ಕುಂದಾಪುರದ ಬಹುವರ್ಷಗಳ ಬೇಡಿಕೆಯಾದ ತಾಯಿ ಮಕ್ಕಳ ಆಸ್ಪತ್ರೆ ಕೊನೆಗೂ ಮಂಜೂರಾಗಿದೆ. ಈ ಮೂಲಕ ಹೆರಿಗೆ ಆಸ್ಪತ್ರೆ ಇದ್ದ ಕಟ್ಟಡ ಇನ್ನು ಮುಂದೆ ಪೂರ್ಣ ಪ್ರಮಾಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ. ಆದೇಶ ದಾಖಲೆಗಷ್ಟೇ ಸೀಮಿತವಾಗುವ ಬದಲು ವೈದ್ಯರ ನೇಮಕ ಕ್ಷಿಪ್ರವಾಗಿ ಆಗಬೇಕಿದೆ.
ಕುಂದಾಪುರದಲ್ಲಿ ಲಕ್ಷ್ಮೀ ಸೋಮ ಬಂಗೇರ ನೆನಪಿನಲ್ಲಿ ಜಿ. ಶಂಕರ್ ಅವರು 3 ಕೋ.ರೂ. ವೆಚ್ಚದಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಇದರಲ್ಲೇ ನಡೆಸಬಹುದಾಗಿದ್ದು ಮಾನವ ಸಂಪನ್ಮೂಲ ಒದಗಿಸಿಕೊಡಬೇಕೆಂದು 2019ರಲ್ಲಿ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರಕಾರ ತಾಯಿ ಮರಣ, ಶಿಶು ಮರಣ ಕಡಿಮೆಗೊಳಿಸುವ ಸಲುವಾಗಿ ಕುಂದಾಪುರಕ್ಕೆ ತಾಯಿ ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದೆ.
ರಾಜ್ಯದ 15 ಆಸ್ಪತ್ರೆಗಳಿಗೆ 339 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಶುಶ್ರೂಷಕಿಯರ ಹುದ್ದೆಗೆ 82 ಹುದ್ದೆಗಳು ಗುತ್ತಿಗೆ ಆಧಾರದಲ್ಲಿ, ಉಳಿದ 81 ಹುದ್ದೆಗಳು ನೇರ ನೇಮಕಾತಿಯಲ್ಲಿ, ಕಿರಿಯ ಶುಶ್ರೂಷಕರು, ಫಾರ್ಮಾಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞ , ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್‌ನ 118 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ, ಸ್ವೀಪರ್, ಗಾರ್ಡ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಬೇಕಾಗುತ್ತದೆ. ಕುಂದಾಪುರಕ್ಕೆ ಒಟ್ಟು 16 ಸಿಬಂದಿ ನೇಮಕವಾಗಬೇಕಿದೆ. ಅರಿವಳಿಕೆ ತಜ್ಞ 1, ರೇಡಿಯಾಲಜಿಸ್ಟ್ 1, ಶುಶ್ರೂಷಕರು 6, ಶುಶ್ರೂಶಕಿ ಕಿರಿಯ 1, ಕಿರಿಯ ಪ್ರಯೋಗಶಾಲಾ ತಂತ್ರಜ್ಞ 1, ದ್ವಿತೀಯ ದರ್ಜೆ ಸಹಾಯಕ 2, ಡಾಟಾ ಎಂಟ್ರಿ ಆಪರೇಟರ್ 1, ಗ್ರೂಪ್ ಡಿ 3 ಹುದ್ದೆ ಮಂಜೂರಾಗಿದೆ.
ಕುಂದಾಪುರದ ಆಸ್ಪತ್ರೆಗೆ ಅವಶ್ಯವಿರುವ ವ್ಯವಸ್ಥೆಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಆದಲ್ಲಿ ಜಿಲ್ಲಾ ಕೇಂದ್ರದ ಆಸ್ಪತ್ರೆಯ ಒತ್ತಡವೂ ಕಡಿಮೆಯಾಗಲಿದೆ. ಗ್ರಾಮಾಂತರ ಪ್ರದೇಶಕ್ಕೆ ಇದು ಕೇಂದ್ರ ಸ್ಥಾನದಲ್ಲಿಯೂ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ದೂರದ ಪ್ರದೇಶಗಳಿಗೆ ಪ್ರಯಾಣಿಸುವಾಗ ಆಗುವ ವಿಳಂಬವೂ ತಪ್ಪಲಿದೆ. ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರೆಯಲು ಸಾಧ್ಯವಾಗಲಿದೆ.
ಕುಂದಾಪುರ ಸರಕಾರಿ ಆಸ್ಪತ್ರೆ ಕೊರೊನಾ ಚಿಕಿತ್ಸೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಚಿಕಿತ್ಸೆಗಾಗಿ ಹೆಸರು ಪಡೆದಿತ್ತು. ಜಿಲ್ಲಾಸ್ಪತ್ರೆ ಹೊರತಾಗಿ ಉಪವಿಭಾಗ ಆಸ್ಪತ್ರೆಯೊಂದು ಪ್ರತ್ಯೇಕವಾಗಿ ಕೊರೊನಾ ಚಿಕಿತ್ಸೆಗೆ ತೆರೆದುಕೊಂಡಿದ್ದು ಇಲ್ಲಿಯೇ. ದಾಖಲೆ ಸಂಖ್ಯೆಯಲ್ಲಿ ಹೆರಿಗೆ ಆಗಿದ್ದು ಭಟ್ಕಳ, ಬೈಂದೂರು, ಕುಂದಾಪುರ ತಾಲೂಕಿನ ಮಂದಿ ಇಲ್ಲಿಗೆ ಆಗಮಿಸಿದ್ದರು. ಸೌಕರ್ಯ ಇನ್ನಷ್ಟು ಹೆಚ್ಚಿದಲ್ಲಿ ದೂರದ ಪ್ರದೇಶದ ಜನರೂ ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುವ ಸಾಧ್ಯತೆಗಲು ಹೆಚ್ಚು.
ಕುಂದಾಪುರದ ಆಸ್ಪತ್ರೆಯಲ್ಲಿ ಈಗಾಗಲೇ ಆಕ್ಸಿಜನ್ ಪ್ಲಾಂಟ್ ಕೂಡ ಸಿದ್ಧವಾಗಿದ್ದು ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಪ್ರಾರಂಭವಾದರೆ ಬಡವರಿಗೆ ಚಿಕಿತ್ಸೆಯ ಬಾಗಿಲು ತೆರೆದಂತೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆ ಕ್ಷಿಪ್ರವಾಗಿ ನಡೆದರೆ ಕೊರೊನಾದಂತಹ ಸಂಕಷ್ಟದ ಸಮಯ ಎದುರಾದರೂ ಅದನ್ನು ಎದುರಿಸಲು ಸಾಕಷ್ಟು ಸಹಕಾರಿಯಾಗಲಿದೆ. ಆದುದರಿಂದ ಈ ಬಗ್ಗೆ ಸಂಬಂಧಿಸಿದವರು ತತ್‌ಕ್ಷಣ ಗಮನ ಹರಿಸುವುದು ಉತ್ತಮ.
-ಸಂ.