ಶ್ರೀನಗರ: ಗೆಳೆಯರೊಂದಿಗೆ ಮಸ್ತಿ ಮಾಡುತ್ತಾ, ನಾಳೆಗಳ ಚಿಂತೆಯಿಲ್ಲದೆ ದಿನ ಕಳೆಯುತ್ತಿದ್ದ ಆ ಹುಡುಗನ ವಯಸ್ಸು ಕೇವಲ ಇಪ್ಪತ್ತು. ಅವನಲ್ಲಿದ್ದಿದ್ದು ಚಿಗುರು ಮೀಸೆಯ ರೋಷಾವೇಶ, ಅಸ್ಪಷ್ಟ ಗುರಿ. ಅವೆಲ್ಲವೂ ಆತನನ್ನು ಸೆಳೆದೊಯ್ದಿದ್ದು ಮಾತ್ರ “ಲಷ್ಕರ್’ ಎಂಬ ನರಕದ ಕೂಪಕ್ಕೆ! ಆದರೆ, ಆತನನ್ನು ಆ ಕೂಪದಿಂದ ಬಿಡಿಸಿಕೊಂಡು ಬಂದಿದ್ದು ಸೇನೆ ಅಥವಾ ಪೊಲೀಸರಲ್ಲ! ಆತನ ತಾಯಿಯ ಕಣ್ಣೀರು!
ಇಂಥದ್ದೊಂದು ಮನಮಿಡಿಯುವ ಪ್ರಕರಣ ನಡೆದಿರುವುದು ದಕ್ಷಿಣ ಕಾಶ್ಮೀರದಲ್ಲಿ. ಅನಂತನಾಗ್ ಜಿಲ್ಲೆಯ ಫುಟ್ಬಾಲ್ ತಂಡವೊಂದರಲ್ಲಿ ಗೋಲ್ ಕೀಪರ್ ಆಗಿ, ಫುಟ್ಬಾಲ್‌ನಲ್ಲೇ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಮಜೀದ್ ಖಾನ್ ಕಳೆದ ಗುರುವಾರದಿಂದ ಕಾಣೆಯಾಗಿದ್ದ. ಆತನಿಗಾಗಿ ಹುಡುಕುತ್ತಿದ್ದ ತಂದೆ-ತಾಯಿಗೆ ಫೇಸ್‌ಬುಕ್‌ನಲ್ಲಿ ಉತ್ತರಿಸಿದ್ದ ಆತ, ತಾನೀಗ ಲಷ್ಕರ್-ಎ-ತೊಯ್ಬಾದ ಮನೆ ಮಗ ಎಂದು ಸಾರಿದ್ದ. ಗೆಳೆಯನನ್ನು ಎನ್‌ಕೌಂಟರ್‌ನಲ್ಲಿ ಕೊಂದಿದ್ದಕ್ಕೆ ಪ್ರತಿಯಾಗಿ ಉಗ್ರ ಸಂಘಟನೆ ಸೇರಿದ್ದಾಗಿಯೂ ಹೇಳಿಕೊಂಡಿದ್ದ.
ಆತನ ಹೆತ್ತ ತಾಯಿ ಆಶಿಯಾ ಬೇಗಂನ (50) ಎದೆ ಒಡೆಯಲು ಇಷ್ಟು ಸಾಕಿತ್ತು. ತನ್ನ ಕರುಳಬಳ್ಳಿ ವಿಷವೃಕ್ಷವಾಗುವುದನ್ನು ನೋಡಲೊಲ್ಲದ ಆ ತಾಯಿ, ಕಣ್ಣೀರಿಟ್ಟು ಮಗ ಮನೆಗೆ ಮರಳಬೇಕೆಂದು ಅಲವತ್ತುಕೊಂಡಳು. ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆದ ಈ ವಿಡಿಯೋ ನೋಡಿದ ಮಜೀದ್ ಮನಸ್ಸು ಕಲಕಿತು. ಅಂತೂ ಇಂತೂ ಲಷ್ಕರ್ ತೊರೆದ ಆತ ಗುರುವಾರ (ನ. 16) ಸಂಜೆ ಪೊಲೀಸರಿಗೆ ಶರಣಾಗಿದ್ದಾನೆ. ಶುಕ್ರವಾರ ಸಂಜೆ ಈತನನ್ನು ಆತನ ಕುಟುಂಬಕ್ಕೆ ಒಪ್ಪಿಸಲಾಗಿದೆ.
ಇವನಂತೆಯೇ ಲಷ್ಕರ್ ಸೇರಿದ ಕಾಶ್ಮೀರದ ಇತರ ಯುವಕರ ಹೆತ್ತವರೂ ಹೀಗೇ ತಮ್ಮ ಮಕ್ಕಳ ಮನವೊಲಿಸಬೇಕೆಂದು ಆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೇದ್ ಮನವಿ ಮಾಡಿದ್ದಾರೆ. ಮಜೀದ್ ಶರಣಾಗತಿಯನ್ನು ಸಿಎಂ ಮೆಹಬೂಬಾ, ಮಾಜಿ ಸಿಎಂ ಒಮರ್ ಅಬ್ದುಲ್ಲಾ ಸೇರಿದಂತೆ ಅನೇಕರು ಸ್ವಾಗತಸಿದ್ದು, ಟ್ವಿಟರ್‌ನಲ್ಲೂ ಶುಭಾಶಯಗಳು ಸುರಿಮಳೆ ಹರಿದಿದೆ.
ಸೇನಾಪಡೆ ನಿಯೋಜನೆ ಪರ ಶೇ.63ರಷ್ಟು ಮಂದಿ
ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರಕಾರವು ಇನ್ನಷ್ಟು ಸೇನಾಪಡೆಯನ್ನು ನಿಯೋಜಿಸಬೇಕು ಎಂದು ಶೇ.63ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅಮೆರಿಕದ ಪ್ಯೂ ರಿಸರ್ಚ್ ಸೆಂಟರ್‌ನ ಸಮೀಕ್ಷಾ ವರದಿ ತಿಳಿಸಿದೆ. ಫೆ.21ರಿಂದ ಮಾ.10ರವರೆಗೆ ಈ ಸಮೀಕ್ಷೆ ನಡೆಸಲಾಗಿದ್ದು, 2,464 ಮಂದಿ ಇದರಲ್ಲಿ ಭಾಗಿಯಾಗಿದ್ದರು. ಆ ಪೈಕಿ ಶೇ.63 ಮಂದಿ ಈ ನಿಲುವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಶೇ. 64 ಮಂದಿ ಪಾಕ್ ವಿರೋಧಿ ಧೋರಣೆ ಹೊಂದಿದ್ದಾರೆ ಎಂದಿದೆ ಸಮೀಕ್ಷೆ.