Advertisement

ಇಂದು ತಾಯಿಯ 84ನೇ ಹುಟ್ಟುಹಬ್ಬ; ಸರ್‌ಪ್ರೈಸ್‌ ನೀಡಬೇಕಿದ್ದ ಕ್ಯಾಪ್ಟನ್‌ ದೀಪಕ್‌ ಸಾಥೆ

09:35 PM Aug 08, 2020 | Karthik A |

ಮಣಿಪಾಲ: “ಕೊರೊನಾ ಇದೆ ಅಮ್ಮ ಹೊರಗಡೆ ಹೋಗಬೇಡ. ನಿನಗೆ ಎಲ್ಲದಕ್ಕೂ ನಾನೂ ಮನೆಯಲ್ಲಿಯೇ ವ್ಯವಸ್ಥೆ ಮಾಡಿಸುತ್ತೇನೆ’

Advertisement

ಇದು ಕಲ್ಲಿಕೋಟೆ ವಿಮಾನ ದುರಂತದಲ್ಲಿ ಪ್ರಯಾಣಿಕರ ಜೀವ ಉಳಿಸಿ ಮಣಿದ ಕ್ಯಾಪ್ಟನ್‌ ದೀಪಕ್‌ ಸಾಥೆ ಅವರು ತಮ್ಮ ತಾಯಿಗೆ ಹೇಳಿದ ಮಾತುಗಳು.

ನಿನ್ನೆ ಕಲ್ಲಿಕೋಟೆಯಲ್ಲಿ ವಿಮಾನ ಸೇಫ್ ಆಗಿ ಲ್ಯಾಂಡ್‌ ಆಗಿದ್ದೇ ಆದರೆ ಇಂದು ದೀಪಕ್‌ ಸಾಥೆ ಅವರ ತಾಯಿ ಮನೆಯಲ್ಲಿ ಇರಬೇಕಿತ್ತು. ಏಕೆಂದರೆ ಇಂದು ಅವರ ತಾಯಿಯ 84ನೇ ಹುಟ್ಟು ಹಬ್ಬ.

ಹೌದು ತನ್ನ ಕೌಶಲದಿಂದ ಅನೇಕ ಪ್ರಯಾಣಿಕರ ಪ್ರಾಣ ಉಳಿಸಿದ ಏರ್‌ ಇಂಡಿಯಾ ಪೈಲಟ್‌ ದೀಪಕ್‌ ಸಾಥೆ ಅವರು ತಾಯಿಯ ಜನ್ಮ ದಿನದಂದು ಅಚ್ಚರಿಯನ್ನು ನೀಡಲು ಮುಂದಾಗಿದ್ದರು. ಕಲ್ಲಿಕೋಟೆಯಲ್ಲಿ ವಿಮಾನ ಇಳಿಸಿ ಅವರು ನಾಗ್ಪುರಕ್ಕೆ ಪ್ರಯಾಣಿಸಬೇಕಿತ್ತು.
ಈ ವಿಷಯವನ್ನು ಅವರ ಸೋದರಳಿಯ ಡಾ| ಯಶೋಧನ್‌ ಸಾಥೆ ಶನಿವಾರ ತಿಳಿಸಿದ್ದಾರೆ. ಇಂದು ಕ್ಯಾಪ್ಟನ್‌ ಸಾಥೆ ಅವರ ತಾಯಿಯ ಜನ್ಮದಿನ. ಅವರು ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ತಮ್ಮ ಕುಟುಂಬವನ್ನು ಭೇಟಿಯಾಗಿದ್ದರು. ಅಂದಿನಿಂದ ಅವರು ನಿರಂತರ ಫೋನ್‌ ಸಂಪರ್ಕದಲ್ಲಿದ್ದರು. ಗುರುವಾರಷ್ಟೇ ಅವರು ದೂರವಾಣಿಯಲ್ಲಿ ಮಾತನಾಡಿದ್ದರು.

ಕ್ಯಾಪ್ಟನ್‌ ಸಾಥೆ ಪತ್ನಿಯೊಂದಿಗೆ ಮುಂಬಯಿನಲ್ಲಿ ವಾಸಿಸುತ್ತಿದ್ದರು. ತಾಯಿ ನೀಲಾ ಸಾಥೆ ತಂದೆ ವಸಂತ್‌ ಸಾಥೆ (ನಿವೃತ್ತ ಕರ್ನಲ್‌) ಅವರು ನಾಗ್ಪುರದ ಭಾರತ್‌ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಕೊರೊನಾದ ಕಾರಣ ಕ್ಯಾಪ್ಟನ್‌ ಸಾಥೆ ತನ್ನ ಹೆತ್ತವರನ್ನು ಮನೆಯಿಂದ ಹೊರಗೆ ಹೋಗಲು ಬಿಡದೇ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮಗನ ಸಾವಿನ ಸುದ್ದಿ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿದ್ದ ತಾಯಿ ದುಖೀಃತರಾಗಿದ್ದಾರೆ. ದೀಪಕ್‌ ಸಾಥೆ ಯಾವಾಗಲೂ ಇತರರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಭಾವುಕರಾಗಿ ನುಡಿದರು.

Advertisement

ಪತ್ತೆಯಾಗದ ಮೃತದೇಹ
ಕ್ಯಾಪ್ಟನ್‌ ಸಾಥೆ ಅವರ ಮೃತದೇಹವನ್ನು ಕುಟುಂಬ ಇನ್ನೂ ಪತ್ತೆ ಮಾಡಿಲ್ಲ ಎಂದು ಕ್ಯಾಪ್ಟನ್‌ ದೀಪಕ್‌ ಸಾಥೆ ಅವರ ಸೋದರಳಿಯ ಡಾ| ಯಶೋಧನ್‌ ಸಾಥೆ ಹೇಳಿದ್ದಾರೆ. ಅವರ ಪತ್ನಿ ಮತ್ತು ಸಹೋದರ ಕೋಯಿಕೋಡ್‌ನ‌ಲ್ಲಿದ್ದಾರೆ. ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.

20 ನಿಮಿಷ ಆಕಾಶದಲ್ಲೇ ವಿಮಾನ ಹಾರಾಟ
ಪೈಲಟ್‌ ವೃತ್ತಿಯಲ್ಲಿ 30 ವರ್ಷ ಅನುಭವವಿಯಾಗಿರುವ ಕಾರಣ ರನ್‌ ವೇ ಇವರಿಗೆ ಚಿರಪರಿಚಿತ. ನಿನ್ನೆ ತೀವ್ರ ಮಳೆ ಹಾಗೂ ಮಂಜು ಆವರಿಸಿದ್ದರಿಂದ ರನ್‌ ವೇ ಸರಿಯಾಗಿ ಕಾಣಿಸುತ್ತಿರಲಿಲ್ಲ. ಸುಮಾರು 20 ನಿಮಿಷ ಆಕಾಶದಲ್ಲೇ ವಿಮಾನ ಹಾರಾಟ ನಡೆಸಿದರು. ಹೆಚ್ಚು ಸಮಯ ಸುತ್ತಾಟ ನಡೆಸಲು ಸಾಧ್ಯವಿಲ್ಲದ ಕಾರಣ, ಕಂಟ್ರೋಲ್‌ ರೂಮಿನಿಂದ ವಿಮಾನ ಇಳಿಸಲು ಸೂಚನೆ ಸಿಕ್ಕಿತ್ತು.

ತಮ್ಮ ಜೀವವನ್ನೇ ಪಣಕ್ಕಿಟ್ಟರು
ಅಪಘಾತದ ಮುನ್ಸೂಚನೆ ಇದ್ದುದ್ದರಿಂದ ತನ್ನ ಅನುಭವದಿಂದ ವಿರುದ್ಧ ದಿಕ್ಕಿನಿಂದ ಕ್ರಾಶ್‌ ಲ್ಯಾಂಡಿಂಗ್‌ ಮಾಡಿರುವ ಕಾರಣದಿಂದಾಗಿ ಮರಣ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಗ್ನಿ ಅವಘಡವನ್ನು ತಪ್ಪಿಸಲು ವಿಮಾನದ ಇಂಜಿನ್‌ ಆಫ್‌ ಮಾಡಿದ ಪೈಲೆಟ್‌ ಸಮಯೋಚಿತ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ತಮ್ಮ ಜೀವವನ್ನೇ ಪಣಕ್ಕಿಟ್ಟು, ಅನೇಕ ಜೀವಗಳ ರಕ್ಷಣೆ ಮಾಡಿದ ಪೈಲಟ್‌ ಸಾಹಸಕ್ಕೆ ದೇಶವೇ ತಲೆದೂಗುತ್ತಿದೆ. ಅವರ ಅಗಲಿಕೆಗೆ ದೇಶ ಕಂಬನಿ ಮಿಡಿದಿದೆ.

21 ಯುದ್ಧವಿಮಾನಗಳನ್ನು ಹಾರಿಸಿದ್ದರು
ಕ್ಯಾಪ್ಟನ್‌ ಮುಂಬಯಿ ನಿವಾಸಿಯಾಗಿದ್ದ ದೀಪಕ್‌ ವಿ. ಸಾಥೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆ ವಿದ್ಯಾರ್ಥಿಯಾಗಿದ್ದರು. ಸಾಠೆ ಮಿಗ್‌ 21 ಯುದ್ಧವಿಮಾನಗಳನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕದ ಗೌರವ ಸಂದಿತ್ತು. ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್‌ ಆಫ್‌ ಆನರ್‌ ಅನ್ನು ತಮ್ಮ ಮುಡಿಡಿಗೇರಿಸಿಕೊಂಡಿದ್ದರು.

22 ವರ್ಷಗಳ ಕಾಲ ಅನುಭವ
1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಇರುವ ಏರ್‌ ಪೋರ್ಸ್‌ ಟ್ರೆ„ನಿಂಗ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕಾಡ್ರನ್‌ ಲೀಡರ್‌ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದ ಕ್ಯಾಪ್ಟನ್‌ ದೀಪಕ್‌ ಸಾಥೆ ತಮ್ಮ ವೃತ್ತಿ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದರು. ಮಿಗ್‌ -21 ಯುದ್ಧ ವಿಮಾನಗಳನ್ನು ಹಾರಿಸಿದ ಖ್ಯಾತಿ ಕೂಡಾ ಇವರಿಗಿದೆ.

ಅಪಘಾತ ಮುಕ್ತ ಫ್ಲೆ„ಯಿಂಗ್‌ ದಾಖಲೆ
ಭಾರತೀಯ ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್‌ಆಗಿ ಸೇವೆಯನ್ನು ಸಲ್ಲಿಸಿದ್ದರು. 30 ವರ್ಷಗಳ ಸುದೀರ್ಘ‌ ಮತ್ತು ಅಪಘಾತ ಮುಕ್ತ ಫ್ಲೆ„ಯಿಂಗ್‌ ದಾಖಲೆಯನ್ನು ಹೊಂದಿದ್ದರು. ವಾಯುಪಡೆಯಿಂದ ನಿವೃತ್ತಿ ಹೊಂದಿದ ಅನಂತರ ಏರ್‌ಇಂಡಿಯಾದಲ್ಲಿ ಸುಮಾರು 18 ವರ್ಷಗಳಿಂದ ಪೈಲಟ್‌ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿಯೂ ಕಾರ್ಯಾಚರಣೆ
ವಾಯುಪಡೆಯ ತರಬೇತಿ ಅಕಾಡೆಮಿಯಲ್ಲಿ ಬೋಧಕನಾಗಿಯೂ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್‌ ಸಾಥೆಯವರಿದ್ದ ಸ್ಕಾಡ್ರನ್‌ 1999ರ ಕಾರ್ಗಿಲ್‌ ಯುದ್ಧದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅನಂತರ ಐಎಎಫ್‌ನಿಂದ ನಿವೃತ್ತಿ ಹೊಂದಿ, ನಾಗರಿಕ ವಿಮಾನಗಳ ಹಾರಾಟಕ್ಕಾಗಿ ಏರ್‌ಇಂಡಿಯಾಕ್ಕೆ ಸೇರಿದ್ದರು.

ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕರಾಳ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು ಶುಕ್ರವಾರ ರಾತ್ರಿ ಕೇರಳದ ಕಲ್ಲಿಕೋಟೆಯ ವಿಮಾನ ದುರಂತ. ಈ ದುರಂತದಲ್ಲಿ ಪೈಲಟ್‌ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, 125 ಮಂದಿ ಗಾಯಗೊಂಡಿದ್ದಾರೆ. ವಿಮಾನ ಚಾಲನೆ ಮಾಡುತ್ತಿದ್ದ ಇಬ್ಬರು ಪೈಲಟ್‌ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ ಸಾರ್ವಜನಿಕರ ಶ್ಲಾಘನೆ ಮಾತುಗಳನ್ನು ಕೇಳಲು ಆ ಇಬ್ಬರೂ ಇಂದು ನಮ್ಮ ಜತೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next