ಬೆಂಗಳೂರು: ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಸಂವಿಧಾನ ತಿದ್ದುಪಡಿ ತರುವ ಸಂಬಂಧ ಪ್ರಧಾನಿ ಮೋದಿ ಅವರಿಗೆ ಇನ್ನೊಮ್ಮೆ ಪತ್ರ ಬರೆಯಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಆಯ್ಕೆ ಪಾಲಕರ ವಿವೇಚನೆಗೆ ಬಿಟ್ಟಿದ್ದು ಎಂಬ ಸುಪ್ರೀಂ ಕೋರ್ಟ್ ಆದೇಶದಿಂದ ಪ್ರಾದೇಶಿಕ ಭಾಷೆಗಳ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಅಥವಾ ಶಾಲಾ ಮಕ್ಕಳ ಮಾಧ್ಯಮದ ಆಯ್ಕೆಯನ್ನು ಸರಕಾರ ನಿರ್ಧರಿಸುಂತೆ ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದರು.
ಮಕ್ಕಳ ಶಿಕ್ಷಣದ ಮಾಧ್ಯಮ ಆಯ್ಕೆಯ ಸಂವಿಧಾನ ತಿದ್ದುಪಡಿಗಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಯಾವುದೇ ಸ್ಪಂದನೆ ಬಂದಿಲ್ಲ. ಪ್ರಧಾನಿಯವರ ಮೇಲೆ ಒತ್ತಡ ಹೇರುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಸಾಹಿತಿ ಪ್ರೊ| ಚಂದ್ರಶೇಖರ್ ಪಾಟೀಲ್ ಅವರ ಸಲಹೆ ಪಡೆದು, ಇನ್ನೊಮ್ಮೆ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಕಳೆದ ಅನೇಕ ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಚಿಕಿತ್ಸೆ ಆರಂಭಿಸಿದ್ದೇವೆ. ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಸರಕಾರಿ ಶಾಲೆ ಮುಚ್ಚದಂತೆ ಆದೇಶ ಮಾಡಿದ್ದೇವೆ. ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ದಶಕಗಳ ಹಿಂದೆ ಸರಕಾರಿ ಶಾಲೆಗಳಲ್ಲಿ ಇದಷ್ಟು ಒಳ್ಳೆಯ ಶಿಕ್ಷಕರು ಇಂದು ಇಲ್ಲ. ಹಾಗೆಯೇ ಅಧಿ ಕಾರಿಗಳು ಕೂಡ ಶಾಲೆಗಳಿಗೆ ತಪಾಸಣೆಗೆ ಹೋಗುವುದನ್ನೇ ನಿಲ್ಲಿಸಿ ಬಿಟ್ಟಿ ದ್ದಾರೆ. ಆದ್ದರಿಂದಲೇ ಸರಕಾರಿ ಶಾಲೆಗಳನ್ನು ಕೇಳುವವರು ಇಲ್ಲದಾಗಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ನಡೆಯನ್ನು ಖಂಡಿಸಿದರು.
ಸರಕಾರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಏನು ಮಾಡುತ್ತಿದೆ ಎಂಬುದೇ ಅನುಮಾನಾಸ್ಪದವಾಗಿದೆ. 80 ಲಕ್ಷ ಹೆತ್ತವರು, 43 ಸಾವಿರ ಶಾಲೆಗಳು, 8 ಲಕ್ಷ ಎಸ್‌ಡಿಎಂಸಿ ಸದಸ್ಯರಿದ್ದಾರೆ. ಆದರೂ, ಇಂಗ್ಲಿಷ್ ವ್ಯಾಮೋಹದ ಹೆತ್ತವರ ಸಂಖ್ಯೆ ಕುಗ್ಗಿಲ್ಲ. ಸರಕಾರಿ ಶಾಲೆಗಳ ಉಳಿವಿಗಾಗಿ ಎಸ್‌ಡಿಎಂಸಿಗಳಿಂದ ಜಾಗೃತಿ ಅಭಿಯಾನ ನಡೆದಿದೆಯೇ ಎಂದು ಪ್ರಶ್ನಿಸಿದರು.
ಡ್ಯಾಡೀ, ಮಮ್ಮಿ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಪಾಲಕರನ್ನು ಇಂಗ್ಲಿಷ್ ವ್ಯಾಮೋಹದಿಂದ ದೂರ ಮಾಡಬೇಕು. ಸರಕಾರಿ ಶಾಲೆಗೆ ಅನುದಾನ ಹೆಚ್ಚಾಗುತ್ತಿದೆ. ಆದರೆ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗದಂತೆ ನಿಯಂತ್ರಿಸಲು ಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಆರ್‌ಟಿಇ ಪುನರ್ ಪರಿಶೀಲನೆ: ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇs… ಮಾತನಾಡಿ, ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಯಲ್ಲಿ ಈ ವರ್ಷ ಏರಿಕೆಯಾಗಿದೆ. ವಿದ್ಯಾರ್ಥಿಗಳ ದಾಖಲಾತಿ 46 ಲಕ್ಷದಿಂದ 49 ಲಕ್ಷಕ್ಕೆ ಏರಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರತಿ ವರ್ಷ ಖಾಸಗಿ ಶಾಲೆಗಳಿಗೆ ಮಕ್ಕಳಿಗೆ ಸರಕಾರದ ಹಣದಿಂದಲೇ ಪ್ರವೇಶ ನೀಡುತ್ತಿರುವ ಬಗ್ಗೆ ಪುನರ್ ಪರಿಶೀಲನೆ ನಡೆಸಲಿದ್ದೇವೆ. 13,000 ಖಾಸಗಿ ಶಾಲೆಗಳ ಪೈಕಿ ಸುಮಾರು 5,000 ಖಾಸಗಿ ಶಾಲೆಗಳು ಆರ್‌ಟಿಇ ಹಣದಿಂದಲೇ ನಡೆಯುತ್ತಿವೆ. ಹೀಗಾಗಿ ಆರ್‌ಟಿಇ ಪುನರ್ ಪರಿಶೀಲನೆ ಅಗತ್ಯ ಎಂದರು.