾ ಬರುತ್ತಿದ್ದಾರೆ. ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಐಟಿ ಉದ್ಯೋಗಿ ಆಗಿರುವ ಮೊಮ್ಮಗ ಶಬ್ಬೀರ್ ಅವರ ಮೇಲೆ ಬೀಳುತ್ತದೆ. ನಿಸ್ವಾರ್ಥ ಸೇವೆ ಮಾಡುತ್ತಿರುವ ಶರೀಫ್ ಇತ್ತೀಚೆಗಷ್ಟೇ ಪದ್ಮಶ್ರೀ ಗೌರವವನ್ನು ಪಡೆದುಕೊಂಡಿದ್ದಾರೆ.

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next