Advertisement

ತಾಯಿ, ಸಹೋದರಿಯ ಕೊಂದ ವೈದ್ಯ

11:55 AM Dec 02, 2018 | Team Udayavani |

ಬೆಂಗಳೂರು: ವೈದ್ಯನೊಬ್ಬ ತನ್ನ ತಾಯಿ ಮತ್ತು ಸಹೋದರಿಗೆ ಇನ್ಸುಲಿನ್‌ (ಮಧುಮೇಹ ಕಾಯಿಲೆಗೆ ಸಂಬಂಧಿಸಿದ ಔಷಧ) ಕೊಟ್ಟು ಹತ್ಯೆಗೈದು ಬಳಿಕ ತಾನೂ ಇಂಜಕ್ಷನ್‌ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಗ್ಗೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಮೂಲದ ಮೂಕಾಂಬಿಕಾ (76), ಇವರ ಪುತ್ರಿ ಶ್ಯಾಮಲಾ (46) ಹತ್ಯೆಯಾದವರು. ಕೃತ್ಯವೆಸಗಿ ಆತ್ಮಹತ್ಯೆಗೆ ಯತ್ನಿಸಿದ ವೈದ್ಯ ಗೋವಿಂದಪ್ರಕಾಶ್‌ ಸ್ಥಿತಿ ಗಂಭೀರವಾಗಿದ್ದು, ರಾಜರಾಜೇಶ್ವರಿನಗರದ ಖಾಸಗಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆಯಲಾಗಿದೆ. ಪತ್ರದಲ್ಲಿ ಮೂವರೂ ಸಹಿ ಮಾಡಿದ್ದಾರೆ. ಈ ಸಂಬಂಧ ಮೂಕಾಂಬಿಕಾ ಅವರ ಪತಿ ಸುಬ್ಬರಾಯ್‌ ಭಟ್‌ ಆರ್‌.ಆರ್‌.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ರಾತ್ರಿ ಗೋವಿಂದಪ್ರಕಾಶ್‌, ತಾಯಿ ಮತ್ತು ಸಹೋದರಿಗೆ ಡಯಾಬಿಟಿಸ್‌ ಇಂಜಕ್ಷನ್‌ ಅನ್ನು ಓವರ್‌ ಡೋಸ್‌ ಕೊಟ್ಟು ಹತ್ಯೆ ಮಾಡಿದ್ದು, ಬಳಿಕ ತಾನೂ ಅದೇ ಇಂಜಕ್ಷನ್‌ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶನಿವಾರ ಬೆಳಗ್ಗೆ ಸುಬ್ಬರಾಯ್‌ ಭಟ್‌ ಅವರು ಕೊಠಡಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಸುಬ್ಬರಾಯ್‌ ಭಟ್‌ ನಿವೃತ್ತ ಶಿಕ್ಷಕರಾಗಿದ್ದು, 2002ರಿಂದ ಬೆಂಗಳೂರಿನ ರಾಜರಾಜೇಶ್ವರಿನಗರದ ಮುನಿವೆಂಕಟಯ್ಯ ಸ್ಮಾರಕ ನಗರಸಭಾ ಬಯಲು ಮಂದಿರ ಬಳಿಯ ಐಡಿಯಲ್‌ ಹೋಮ್ಸ್‌ನಲ್ಲಿ ವಾಸವಾಗಿದ್ದಾರೆ. ಪತ್ನಿ ಮೂಕಾಂಬಿಕಾ ಮನೆಯಲ್ಲೇ ಇರುತ್ತಿದ್ದು, ಪುತ್ರಿ ಶ್ಯಾಮಲಾ ವಕೀಲೆಯಾಗಿದ್ದರು. ಪುತ್ರ ಗೋವಿಂದಪ್ರಕಾಶ್‌ ಮಧುಮೇಹ ರೋಗ ತಜ್ಞರಾಗಿದ್ದಾರೆ.

Advertisement

ಮಾನಸಿಕ ಖನ್ನತೆ: ಗೋವಿಂದಪ್ರಕಾಶ್‌, ವಿಜಯನಗರದ ಹಂಪಿನಗರದಲ್ಲಿ ಕ್ಲಿನಿಕ್‌ ತೆರೆದಿದ್ದರು. ಅಲ್ಲದೆ, ನಗರದ ಎರಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿಯೂ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಕ್ಲಿನಿಕ್‌ ಮುಚ್ಚಿ ಎಲ್ಲ ವೈದ್ಯಕೀಯ ಉಪಕರಣಗಳನ್ನು ಮನೆಗೆ ತಂದಿದ್ದು, ಮನೆಯಲ್ಲೇ ಇರುತ್ತಿದ್ದರು. ಈ ಮಧ್ಯೆ ಗೋವಿಂದಪ್ರಕಾಶ್‌ 10 ವರ್ಷಗಳಿಂದ ಅತಿಯಾದ ತಲೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ಸಹೋದರಿ ಶ್ಯಾಮಲಾ 1994ರಲ್ಲಿ ಮದುವೆಯಾಗಿದ್ದು, ಎರಡೇ ವರ್ಷಕ್ಕೆ ವಿಚ್ಛೇದನವಾಗಿತ್ತು. ಹೀಗಾಗಿ ತವರು ಮನೆಯಲ್ಲೇ ವಾಸವಾಗಿದ್ದು, ವಕೀಲೆಯಾಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಶ್ಯಾಮಲಾಗೆ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮದುವೆ ಮುರಿದು ಬಿದ್ದಿತ್ತು. ಈ ನಡುವೆ ಶ್ಯಾಮಲಾ ಕೂಡ ಬೆನ್ನುನೋವು, ತಲೆನೋವು, ಮೈಕೈ ಸೆಳೆತದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ತಾಯಿ ಮೂಕಾಂಬಿಲಾ ಅವರು ಸಹ ತಲೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇಷ್ಟು ವರ್ಷವಾದರೂ ಪುತ್ರ ಗೋವಿಂದಪ್ರಕಾಶ್‌ಗೆ ಮದುವೆಯಾಗಿಲ್ಲ. ಪುತ್ರಿ ಶ್ಯಾಮಲಾ ಜೀವನ ಕೂಡ ಅತಂತ್ರವಾಗಿದೆ ಎಂದು ಮಾನಸಿಕ ಖನ್ನತೆಗೆ ಒಳ್ಳಗಾಗಿದ್ದರು ಎಂದು ಪೊಲೀಸರು ಹೇಳಿದರು.

ಇನ್ಸುಲಿನ್‌ ಓವರ್‌ ಡೋಸ್‌: ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಾಲ್ವರೂ ಊಟ ಮುಗಿಸಿದ್ದಾರೆ. ಸುಬ್ಬರಾಯ್‌ ಭಟ್‌ ಕಾಲು ನೋವಿನ ಮಾತ್ರೆ ಸೇವಿಸಿ ಮಲಗಿದ್ದರು. ಈ ಮಧ್ಯೆ ಮೂವರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ನಂತರ ವೈದ್ಯ ಗೋವಿಂದರಾಜು ತನ್ನ ಬಳಿಯಿದ್ದ ಮಧುಮೇಹದ ಔಷಧವನ್ನು ತಾಯಿ ಮತ್ತು ಸಹೋದರಿಗೆ ಓವರ್‌ ಡೋಸ್‌ ಕೊಟ್ಟು ಕೊಂದಿದ್ದಾರೆ.

ಬಳಿಕ ತಾನೂ ಅದೇ ಇಂಜಕ್ಷನ್‌ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸುಬ್ಬರಾಯ್‌ ಭಟ್‌, ಪುತ್ರಿಯ ಕೊಠಡಿಗೆ ಹೋಗಿ ನೋಡಿದಾಗ ಮೂವರೂ ಅಂಗಾತವಾಗಿ ಮಲಗಿದ್ದರು. ಅಲ್ಲದೆ, ಪತ್ನಿ ಮತ್ತು ಪುತ್ರಿಯ ಕಣ್ಣಿನಲ್ಲಿ ಹತ್ತಿ ಇಡಲಾಗಿತ್ತು.

ಇದರಿಂದ ಅನುಮಾನಗೊಂಡ ಸುಬ್ಬರಾಯ್‌, ಕೂಡಲೇ ಪಕ್ಕದ ಮನೆಯ ಕೃಷ್ಣ ಎಂಬುವವರನ್ನು ಕರೆದು ಪರಿಶೀಲಿಸಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವೈದ್ಯ ಅಡಿಗ ಎಂಬುವರನ್ನು ಕರೆಸಿ ಪರಿಶೀಲಿಸಿದಾಗ ಪುತ್ರ ಗೋವಿಂದಪ್ರಕಾಶ್‌ ಉಸಿರಾಡುತ್ತಿದ್ದದ್ದು ಪತ್ತೆಯಾಯಿತು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಎರಡು ಬಾರಿ ಆತ್ಮಹತ್ಯೆಗೆ ಯತ್ನ: ಅನಾರೋಗ್ಯ ಮತ್ತು ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಮೂಕಾಂಬಿಕಾ, ಶ್ಯಾಮಲಾ ಹಾಗೂ ಗೋವಿಂದಪ್ರಕಾಶ್‌ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಚಿಂತಿಸಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು. ಮೂರು ವರ್ಷಗಳ ಹಿಂದೆ ಸುಬ್ಬರಾಯ್‌ ಭಟ್‌ ಜತೆ ಪತ್ನಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದರು.

ಆದರೆ, ಇದಕ್ಕೆ ಸುಬ್ಬರಾಯ್‌ ಭಟ್‌ ನಿರಾಕರಿಸಿದರು. ಮೂರು ತಿಂಗಳ ಹಿಂದೆ ಮತ್ತೂಮ್ಮೆ ಆತ್ಮಹತ್ಯೆ ಬಗ್ಗೆ ಚರ್ಚಿಸಿದಾಗ ಸುಬ್ಬರಾಯ್‌ ಭಟ್‌ ಅವರು ಪತ್ನಿ, ಪುತ್ರಿ ಮತ್ತು ಪುತ್ರನಿಗೆ ಬೈದಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ನಾನು ಕೊಂದು ಕೊಳ್ಳುವುದಿಲ್ಲ. ಸಾವು ಬಂದರೆ ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಗೋವಿಂದಪ್ರಕಾಶ್‌ ಚೇತರಿಸಿಕೊಂಡ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದರು.

ಡೆತ್‌ನೋಟ್‌ ಪತ್ತೆ: ಗೋವಿಂದಪ್ರಕಾಶ್‌ ತನ್ನ ವೈದ್ಯಕೀಯ ಲೆಟರ್‌ ಹೆಡ್‌ನ‌ಲ್ಲಿಯೇ ನಗರ ಪೊಲೀಸ್‌ ಆಯುಕ್ತರು, ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್‌ ಆಯುಕ್ತರು ಹಾಗೂ ಆರ್‌.ಆರ್‌.ನಗರ ಠಾಣಾಧಿಕಾರಿಗಳ ವಿಳಾಸಕ್ಕೆ ಡೆತ್‌ನೋಟ್‌ ಬರೆದಿದ್ದು, “ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವೇ ಕಾರಣ.

ನನಗೆ ಮದುವೆಯಾಗಲಿಲ್ಲ. ಸಹೋದರಿ ಅನಾರೋಗ್ಯದಿಂದ ಬಳಲುತ್ತಿದ್ದರು. ತಾಯಿ ಕೂಡ ಅನಾರೋಗ್ಯಕ್ಕೆ ತುತ್ತುಗಾಗಿದ್ದರು. ಹೀಗಾಗಿ ಮೂವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದಿದ್ದಾರೆ. ಅಲ್ಲದೆ, ಡೆತ್‌ನೋಟ್‌ನಲ್ಲಿ ಮೂವರೂ ಸಹಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಘಟನೆ ಸಂಬಂಧ ಗೋವಿಂದಪ್ರಕಾಶ್‌ ವಿರುದ್ಧ ಕೊಲೆ ಹಾಗೂ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-ರವಿ ಡಿ. ಚೆನ್ನಣ್ಣನವರ್‌, ಪಶ್ಚಿಮ ವಲಯ ಡಿಸಿಪಿ  

Advertisement

Udayavani is now on Telegram. Click here to join our channel and stay updated with the latest news.

Next