Advertisement
ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜ ಮನೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪುತ್ರ ಅಮಿತ್ ಕಾರಿಂಜನನ್ನು ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಅವರು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಲೇಷ್ಯಾಕ್ಕೆ ಕೊಂಡೊಯ್ಯುವ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದ್ದರು. 2013ರ ಮಾರ್ಚ್ 2ರಂದು ಆತನಲ್ಲಿ ಎಲೆಕ್ಟ್ರಾನಿಕ್ ವಸ್ತು ಎಂದು ಹೇಳಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಿ ನೀಡಿದ್ದು, ಇದು ಆತನಿಗೆ ಗೊತ್ತಿಲ್ಲದೆ, ಮಲೇಷ್ಯಾ ತಲುಪುತ್ತಿದ್ದಂತೆ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದ. ಈಗ ಜೀವಕ್ಕೆ ಸಂಚಕಾರವಾಗುವ ಶಿಕ್ಷೆಯನ್ನು ಆತನಿಗೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ.
ನೀಡಿದ್ದ ಆರೋಪಿಗಳು
ಘಟನೆ ನಡೆದ ಬಳಿಕ ಆರೋಪಿಗಳು ನಿಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಹೊಣೆ ನಮ್ಮದೆಂದು ತಿಳಿಸಿ, ಪ್ರಕರಣವನ್ನು ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ ಕಾರಣ ಇಷ್ಟು ವರ್ಷ ದೂರು ನೀಡಲಾಗದೆ ಅಸಹಾಯಕರಾಗಿದ್ದೆವು. ಇತ್ತೀಚೆಗೆ ಮಗನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಬಳಿಕ ಆರೋಪಿತರು ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಮತ್ತು ನಿಮ್ಮ ಜೀವ ಉಳಿಯದು ಎಂದು ಜೀವ ಬೆದರಿಕೆಯೊಡ್ಡಿರುವುದಲ್ಲದೆ ಬಳಿಕ ಮೊಬೈಲ್ ಸ್ವಿಚ್‌ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ದುಡಿದು ಬದುಕು ರೂಪಿಸ ಬೇಕೆಂದು ಹಂಬಲಿಸಿ ಕೆಲಸ ಹುಡುಕಾಟದಲ್ಲಿದ್ದ ನನ್ನ ಮಗನ ಮುಗ್ಧತೆಯನ್ನು ದುರುಪಯೋಗಪಡಿಸಿ, ಆತನ ಮೂಲಕ ಮಾದಕ ದ್ರವ್ಯ ಸಾಗಿಸಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.