ಇಲ್ಲಿರುವ 4 ಕತೆಗಳಲ್ಲಿ ಮಾರ್ದವತೆ ಇದೆ, ನೋವಿದೆ, ಕಾಳಜಿಯಿದೆ, ಹೆಮ್ಮೆಯಿದೆ. ಏಕೆಂದರೆ ಇಲ್ಲಿ ಅಮ್ಮ ಇದ್ದಾಳೆ!
1 “ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಅಂತ ಹೇಳುತ್ತಾರೆ. ತಾಯಿಗೆ ಅದು ಅವಿಸ್ಮರಣೀಯ ಕ್ಷಣ. ಆದರೆ, ನಾನು ಹುಟ್ಟಿದಾಗ ಅಂಥಾ ಮ್ಯಾಜಿಕ್ ಯಾವುವೂ ನಡೆಯಲಿಲ್ಲ. ನಾನಾಗ 20 ದಿನಗಳ ಕಂದಮ್ಮ. ಅಮ್ಮನ ಮುಂದೆ ಬಹಳ ದೊಡ್ಡ ಸವಾಲು ಎದುರಾಗಿತ್ತು. ಗಂಡ ಮತ್ತು ನನ್ನ ನಡುವೆ ಒಬ್ಬರನ್ನು ಆರಿಸಿಕೊಳ್ಳಬೇಕಿತ್ತು. ಬದುಕನ್ನೇ ಬುಡಮೇಲು ಮಾಡುವ ಇಂಥ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದ್ದಕ್ಕೆ ಅಮ್ಮನ ಬಗ್ಗೆ ನನ್ನ ಅನುಕಂಪವಿದೆ. ಥ್ಯಾಂಕ್ಸ್ ಟು ಅಮ್ಮ, ನನ್ನನ್ನು ಆರಿಸಿಕೊಂಡಿದ್ದಕ್ಕೆ. ಅವತ್ತು ಬೆನ್ನು ತೋರಿಸಿ ಹೋದ ಅಪ್ಪ ಇನ್ಯಾವತ್ತೂ ವಾಪಸ್ ಬರಲಿಲ್ಲ. ಅಪ್ಪನನ್ನು ಅಮ್ಮ ಸುಮ್ಮನೆ ಬೀಳ್ಕೊ ಡಲಿಲ್ಲ. “ನೀವು ನೋಡ್ತಾ ಇರಿ, ಈ ಹುಡುಗಿ ಮುಂದೊಂದು ದಿನ ನನಗೆ ಹೆಮ್ಮೆ ತರುತ್ತಾಳೆ’ ಎಂದಿದ್ದಳು’ - ಈ ಕಥೆಯನ್ನು ವೇದಿಕೆ ಮೇಲೆ ಹೇಳಿಕೊಂಡು ಕಣ್ಣೀರಾಗಿದ್ದು ಪೂಜಾ ಚೋಪ್ರಾ. ಅವಳ ಮುಡಿಯನ್ನು ಅಲಂಕರಿಸಿದ್ದ “ಮಿಸ್ ಇಂಡಿಯಾ ವರ್ಲ್ಡ್’ ಕಿರೀಟ ಅವಳಮ್ಮನ ಹೋರಾಟವನ್ನು ಜಗತ್ತಿಗೇ ಸಾರುತ್ತಿತ್ತು!
2.”ಅಮ್ಮಾ ಇವತ್ತು ಲೈಬ್ರರಿಗೆ ಹೋಗ್ಬೇಕು. ಊಟದ ಡಬ್ಬಿಗೆ ನಾಲ್ಕು ಬೇಡ, ಎರಡು ಚಪಾತಿ ಸಾಕು’- ಮಗರಾಯ ಕೂಗಿ ಹೇಳಿದ. ಅಮ್ಮ ಏನೂ ಹೇಳದೆ “ಸರಿ’ ಎಂದು ಹೂಂಗುಟ್ಟಿದಳು. ಆತ ಮಧ್ಯಾಹ್ನ ಊಟದ ಡಬ್ಬಿ ತೆರೆದಾಗ, ಎಂದಿಗಿಂತ ಎರಡರಷ್ಟು ಗಾತ್ರದ ಎರಡು ಚಪಾತಿಗಳು ಅಲ್ಲಿದ್ದವು. “ಅಮ್ಮಾ, ನೀನು ಬದಲಾಗೋದಿಲ್ಲ’ ಎಂದು ಮಗ ನಸುನಕ್ಕ.
3. ಕಾಲೇಜಿನಿಂದ ಬಂದ ಮಗಳು ಏನಾದರೂ ತಿನ್ನಲು ಸಿಗುತ್ತಾ ಎಂದು ಅಡುಗೆ ಮನೆಯೆಲ್ಲಾ ಹುಡುಕಾಡಿದಳು. ಏನೂ ಸಿಗಲಿಲ್ಲ. ಅಮ್ಮ ಎರಡು ಸೇಬು ಹಣ್ಣುಗಳನ್ನು ಕೈಗೆತ್ತಿಕೊಂಡು “ಎರಡು ಸೇಬು ಹಣ್ಣುಗಳಿವೆ. ತಿನ್ನುತ್ತೀಯಾ?’ ಎಂದು ಕೇಳಿದರು. ಹಸಿದಿದ್ದ ಹುಡುಗಿ ಕಣ್ಣರಳಿಸಿ ಹೂಂ ಅಂದಳು. ನೀರಿನಲ್ಲಿ ತೊಳೆದ ಎರಡೂ ಸೇಬು ಹಣ್ಣುಗಳನ್ನು ಅಮ್ಮ ಕಚ್ಚಿದಳು. ಅದನ್ನು ಕಂಡ ಮಗಳು ಕ್ರುದ್ಧಳಾದಳು. ತಾನು ಹಸಿದಿರುವುದು ಗೊತ್ತಿದ್ದೂ ಹಣ್ಣುಗಳನ್ನು ಎಂಜಲು ಮಾಡಿದ ಅಮ್ಮನನ್ನು ಹೊಡೆದೇ ಬಿಡಬೇಕು ಎನ್ನುವಷ್ಟು ಕೋಪ ಉಕ್ಕಿ ಬಂತು. ಕಣ್ಣುಗಳೆಲ್ಲಾ ಕೆಂಪಾದವು. ಅಮ್ಮ, ಬಲಗೈಯಲ್ಲಿ ಹಿಡಿದ ಹಣ್ಣನ್ನು ಮುಂದೆ ಮಾಡಿ “ಇದು ಕೆಟ್ಟು ಹೋಗಿಲ್ಲ. ಚೆನ್ನಾಗಿದೆ ತಿನ್ನು’ ಎಂದರು. ಮಗಳಿಗೆ ಕೆಟ್ಟ ಹಣ್ಣು ಸಿಗದಿರಲಿ ಎಂದು ಕಚ್ಚಿ ನೋಡಿದ ತಾಯಿಯ ಉದ್ದೇಶವನ್ನು ಅರಿಯದೆ ಕೋಪ ಮಾಡಿಕೊಂಡಿದ್ದಕ್ಕೆ ಮಗಳಿಗೆ ತನ್ನ ಮೇಲೆಯೇ ನಾಚಿಕೆಯಾಯಿತು. ಅಮ್ಮನನ್ನು ಬರಸೆಳೆದು ಅಪ್ಪಿಕೊಂಡಳು. ಏನನ್ನೂ ಅರಿಯದ ಅಮ್ಮ ನಗುತ್ತಾ “ಯಾಕೇ…? ಏನಾಯೆ¤à?’ ಎಂದು ಕೇಳಿದ್ದಕ್ಕೆ “ಏನೂ ಇಲ್ಲಮ್ಮಾ’ ಎಂದು ಅಮ್ಮನ ನಗುವಿನಲ್ಲಿ ತಾನೂ ಭಾಗಿಯಾದಳು.
4. ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ದೂರದೂರಿನಲ್ಲಿದ್ದ ತನ್ನ ತಾಯಿಯ ವಿಳಾಸಕ್ಕೆ ಆನ್‌ಲೈನ್ ಮೂಲಕ ಒಂದು ಕೆಂಪು ಗುಲಾಬಿಯನ್ನು ಆರ್ಡರ್ ಮಾಡಿದ. ಅಮ್ಮಂದಿರ ದಿನಾಚರಣೆ ಪ್ರಯುಕ್ತ ಅಮ್ಮನನ್ನು ಖುಷಿ ಪಡಿಸುವ ಉದ್ದೇಶ ಅವನದಾಗಿತ್ತು. ಮಾರನೇ ದಿನ ಕಚೇರಿಗೆ ಹೋಗುವಾಗ ಹೂವಿನ ಅಂಗಡಿಯ ಬಳಿ ಪುಟ್ಟ ಹುಡುಗಿಯೊಬ್ಬಳು ಅಳುತ್ತಾ ಕೂತಿದ್ದಳು. ಈತ ಅವಳ ಬಳಿ ಬಂದು ಏನಾಯೆ¤ಂದು ಕೇಳಿದಾಗ “ಅಮ್ಮನಿಗೆ ಒಂದು ಕೆಂಪು ಗುಲಾಬಿ ತರಲೆಂದು ಬಂದೆ. ಆದರೆ ಅಷ್ಟೊಂದು ದುಡ್ಡು ನನ್ನ ಬಳಿಯಿಲ್ಲ’ ಎಂದಳು ಕಣ್ಣೀರು ಒರೆಸುತ್ತಾ. ಅವನು ಹುಡುಗಿಗೆ ಗುಲಾಬಿ ತೆಗೆದುಕೊಟ್ಟಿದ್ದಷ್ಟೇ ಅಲ್ಲದೆ ತನ್ನ ಕಾರ್‌ನಲ್ಲಿ ಡ್ರಾಪ್ ಮಾಡುತ್ತೇನೆಂದ. ಅವಳು ತೋರಿದ ದಾರಿಯಲ್ಲೇ ಬಂದಾಗ ಒಂದು ಸ್ಮಶಾನ ಸಿಕ್ಕಿತು. ಬೆಳಗ್ಗೆ ತಾನೇ ಮಣ್ಣು ಮಾಡಿದ್ದ ಗೋರಿಯೊಂದರ ಮುಂದೆ ಹುಡುಗಿ ಆ ಗುಲಾಬಿ ಇರಿಸಿದಳು. ಅವಳ ಮೊಗದಲ್ಲಿ ನಗುವಿತ್ತು. ಅದನ್ನು ಕಂಡು ಯಾಕೋ ಏನೋ ಅವನಿಗೆ ಕಪಾಳಕ್ಕೆ ಹೊಡೆಸಿಕೊಂಡ ಹಾಗಾಯಿತು. ಆ ಕೂಡಲೆ ಮೊಬೈಲ್ ಹೊರತೆಗೆದು ಇಂಟರ್‌ನೆಟ್‌ನಲ್ಲಿ ಕೆಂಪು ಗುಲಾಬಿಯ ಆರ್ಡರ್‌ಅನ್ನು ಕ್ಯಾನ್ಸಲ್ ಮಾಡಿದ. ಖುದ್ದಾಗಿ ಹೂವಿನ ಮಳಿಗೆಗೆ ತೆರಳಿ ದೊಡ್ಡ ಗುಲಾಬಿ ಹೂಗುಚ್ಚವನ್ನು ಖರೀದಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು 300 ಕಿ.ಮೀ ದೂರಲ್ಲಿದ್ದ ತಾಯಿಯನ್ನು ಕಾಣಲು ಹೊರಟೇ ಬಿಟ್ಟಿದ್ದ.