Advertisement

UV Fusion: ಅಮ್ಮನ ಸೀರೆ

03:49 PM Oct 09, 2023 | Team Udayavani |

ಎಲ್ಲಾದರು ಹೋಗುವ ಸಂದರ್ಭ ಅಮ್ಮ ಸೀರೆ ಉಟ್ಟು ತಯಾರಾಗುವುದನ್ನು ನೋಡುವುದೇ ಒಂದು ಚಂದ.  ಸೆರಗಿಗೆ ಪಿನ್‌ ಹಾಕುವುದು, ನೆರಿಗೆ ಹಿಡಿಯುನ ಅಮ್ಮನ ಶೈಲಿಯೋ ಆಕರ್ಷಕ. ಒಂದು ಬಾರಿ ಅವಳು ಮಡಚಿಟ್ಟಿದ್ದ ರೇಷ್ಮೆ ಸೀರೆಯನ್ನು  ಉಡಲು ಬಯಸಿ ಬಿಡಿಸಿದ್ದಕ್ಕೆ ಅಮ್ಮನಿಂದ  ಬೈಗುಳ ತಿಂದಿದ್ದೆ. ಅನಂತರ ಆ ಆರು ಗಜದ ಸೀರೆಯನ್ನು ಈ ಪುಟ್ಟ ಕೈಗಳಿಂದ ಸಂಭಾಳಿಸುವುದು ಸಾಧ್ಯವಿಲ್ಲ ಎಂದು ತಿಳಿದು, ಸೀರೆಯ ದೂರದ ಬಂಧುವಾಗಿರುವ ದುಪಟ್ಟಕ್ಕೆ ಕೈ ಹಾಕಿದೆ.

Advertisement

ಮೊದಲ ಬಾರಿ ನಾನಾಗಿಯೇ ಅಮ್ಮನ ದುಪಟ್ಟಾ ಉಟ್ಟು ಟೀಚರ್‌ ಟೀಚರ್‌ ಆಡುತ್ತ ಶಿಕ್ಷಕಿಯ ಪಾತ್ರದಲ್ಲಿ ಮುಳುಗುತ್ತಿದ್ದೆ. ಯಾರಾದರೂ ನೋಡಿದರೆ ನಾಚಿ ಓಡುತ್ತಿದ್ದೆ. ಹೀಗೆ ನಾನು ಉಟ್ಟ ಮೊದಲ ಸೀರೆ ಅಮ್ಮನ ದುಪಟ್ಟಾ. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್‌ಗೆಂದು ಅಮ್ಮ ನನಗಾಗಿಯೇ ಹಸುರು ಕಾಟನ್‌ ಸೀರೆ ತಂದಿದ್ದಳು. ಅನಂತರ ಅಜ್ಜಿಗೆ ಅದು ಬಹಳ ಇಷ್ಟವಾಗಿ ಅವಳೇ ಅದನ್ನು ಉಟ್ಟು ಹರಿದ ನೆನಪು. ಹೆಂಗಸರು ಏನು ತ್ಯಾಗ ಮಾಡಿದರೂ ತಮ್ಮ ಸೀರೆಗಳನ್ನು ಮಾತ್ರ ಭದ್ರವಾಗಿ ಇಡುತ್ತಾರೆ.

ಮದುವೆಯಾದ ಹೊಸದರಲ್ಲಿ ಅಮ್ಮನಿಗೆ ಅಪ್ಪ ತಂದು ಕೊಟ್ಟ ಗುಲಾಬಿ ಬಣ್ಣದ ಮೈಸೂರು ಸಿಲ್ಕ್ ಸೀರೆಯನ್ನು ಇನ್ನೂ  ಜೋಪಾನವಾಗಿ ಇಟ್ಟುಕೊಂಡಿದ್ದಾಳೆ.  ಅಜ್ಜಿಯಲ್ಲಂತೂ  70-80 ವರ್ಷ ಹಳೆಯ ದಪ್ಪ ಜರಿಯ ಅದೆಷ್ಟು ಸೀರೆಗಳಿದ್ದವೋ ಏನೋ. ಈ ಸೀರೆಗಳು ತಾಯಿಯಿಂದ ಮಗಳ ಕೈಗೆ ಬರುತ್ತಾ ಬರುತ್ತಾ ಅದೆಷ್ಟು ಪೀಳಿಗೆಯ ಹೆಣ್ಣು ಮಕ್ಕಳ ಜೀವನ ನೋಡಿರಬಹುದಲ್ಲವೇ? ಅವರ ಕಷ್ಟ ಸುಖ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿರುತ್ತವೆ.

ಭಾರತೀಯ ಹೆಣ್ಣು ಮಕ್ಕಳಿಗೆ ಸೀರೆ ಎಷ್ಟು ಸಾಧಾರಣವೋ, ಅಷ್ಟೇ ವಿಶೇಷ ಕೂಡ. ಇಂದಿಗೂ ಎಷ್ಟೇ ಮಾಡರ್ನ್ ಜೀವನ ಶೈಲಿ ಪಾಲಿಸುವ ಹೆಣ್ಣಾದರೂ ಸೀರೆಯ ಮೇಲೆ ಆಕೆಗೆ ವಿಶೇಷ ಒಲವಿರುತ್ತದೆ.

ಇಂದಿನ ಚೂಡಿದಾರ್‌ ಕಾಲದಲ್ಲಿ ನನ್ನ ಅಮ್ಮನನ್ನು ಹೆಚ್ಚಾಗಿ ಸೀರೆಯಲ್ಲಿ ಕಾಣದಿದ್ದರೂ ನಾನು ಮೊದಲು ಉಟ್ಟ ಸೀರೆ ಅವಳದ್ದೇ. ಸೀರೆ ಉಟ್ಟು ಮೆರೆಯುತ್ತಿ¨ªಾಗ ಇದ್ದ  ಧೈರ್ಯವೆಂದರೆ ಅವಳೇ ನೀಡಿದ ಪ್ರೀತಿ. ಅಮ್ಮನ ಸೀರೆ ಉಡುವುದೆಂದರೆ ಅವಳೇ ನನಗೆ ರಚಿಸಿ ಬೆಂಗಾವಲಾಗಿ ನಿಂತ ದಾರಿಯಲ್ಲಿ ಹೋದ ಹಾಗೆ. ಭದ್ರತೆ, ಸುರಕ್ಷೆ ಜತೆಗೆ ಪ್ರೀತಿ ಇರುವಂತಹ ಉಡುಪು. ಅಮ್ಮನ ಸೀರೆ ಕೇವಲ ಒಂದು ಉಡುಪಲ್ಲ, ತಾಯಿ ಕಲಿಸಿ ಕೊಟ್ಟ ಆಚರಣೆಗಳೊಂದಿಗೆ, ಕುಟುಂಬದ ಪರಂಪರೆಯೊಂದಿಗೆ ನಮ್ಮ ಸಂಬಂಧದ ಪ್ರತೀಕ.

Advertisement

ತಾಯಿಯ ಸೀರೆ ಧರಿಸುವುದು ನಮ್ಮ ಸಮಾಜದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ವರ್ಗಾಯಿಸುವ ಮೊದಲ ಹೆಜ್ಜೆ. ಹೆಣ್ಣು ತನ್ನ ತಾಯಿಯ ಸೀರೆ ಧರಿಸಿದಾಗ ತಾಯಿಗೆ ನೀಡುವ ಗೌರವ ಹಾಗೂ ಆದ್ಯತೆಯೂ ಕಾಣುತ್ತದೆ. “ತಾಯಿಯಂತೆ ಮಗಳು ನೂಲಿನಂತೆ ಸೀರೆ’ ಎಂಬ ಗಾದೆ ಎಲ್ಲೋ ಒಂದು ಕಡೆ ಇದೇ ಅನುಭವದೊಂದಿಗೆ ಹುಟ್ಟಿಕೊಂಡಂತಿದೆ. ಎಷ್ಟಾದರೂ ಅಮ್ಮನ ಪ್ರೀತಿಯನ್ನು ಧರಿಸುವ ಭಾಗ್ಯ ಗಂಡು ಮಕ್ಕಳಿಗಂತೂ ಇಲ್ಲ.

 -ಅನನ್ಯಾ ಕೂಸುಗೊಳ್ಳಿ

ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು.

 

Advertisement

Udayavani is now on Telegram. Click here to join our channel and stay updated with the latest news.

Next