ಅದೊಂದು ತಿಳಿ ಸಂಜೆ. ತಂಗಾಳಿ ಮೈ ಸೋಕುತ್ತಿತ್ತು. ಮೊಬೈಲ್ ಬೆಳಕು ಕಣ್ಣಿಗಪ್ಪುತ್ತಿತ್ತು. ವಾಟ್ಸ್ಯಾಪ್ ಬಳಸುತ್ತಿದ್ದೆ. ಗೆಳತೊಯೋರ್ವಳು ಹಾಕಿದ್ದ ಸ್ಟೇಟಸ್ ನನ್ನ ಭಾವನೆಗಳಿಗೆ ರಂಗು ತುಂಬಿಸಿತು.
‘Mom’s saree, daughter’s treasure’ ಕೇಳೊಕೆ ಎಷ್ಟೊಂದು ಹಿತವಾಗಿದೆಯೋ ಅಷ್ಟೇ ಪರಿಶುದ್ಧವಾಗಿದೆ. ಅದೊಂದು ಸುಂದರ ಅನುಭವ. ಮಧುರ ಅನುಭೂತಿ. ವಸ್ತ್ರವಿನ್ಯಾಸದಲ್ಲಿ ಅದೆಷ್ಟೇ ಹೊಸತನವನ್ನು ಕಂಡುಕೊಂಡರೂ, ಪ್ಯಾಶನ್ ಯುಗಕ್ಕೆ ಮಣಿಸಲಾಗದ ವಸ್ತ್ರ ಅಂದರೆ ಅದು ” ಅಮ್ಮನ ಸೀರೆ”. ನನ್ನ ಪ್ರಕಾರ, ಅಮ್ಮನ ಸೀರೆಗೆ ಪರ್ಯಾಯವೆನ್ನುವುದೇ ಇಲ್ಲ.
ಓದಿ : 5000ಕ್ಕೂ ಹೆಚ್ಚು ಕ್ರಿಕೆಟ್ ಬ್ಯಾಟ್ ತಯಾರಿಸಿದ – ಲೋಕಲ್ ಬ್ಯಾಟ್ ಡಾಕ್ಟರ್
ಪ್ರತಿಯೊಂದು ಆಚಾರ ವಿಚಾರ, ಉಡುಗೆ ತೊಡುಗೆಗಳಲ್ಲಿ ಹೊಸತನ ಹುಡುಕುವ ಪ್ಯಾಶನ್ ಯುಗದಲ್ಲಿ ಎಷ್ಟೇ ರೂಪಾಂತರವನ್ನು ಸೀರೆ ಪಡೆದುಕೊಂಡರೂ, ಅಮ್ಮನ ಸೀರೆಯ ವ್ಯಾಮೋಹ ಹೆಣ್ಣುಮಕ್ಕಳಲ್ಲಿ ಕಡಿಮೆಯಾಗುತ್ತದೆ ಎನ್ನುವುದು ಕನಸಿನ ಮಾತು.
ಹೌದು! ಆ ಒಂದು ಸೀರೆ, ಎಷ್ಟೇ ವರ್ಷ ಸಂದರೂ ಬಣ್ಣ ಮಾಸಿದರೂ, ಮಗಳಿಗೆ ಅದು ಸಂಬಂಧ, ಬಂಧನ ವಿಶ್ವಾಸದ ತೇರು. ಆ ತೇರನ್ನು ಎಳೆದಷ್ಟೂ ನೆನಪುಗಳ ಬುತ್ತಿ ಬಿಚ್ಚಿಕೊಳ್ಳುವುದು; ನೆನಪುಗಳನ್ನು ಮತ್ತೆ ಮತ್ತೆ ಪೋಣಿಸುತ್ತದೆ. ಆ ಸೀರೆಯ ಸೆರಗಿನ ಅಂಚನ್ನು ಹಿಡಿದು ನಡೆದಾಗ ಯಾವ ಭಯವಿತ್ತು! ಜನಜಂಗುಳಿಯ ಜಾತ್ರೆಯಲ್ಲಿ ಎರಡು ಕಣ್ಣುಗಳು ಆಟದ ವಸ್ತುಗಳ ಮೇಲೆ ಇದ್ದರೂ, ಆ ಸೆರಗಿನ ಅಂಚನ್ನು ಹಿಡಿದು ನಡೆಯುವಾಗ ತಪ್ಪಿಸಿಕೊಳ್ಳುವ ಪ್ರಸಂಗ ಎದುರಾದಿತೇ ? ವಾವ್ಹ್ .. ಆ ಭಾವಕ್ಕೇನನ್ನಲಿ..?
ಆರು ಅಂಚಿನ ಸೀರೆಯಲ್ಲಿ ಚೂಡಿದಾರ್, ಲಂಗ- ರವಿಕೆ ಹೊಲಿಸಿ ಹಾಕೊಂಡು ತಿರುಗಾಡಿದ ಆ ದಿನಗಳನ್ನು ಮರೆಯಲು ಹೇಗೆ ಸಾಧ್ಯ!
ಕಪಾಟಿನ ಬಾಗಿಲನ್ನು ತೆರೆದು ಕಣ್ಣಿಗೆ ಹಿಡಿಸಿದ ಬಣ್ಣದ ಸೀರೆಯನ್ನು ಉಟ್ಟು ಕನ್ನಡಿ ಮುಂದೆ ನಿಂತು, ತನ್ನನ್ನು ತಾನು ಮೆಚ್ಚಿಕೊಂಡು ಹಿಗ್ಗಿದ ಸಂತಸದ ಕ್ಷಣಗಳಿಗೆ ಪಾರವೆ ಇರಲಿಲ್ಲ. ಎಷ್ಟೇ ದುಬಾರಿ ಬೆಲೆಯ ಸೀರೆ ಇದ್ದರೂ ಅಮ್ಮನ ಸೀರೆ ಉಟ್ಟಾಗ ಸಿಗುವ ಅನುಭೂತಿ ಒಮ್ಮೆಯಾದರೂ ಅನುಭವಿಸದಿದ್ದರೆ ದೇವಸ್ಥಾನಕ್ಕೆ ಹೋಗಿ ಪ್ರಸಾದ ಸ್ವೀಕರಿಸದ ಹಾಗೆ ಅಲ್ಲವೆ?
ಹತ್ತು ವರ್ಷಗಳ ಹಿಂದೆ ಮಳೆ ಬಂದು ಚಳಿಯಿಂದ ನಡುಗುವ ದೇಹಕ್ಕೆ ಬೆಚ್ಚಗಿನ ಹೊದಿಕೆಯಾಗುವ ಅಮ್ಮನ ಹಳೆಯ ಸೀರೆ ಮೂಲೆಗುಂಪು ಸೇರುವ ಅವಕಾಶವೇ ಇರಲಿಲ್ಲ. ಆದರೆ ಈಗ ಮೆತ್ತನೆಯ ಹಾಸಿಗೆ, ಕಂಬಳಿಗಳು ಆ ಸೀರೆಗಳಿಗೆ ಕಪಾಟಿನ ಮೂಲೆಯಲ್ಲಿ ಮಾತ್ರ ಜಾಗನೀಡಿದೆ. ಆದರೂ ಅಮ್ಮನ ಸೀರೆ ಉಡುವುದು ಅಂದರೆ ಮನಸ್ಸಿಗೆ ಏನೋ ಖುಷಿ. ಬಣ್ಣ ಮಾಸಿ, ಎಷ್ಟೇ ಹಳತ್ತದರೂ ಮಗಳು ಉಟ್ಟಾಗ ಮಾತ್ರ, ತುಳುವಿನ ಗಾದೆ ‘ಪದಿನಾಜಿ ವರುಸದ ಪೊಣ್ಣು ಪರತ್ತು ಕುಂಟುಡುಲಾ ಪೊರ್ಲು ತೋಜುವಳು’ ಎಂಬಂತೆ ಚಂದಗಾಣಿಸುವ ಅಮ್ಮನ ಸೀರೆಯನ್ನು ಉಟ್ಟಿಕೊಳ್ಳುವುದು ಮಗಳ ಜನ್ಮಸಿದ್ಧಾಂತ ಹಕ್ಕಲ್ಲದೇ ಮತ್ತೇನು..?
ಓದಿ : ಮಮತಾ ಬ್ಯಾನರ್ಜಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟೆಂದು ನಿಮಗೆ ತಿಳಿದಿದೆಯೇ..?
ಅತ್ತೆ ಮನೆಗೆ ತಗೊಂಡುಹೋಗುವ ಸಂಡಿಗೆಯಲ್ಲೂ ತವರಿನ ನಂಟು. ಅಕ್ಕಿ, ಈರುಳ್ಳಿ ಮಿಶ್ರಣವನ್ನು ಹಾಕಾಲು ಅಮ್ಮನ ನೈಲಾನ್ ಸೀರೆ ಬಿಟ್ಟು ಬೇರಾವುದು ಸೂಕ್ತವಾದಿತು ?
ತವರಿನ ಸಿರಿ ಹೆಣ್ಣುಮಕ್ಕಳಿಗೆ ಅಮ್ಮನ ಸಾರಿ; ಅದನ್ನು ಉಡುವುದೆಂದರೆ ಅದೊಂದು ಸಾಹಸ ! ಎಷ್ಟೇ ಎಳೆದು ಹಿಡಿದರೂ ನಿಲ್ಲದ ನೆರಿಗೆ, ಗಾಳಿಗೆ ಹಾರಿ ಬಿಚ್ಚಿಕೊಳ್ಳುವ ಸೆರಗಿನ ಮಡಿಕೆ, ಭುಜ, ಎದೆ, ಬೆನ್ನು ಸೊಂಟ ಒಟ್ಟಿನಲ್ಲಿ ಎಲ್ಲ ಕಡೆಗಳಲ್ಲಿಯೂ ಕಣ್ಣಿಗೆ ಕಾಣದಂತೆ ಪಿನ್ ಹಾಕಿಕೊಳ್ಳುವುದು ಸಾಮನ್ಯದ ಕೆಲಸವೇ! ಕೊನೆಗೆ ಎಲ್ಲವೂ ಸರಿಯಾಗಿದೆ ಎಂದು ತಟಪಟ ನಡೆದುಕೊಂಡು ಹೋದರೆ ಬೀಳುವುದು ಖಂಡಿತ. ಇಷ್ಟೆಲ್ಲಾ ವಿಷಯದ ಬಗ್ಗೆ ಜಾಗೃತವಹಿಸಿ ಸೀರೆ ಉಡುವುದು ಪ್ರಾಯಾಸಕರ ಆದರೂ ಅಮ್ಮನ ಸೀರೆ ಉಡುವ ಬಯಕೆಗೆ ಎಲ್ಲೆಯ ಮಾತೆಲ್ಲಿ..?
ಸೀರೆ ಸುಕ್ಕು ತೇಗೆದು ಅಚ್ಚುಕಟ್ಟಾಗಿ ಕಪಾಟಿನಲ್ಲಿ ಜೋಡಿಸುವಾಗ, ಸಂಸಾರದ ತೇರನ್ನು ಎಳೆಯಲು ಅಣಿಯಾಗಿರುವ ಮಗಳಿಗೆ ಅತ್ತೆಮನೆಯ ದೋಷ, ಒಡಕು, ಮನಸ್ತಾಪವೆಂಬ ಸುಕ್ಕು ನಿವಾರಣೆ ಮಾಡಿ, ಸಂಬಂಧವನ್ನು ಜೋಡಿಸುವ ಕೆಲಸವನ್ನು ನೆನಪಿಸುವ “ಅಮ್ಮನ ಸೀರೆ ಮಗಳ ಆಭರಣ”.
-ಪೂಜಶ್ರೀ ತೋಕೂರು
ಆಳ್ವಾಸ್ ಕಾಲೇಜು, ಮೂಡುಬಿದಿರೆ.
ಓದಿ : ಗಂಡನನ್ನು ಹೆಗಲ ಮೇಲೆ ಹೊತ್ತೊಯ್ಯುವ ಸ್ಪರ್ಧೆ : ಇದರ ಉದ್ದೇಶ ಏನು ಗೊತ್ತಾ?