Advertisement

“ಸಿನೆಮಾಗಳಲ್ಲಿ ರಂಜನೆಯ ಜತೆ ಚಿಂತನೆ ಪ್ರೇರೇಪಿಸಿ’

11:19 AM Jan 05, 2020 | mahesh |

ಮೂಲತಃ ಕೋಲ್ಕತಾದವರಾಗಿದ್ದು, ಮುಂಬಯಿ ಕೇಂದ್ರೀಕರಿಸಿ ಸಕ್ರಿಯರಾಗಿರುವ ಚಲನಚಿತ್ರ, ಟೆಲಿ ಧಾರಾವಾಹಿ, ನಾಟಕ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಂದ ಸಕ್ರಿಯರಾಗಿರುವ ಮಸೂದ್‌ ಅಖ್ತರ್‌ ಅವರು ಶುಕ್ರವಾರ ಉದಯವಾಣಿಯ ಮಂಗಳೂರು ಕಚೇರಿಗೆ ಭೇಟಿ ನೀಡಿದಾಗ ಮನೋಹರ ಪ್ರಸಾದ್‌ ಅವರಿಗೆ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.

Advertisement

ಮಹಾನಗರ: ಸಿನೆಮಾ, ಟೆಲಿ ಧಾರಾವಾಹಿ, ನಾಟಕಗಳು ಮನೋರಂಜನೆಯ ಜತೆ ಚಿಂತನೆಯನ್ನೂ ಪ್ರೇರೇಪಿಸಬೇಕು ಎನ್ನುತ್ತಾರೆ ಈ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಂದ ಸಕ್ರಿಯರಾಗಿರುವ ಮಸೂದ್‌ ಅಖ್ತರ್‌ ಅವರು.

1979ರಿಂದ ಇಂಡಿಯನ್‌ ಪೀಪಲ್ಸ್‌ ಥಿಯೇಟರ್‌ ಅಸೋಸಿಯೇಶನ್‌ನಲ್ಲಿ ಸಕ್ರಿಯರಾಗಿರುವ ಅವರು ದೂರದರ್ಶನದ ಜನಪ್ರಿಯವಾಗಿದ್ದ ನುಕ್ಕಡ್‌, ಮಿರ್ಜಾ ಗಾಲಿಬ್‌, ಸ್ವಾಭಿಮಾನ್‌ ಮುಂತಾ ದವುಗಳಲ್ಲಿ; ನಟರಾಗಿ ಪಾರ್‌, ಕಹಾ ಕಹಾ ಸೆ ಗುಜರ್‌ ಗಯೇ, ಆಗ್ಮಾನ್‌, ರಾಝ್, ಫಿರ್‌ಬೀ ದಿಲ್‌ ಹೈ ಹಿಂದೂಸ್ತಾನಿ ಮುಂತಾದ 85 ಚಲನಚಿತ್ರಗಳಲ್ಲಿ ಅಭಿನ ಯಿಸಿದ್ದಾರೆ. ಎಂ. ಎಸ್‌. ಸತ್ಯು ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಸತ್ಯಜಿತ್‌ರೇ, ಶ್ಯಾಂ ಬೆನಗಲ್‌, ಗುಲ್ಜಾರ್‌, ಸಂಜಯ್‌ ಲೀಲಾ ಬನ್ಸಾಲಿ, ಸ್ಟೀವನ್‌ ಸ್ಪಿಲ್‌ಬರ್ಗ್‌ ಮುಂತಾದ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ.

 ಸಿನೆಮಾ, ರಂಗಭೂಮಿ, ಟಿವಿಗಳಲ್ಲಿ ನಿಮಗೆ ಇಷ್ಟ ಯಾವುದು ?
ಸದಭಿರುಚಿಯ ಅವಕಾಶಗಳಿದ್ದರೆ ಈ ಎಲ್ಲವೂ ನನಗೆ ಇಷ್ಟು. ಈ ಸೃಷ್ಟಿಶೀಲ ಮಾಧ್ಯಮಗಳಿಂದ ಸಮಾಜವನ್ನು ರಚನಾತ್ಮಕವಾಗಿ ಪ್ರೇರೇಪಿಸಬೇಕು.

ಪಥೇರ್‌ ಪಾಂಚಾಲಿಯಂತಹ ಸಿನೆಮಾಗಳು ಮತ್ತೆ ಬರಲು ಸಾಧ್ಯವೇ ?
ವಿವಿಧ ಕಾಲಘಟ್ಟ ಮತ್ತು ವೀಕ್ಷಕರ ಅಭಿರುಚಿಗಳನ್ನು ಗಮನಿಸಿದರೆ ಇದು ಕಷ್ಟ. ಸಂಪೂರ್ಣವಾಗಿ ವಾಣಿಜ್ಯ ಉದ್ದೇಶಗಳನ್ನು ಬಿಟ್ಟು ಸಂದೇಶಾತ್ಮಕವಾದ ಬದ್ಧತೆ ಇದ್ದರೆ ಮಾತ್ರ ಇಂತಹವುಗಳ ನಿರ್ಮಾಣ ಸಾಧ್ಯ.

Advertisement

ಐಪಿಟಿಎ ಚಟುವಟಿಕೆ ಹೇಗಿದೆ ?
ನಾವು ಈ ಮೂಲಕ ದೇಶಾದ್ಯಂತ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದೇವೆ. ಗರಂ ಹವಾ, ಚಿತೆಗೂ ಚಿಂತೆ ಮುಂತಾದ ಚಿತ್ರ ನೀಡಿರುವ ಕನ್ನಡಿಗ ಎಂ.ಎಸ್‌. ಸತ್ಯು ಅವರ ಕೊಡುಗೆ ಈ ಸಂಘಟನೆಗೆ ಅನನ್ಯವಾಗಿದೆ.

ಮಂಗಳೂರು ಬಗ್ಗೆ ಏನನಿಸುತ್ತದೆ ?
ನಾನು ವೈಯಕ್ತಿಕ ನೆಲೆಯಲ್ಲಿ ಆಗಾಗ ಭೇಟಿ ನೀಡುತ್ತೇನೆ. ಇಲ್ಲಿಯ ಜನರು, ಜೀವನ ಶೈಲಿ, ಪರಂಪರೆಗಳೆಲ್ಲ ಶ್ಲಾಘ ನೀಯ. ರಂಗಭೂಮಿ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಆದರೂ ಅದರಲ್ಲಿ ನಿರಂತರತೆ ಇರಬೇಕು, ವಿಸ್ತಾರವಾಗಬೇಕು.

ನಿಮ್ಮ ಮುಂದಿನ ಯೋಜನೆ ?
ಸಿನೆಮಾದ ಚಿತ್ರಕತೆ ಸಿದ್ಧವಾಗುತ್ತಿದೆ. ನಾಯಕಿಯಾಗಿ ಮಂಗಳೂರು ಮೂಲದ ಈಗ ಮುಂಬಯಿಯಲ್ಲಿರುವ ಕಲಾವಿದರೋರ್ವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಚಿತ್ರಕಲೆಯು ಭಾರತ- ಪಾಕಿಸ್ಥಾನದ ನಡುವಣ ಘಟನಾವಳಿಯನ್ನು ಹೊಂದಿರುತ್ತದೆ.

ಚಿತ್ರರಂಗಕ್ಕೆ ಹೇಗೆ ಬಂದಿರಿ?
ನನ್ನ ತಂದೆ ಸಾರಿಗೆ ವ್ಯವಹಾರ ಹೊಂದಿದ್ದರು. ನಾವು ಮೂವರು ಗಂಡು ಮಕ್ಕಳು ಜತೆಯಲ್ಲಿದ್ದೆವು. ಆದರೆ ವ್ಯವಹಾರ ನಷ್ಟವಾದಾಗ ತಂದೆಯವರು ಬೇರೆ ಉದ್ಯೋಗಕ್ಕೆ ಸಲಹೆ ನೀಡಿದರು. ಆಗ, ಆಕಾಸ್ಮಾತ್ತಾಗಿ ನಾನು ಟೆಲಿ ಧಾರಾವಾಹಿ, ಸಿನೆಮಾ ಕ್ಷೇತ್ರವನ್ನು ಪ್ರವೇಶಿಸಿದೆ. ಉತ್ತಮ ಅವಕಾಶಗಳು ದೊರೆತವು.

ಯುವ ಕಲಾವಿದರಿಗೆ ನಿಮ್ಮ ಸಲಹೆ ?
ಯಾವುದೇ ಪಾತ್ರವಾದರೂ ಬದ್ಧತೆಯಿಂದ ಅಭಿನಯಿಸಬೇಕು. ಪರಕಾಯ ಪ್ರವೇಶ ಎಂಬ ಪರಿಕಲ್ಪನೆ ಸಾಕಾರಗೊಂಡಾಗ ಅಭಿನಯಿಸುವ ಪಾತ್ರಕ್ಕೆ ನ್ಯಾಯ ದೊರೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next