Advertisement

ಅಮ್ಮ

11:19 PM May 25, 2019 | Sriram |

ಅವಳು ತುಳಸಿ. ನಾನು ಬಹಳ ವರ್ಷಗ‌ಳಿಂದ ಗಮನಿಸುತ್ತಿದ್ದೇನೆ. ನಮ್ಮೂರ ಜೋಡುರಸ್ತೆ ಸಂಧಿಸುವಲ್ಲಿ ರಬ್ಬರಿನ ಬುಟ್ಟಿಯಲ್ಲಿ ಮೀನು ಇರಿಸಿ ಕುಳಿತವಳಿಗೆ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳ ಜೊತೆಗೇ ಹೆಚ್ಚು ಮಾತು. ಅದು ಆಕೆಗೆ ವ್ಯವಹಾರ ಕ್ಕಿಂತ ಸಂಬಂಧ ಹೆಚ್ಚು ಎಂಬುವುದರ ಸೂಚಕ ಎಂದು ನಾನು ತೀರ್ಮಾನಿಸಿದ್ದೆ. ದಿನವಿಡೀ ರಜೆಯೋ ಸಜೆಯೋ ಆಕೆಯದ್ದು ಅಲ್ಲಿಯೇ ಠಿಕಾಣಿ. ಅತ್ತಿಂದಿತ್ತ ನೊಣ ಓಡಿಸುವ ಕೈಗಳು. ಮುಖದಲ್ಲಿ ಹರಡಿರುವ ನಗು. ನನಗ್ಯಾಕೋ ಆಕೆಯ ಆ ನಗುಮುಖ ನೋಡಿದರೆ ಒಳಗೊಳಗೇ ಅಚ್ಚರಿ. ಇಲ್ಲಿ ನಾವುಗಳು ಕೆಲವು ಕ್ಷಣ ನಗುವ ಮೊಗದಲ್ಲಿ ತಂದು ಬಿಗಿದು ಕಟ್ಟಿ ನಿಲ್ಲಿಸಹೊರಟರೆ ಆಗುವುದಿಲ್ಲ. ಇವಳು ಹೇಗೆ ದಿನವಿಡೀ ನಗುವ ಹರಡಿ ಈ ಬಗೆಯಲ್ಲಿ ಬಯಲಲ್ಲಿ ಕುಳಿತಿರುತ್ತಾಳೆ! ಸಂಸಾರದಲ್ಲಿ ಸಂತೃಪ್ತೆ ಮತ್ತು ಸಂಪಾದನೆಯಲ್ಲಿ ಅಲ್ಪತೃಪ್ತೆಯಾಗಿರಬೇಕು. ಒಮ್ಮೆ ದೀರ್ಘ‌ ಮಾತಿಗಿಳಿಯಬೇಕೆಂದನ್ನಿಸಿತ್ತು. ದಿನನಿತ್ಯದ ಆಫೀಸು, ಮನೆ ಓಡಾಟದ ನಡುವೆ ಅದು ಕೈಗೂಡಲಿಲ್ಲ.

Advertisement

ಅಂದು ಅಪರೂಪಕ್ಕೊಂದು ಅನಿರೀಕ್ಷಿತ ರಜೆ. ಏನೋ ಯೋಚಿಸುವಾಗ ಫ‌‌ಕ್ಕನೆ ನೆನಪಾದದ್ದು ಮೀನಿನ ತುಳಸಿ. ಆ ಹೆಸರು ಭಿನ್ನ ಭಾಷಿಗರ ಬಾಯಲ್ಲಿ ಏನೇನೋ ಆಗಿ ಕೇಳುವಾಗ ಹೊಟ್ಟೆ ತೊಳಸುವುದಿತ್ತು. ಆದರೆ, ಏನೋ ಒಂದು ಆಪ್ತತೆ ಆ ಹೆಸರಿನಲ್ಲಿ. ಬೇಗ ಬೇಗ ತಿಂಡಿ ಮುಗಿಸಿ ಚಪ್ಪಲಿ ಮೆಟ್ಟಿ ಹೊರನಡೆದೆ. ನೇರ ಜೋಡುರಸ್ತೆ ಕೂಡುವಲ್ಲಿ ಬಂದು ನಿಂತೆ. ನೋಡುತ್ತೇನೆ, ಬೆಚ್ಚಿಬಿದ್ದೆ ! ತುಳಸಿಯಿಲ್ಲ! ಆಕೆ, ಕೂರುವ ಜಾಗದಲ್ಲಿ ಸಣ್ಣದೊಂದು ಗೂಡಂಗಡಿಯ ತೆರೆಯುವ ಸಿದ್ಧತೆ ಸಾಗಿದೆ. ಗಾಬರಿ, ಬೇಜಾರು ಎರಡೂ ಆಯಿತು. ತುಳಸಿ ಅಲ್ಲಿಲ್ಲದಿದ್ದರೆ ಆ ದಾರಿಗೆ ಚಂದವಿಲ್ಲದ ಹಾಗೆ. ನನ್ನ ನಡಿಗೆ ಬಿರುಸುಗೊಂಡಿತು. ಯಾರಿದು, ಆಕೆಯ ಜಾಗವನ್ನು ಆಕ್ರಮಿಸಿದವರು. ಪ್ರಶ್ನಿಸಬೇಕು, ಓಡಿಸಬೇಕು. ವರ್ಷಗಟ್ಟಲೆ ತುಳಸಿ ಕುಳಿತ ಜಾಗ ನನಗೂ ಸೇರಿದಂತೆ ಹಲವರಿಗೆ ಭಾವನಾತ್ಮಕವಾಗಿ ಬಹಳ ಹತ್ತಿರದ್ದು. ಅದು ಹೇಗೆ ಏಕಾಏಕಿ ಈ ರೀತಿ ಆಕೆಯನ್ನು ಒಕ್ಕಲೆಬ್ಬಿಸಿದರು? ಆಕೆ ತನ್ನ ತಲೆಯ ಮೇಲೆ ಟಾರ್ಪಾಲ್ ಕೂಡ ಹೊದಿಸಿರಲಿಲ್ಲ. ಬಿರುಬಿಸಿಲಿಗೆ ಕೂರಲು ಒಂದು ಪುಟ್ಟ ಕರ್ಗಲ್ಲು. ಅದರ ಮೇಲೆ ದಪ್ಪ ರಟ್ಟಿನ ತುಂಡು. ಮನಸ್ಸು ಯಾಕೋ ನೋವಿನಲ್ಲಿ ಕಿವುಚಿದ ಹಾಗಾಯಿತು. ಅಲ್ಲಿ ನಿಂತು ಕೆಲಸ ಮಾಡಿಸುತ್ತಿದ್ದ ಬಿಳಿ ಕಾಲರ್‌ನ ಯುವಕನನ್ನು ಸಣ್ಣ ಕೆಮ್ಮಿನ ಜೊತೆ ಗಮನ ಸೆಳೆದೆ. ಕಿರಿಕಿರಿಯಾಯಿತೆಂಬಂತೆೆ ಮುಖ ನನ್ನತ್ತ ತಿರುಗಿಸಿದ.

”ತುಳಸಿ…”

ನನ್ನ ಮಾತು ಪೂರ್ತಿಗೊಳಿಸಲು ಆತ ಬಿಡಲಿಲ್ಲ.

”ವೀಟಿಲ್ ಇಂಡ್‌… ಮೀನ್‌ ವಿಕ್ಕೆಲ್ಲ ಇನಿ” ಮತ್ತೆ ಅವನ ಕೆಲಸ ಮುಂದುವರಿಸಿದ. ನನಗೆ ಅವನಲ್ಲಿ ಮಾತಿರಲಿಲ್ಲ. ತುಳಸಿ ಹತ್ತಿರ ಮಾತಿತ್ತು. ಅವಳಿರಲಿಲ್ಲ. ತಲೆಕೆಳಗೆ ಹಾಕಿ ರೂಮ್‌ ಸೇರಿಕೊಂಡೆ. ದಿನಗಳುರುಳಿದ್ದು ಗೊತ್ತೇ ಆಗಲಿಲ್ಲ. ನನ್ನ ದಾರಿ ಅದೇ ಆದರೂ ಬದಲಾವಣೆಗಳು ಬಹಳ ಆಗಿತ್ತು. ತುಳಸಿಯ ಮಗನ ಗೂಡಂಗಡಿ ಗೂಂಡಾ ಅಂಗಡಿಯಾಗಿತ್ತು. ಅಲ್ಲೇ ಸಾಗುತ್ತಿದ್ದಾಗ ನಿಧಾನವಾಗುತ್ತಿದ್ದ ಪಾದಗಳಿಗೀಗ ವಿಪರೀತ ಬಿರುಸು. ಅಮ್ಮಂದಿರು, ಮಕ್ಕಳನ್ನು ಕೈ ಹಿಡಿದು ಎಳೆದೊಯ್ಯುವುದನ್ನು ನೋಡುತ್ತಿದ್ದರೆ ಆತಂಕವಾಗುತ್ತಿತ್ತು. ಹಿಂತಿರುಗಿ ನೋಡುವ ಮಗುವಿನ ಕಣ್ಣ ಹುಡುಕಾಟ ನನಗೆ ಅರ್ಥವಾಗುತ್ತಿತ್ತು. ಉದ್ದುದ್ದ ನೇತಾಡಿಸಿದ ಲೇಸ್‌ ಪ್ಯಾಕೆಟ್‌ಗಳು ಒಣ ಹೂವಿನ ಮಾಲೆಯ ಹಾಗೆ ಕಾಣುತ್ತಿದ್ದವು. ಸುತ್ತ ಸದ್ದೆಬ್ಬಿಸಿ ಬರುವ ಬೈಕುಗಳು. ವ್ಯಾಪಾರ ಏನೂ ಇರಲಿಲ್ಲ. ತುಳಸಿಯ ಮಗ ಸಂಜೆ ಯಾರಲ್ಲೋ ಗೊಣಗುವುದು ಕೇಳಿದ್ದೆ. ”ಅಮ್ಮನಿರುವಾಗ ನೊಣದ ಹಾಗೆ ಜನ… ಈಗ ಯಾರೂ ಇತ್ತ ಸುಳಿಯುವುದಿಲ್ಲ. ಆ ಜನಸಂದಣಿ ನೋಡಿ ಅಂಗಡಿಯಿಟ್ಟೆ. ಈಗ ದಿನವಿಡೀ ಇಲ್ಲಿ ಎದುರು ಬೆಂಚಲ್ಲಿ ಕೂತವನು ಹತ್ತು ರೂಪಾಯಿಯ ವ್ಯಾಪಾರ ಮಾಡುವುದಿಲ್ಲ. ಅಮ್ಮ ಊಟಕ್ಕೆ ಬೇಕಾದಷ್ಟು ಸಂಪಾದಿಸುತ್ತಿದ್ದಳು. ಅವಳನ್ನೇ ನಾಳೆಯಿಂದ ಕೂರಿಸಬೇಕು”

Advertisement

ನನ್ನ ಮುಖದಲ್ಲಿ ನನಗೇ ಅರಿವಿಲ್ಲದೇ ನಗು ಹರಡಿತು. ಮರುದಿನ ತುಸು ಬೇಗ ಹೊರಟೆ. ನೇತಾಡಿಸಿದ ಶ್ಯಾಂಪೂ, ಲೇಸ್‌ ಪ್ಯಾಕೆಟ್ ನಡುವೆ ತುಳಸಿಯ ಮುಖ ಕಂಡೂಕಾಣದ ಹಾಗೆ ಇಣುಕಿತು. ಮಗ ಗುಟ್ಕಾ ಜಗಿಯುತ್ತ ಹೊರಗೆ ಕೂತಿದ್ದ. ಕಾಲು ಯಾಕೋ ವೇಗ ಹೆಚ್ಚಿಸಿತು. ಮೊದಲ ಸಲ ತುಳಸಿಯನ್ನು ಮಾತನಾಡಿಸದೇ ಕೊನೆಯ ಪಕ್ಷ ಒಂದು ನಗು ಕೂಡ ತೋರಿಸದೇ ನನ್ನ ದಾರಿಯಲ್ಲಿ ನಡೆದೆ. ನಾನು ಮಾಡಿದ್ದನ್ನೇ ಉಳಿದವರೂ ಮಾಡಿದರು ಅನ್ನಿಸುತ್ತೆ. ಪಾಪ! ತುಳಸಿಗೆ ಹೇಗೆ ಆಗಿರಬೇಕು. ಸಂಜೆ ಬರುವಾಗ ಅಂಗಡಿಯಲ್ಲಿ ತುಳಸಿ ಇರಲಿಲ್ಲ. ಛೇ! ಮಾತನಾಡಿಸಬೇಕಿತ್ತು ನಾನು. ಗೂಡಂಗಡಿಯೊಳಗಿನ ತುಳಸಿ ನನಗೆ ಪರಿಚಿತಳೆನಿಸಲೇ ಇಲ್ಲ. ಅಮ್ಮನನ್ನು ಎದುರಿಗಿರಿಸಿ ವ್ಯಾಪಾರ ವೃದ್ಧಿ ಮಾಡುವ ಮಗನ ಕನಸು ಕರಗಿತು. ಮತ್ತೆ ತುಳಸಿ ಬರಲಿಲ್ಲ. ನಾನು ಅಂಗಡಿ, ತುಳಸಿ ಎಲ್ಲ ಮರೆತುಬಿಟ್ಟೆ. ಹಾದಿ ಮಾತ್ರ ಉಳಿಯಿತು.

ಅದು ಕಳೆದು ಎರಡು-ಮೂರು ದಿನಗಳಾಗಿರಬೇಕು. ನಾನು ಬರುವಾಗ ರಾತ್ರಿಯಾಗಿತ್ತು. ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ. ಗೂಡಂಗಡಿಯ ಎದುರು ಜನವೋ ಜನ. ಎಲ್ಲ ಕಿರುಹರೆಯದ ತರುಣರು. ಇದೇನು, ಇಲ್ಲಿ ಇಂಥ ಆಕರ್ಷಣೆ. ತಿರುಗಿ ತಿರುಗಿ ನೋಡುತ್ತ ರೂಮ್‌ ಕಡೆ ಹೆಜ್ಜೆ ಹಾಕಬೇಕಾದರೆ ಹೆಂಗಸರ ಗುಂಪು ಅಲ್ಲಲ್ಲಿ ಸಕ್ಕರೆ ಹರಳಿನ ಸುತ್ತ ಸೇರಿದ ಇರುವೆಗಳ ಹಾಗೆ ಕಾಣಿಸಿತು.

”ದೇವಾಲಯದ ಹಾಗಿದ್ದ ಸ್ಥಳ. ದೆವ್ವದ ಮನೆ ಮಾಡಿಬಿಟ್ಟ. ಮಕ್ಕಳು-ಹೆಂಗಸರು ಓಡಾಡೋ ಜಾಗ. ಹೀಗೇ ಆದ್ರೆ ಏನಾದರೂ ತೊಂದರೆ ಆಗದೇ ಇರಲ್ಲ. ಅವನಿಗೆ ಬುದ್ಧಿ ಹೇಳಲು ಹೊರಟ ನಮ್ಮ ಮನೆಯವರನ್ನು ಏನೆಲ್ಲ ಬೈದ ಗೊತ್ತಾ? ಆ ತುಳಸಿಯ ಹೊಟ್ಟೆಯಲ್ಲಿ ಇವ ಹೇಗೆ ಹುಟ್ಟಿದ ಅಂತ!”

ನಾನು ಅದೇ ಯೋಚಿಸಿದೆ. ಮರುದಿನ ನೋಡುವಾಗ ನನಗೊಂದು ಅಚ್ಚರಿ ಕಾದಿತ್ತು. ಅಂಗಡಿಯಲ್ಲಿ ತುಳಸಿ. ನಾಲ್ಕಾರು ರಟ್ಟಿನ ಡಬ್ಬಗಳನ್ನು ಹೊರ ತೆಗೆದು ಬೆಂಕಿಯಲ್ಲಿ ಸುಡುತ್ತಿದ್ದಳು. ಮಗ ಹೊರಗೆ ಗಂಟುಮೋರೆ ಹಾಕಿ ದುರುಗುಟ್ಟಿ ನೋಡುತ್ತಿದ್ದ. ದೂರದಿ ಬೈಕ್‌ಗೆ ಎರಗಿ ನಿಂತು ನೋಡುವ ಪೋಕರಿ ಪೋಲಿ ಹುಡುಗರ ಆಸೆ ಕಣ್ಣು. ನಮ್ಮವರೇ ಯಾರೋ ಮಗನ ವಿಚಾರವನ್ನು ತುಳಸಿಗೆ ತಿಳಿಸಿದ್ದಿರಬೇಕು. ಸ್ವಲ್ಪ ಹೊತ್ತು ನಿಂತು ನಾನೂ ನೋಡಿದೆ. ಅಮ್ಮ-ಮಗನಿಗೆ ಮಾತಿಗೆ ಮಾತು ಬೆಳೆಯಿತು.

”ಹಾಳಾದ ಈ ಗಾಂಜಾ ಮಾರಿ ನೀನು ಸಂಪಾದನೆ ಮಾಡುವುದು ನನಗೆ ಬೇಕಾಗಿಲ್ಲ. ಎಲ್ಲರ ಮನೆ ಹಾಳು ಮಾಡುವುದಲ್ಲದೇ ಈ ಪರಿಸರವನ್ನೇ ಕೆಡಿಸಿಬಿಟ್ಟೆ. ಸಂಸಾರಸ್ಥರು ಇರುವ ಜಾಗ ಇದು. ನಾನು ಇದಕ್ಕೆ ಖಂಡಿತ ಅವಕಾಶ ಕೊಡಲ್ಲ”

”ಏಯ್‌! ಸುಮ್ಮನಿರಮ್ಮ… ಕಂಡಿದ್ದೀನಿ. ನೀನು ಮೀನು ಮಾರುವಾಗ ಇಲ್ಲಿ ಸಸ್ಯಾಹಾರಿಗಳು ಬದುಕಿಲ್ವಾ? ಓಡಿಹೋದ್ರಾ? ನಾನು ಮಾರುವುದನ್ನು ತಿನ್ನದವರು ತೆಪ್ಪಗಿರಲಿ. ನನಗೆ ವ್ಯಾಪಾರ ಮುಖ್ಯ. ಯಾರು ಹೇಗೆ ಬೇಕಾದ್ರೂ ಸಾಯಲಿ”

”ಹಣ ವ್ಯಾಪಾರ ಮುಖ್ಯ ಅಂದ್ರೆ ಹೆತ್ತವ್ವನನ್ನು ಕೂಡಾ ಮಾರಾಟ ಮಾಡುವಿಯಾ?” ಆಕೆ ಅಷ್ಟೇ ಗಡುಸಾಗಿ ಕೇಳಿದ್ಲು.

”ಹೂಂ ಮತ್ತೆ! ತೆಗೊಳ್ಳುವವರಿದ್ದರೆ…”

ಆತ ಧ್ವನಿ ಸಣ್ಣದಾಗಿಸಿ ಹೇಳಿದ್ರೂ ನನಗೆ ಕೇಳಿಸಿತು. ಕಿವಿಗೆ ಕೀಟ ನುಗ್ಗಿದ ಕಿರಿಕಿರಿ. ನನಗರಿವಿಲ್ಲದ ಹಾಗೆ ಮಧ್ಯ ಪ್ರವೇಶಿಸಿದೆ : ”ಎಂಥ ಮಾತು ಅಂತ ಆಡುತ್ತೀಯ… ಅದೂ ಅಮ್ಮನ ಬಗ್ಗೆ”

ಅವನ ಕೋಪಕ್ಕೆ ತುಪ್ಪ ಸುರಿದಂತಾಯಿತು. ”ಹೋಗ್ರೀ… ಹೋಗ್ರೀ… ತಾಯಿಮಗ ಏನು ಬೇಕಾದ್ರೂ ಮಾಡುಕೋತೀವಿ. ನೀವ್ಯಾರು ಕೇಳುವುದಕ್ಕೆ?”

ಅವಮಾನ ಎನ್ನಿಸಿ ನೇರ ನಡೆದುಬಿಟ್ಟೆ. ತುಳಸಿ ಮುಖ ನೋಡಲೇ ಇಲ್ಲ. ಸಂಜೆ ದೊಡ್ಡ ಗಲಾಟೆ ನಡೆದಿತ್ತು. ಗಾಂಜಾ ಸಪ್ಲೈ ಮಾಡುವ ತಂಡದವರು ಬಂದು ತುಳಸಿಯ ಮಗನಿಗೆ ನಾಲ್ಕು ತದಕಿದರಂತೆ. ಮಾಲು ಪೂರ್ತಿ ತುಳಸಿ ಸುಟ್ಟು ಹಾಕಿದ್ಲಂತೆ. ದುಡ್ಡು ಎಲ್ಲಿಂದ ಕೊಡುತ್ತಾನೆ?

ಒಂದೆರಡು ದಿನಗಳಲ್ಲಿಯೇ ಪೊಲೀಸ್‌ ರೈಡ್‌ ಆಯಿತು. ತುಳಸಿಯ ಮಗನ ಕೈಗೆ ಕೋಳ ತೊಡಿಸಿ ಜೀಪ್‌ ಹತ್ತಿಸಿದ್ರು. ತುಳಸೀನೇ ಮಾಲು ಸಮೇತ ಮಗನನ್ನು ಪೊಲೀಸರಿಗೆ ಹಿಡಿದು ಕೊಟ್ಟದ್ದಂತೆ ಎಂಬ ಸುದ್ದಿ ಕಿವಿಗೆ ಬಿದ್ದಾಗ ಅಚ್ಚರಿಯಾಗಲಿಲ್ಲ. ಅಂಥ ಮಗ ಇರುವುದಾದರೂ ಯಾಕೆ ಅನ್ನಿಸಿತ್ತು. ಸುತ್ತಮುತ್ತ ಮನೆಯ ಹೆಂಗಸರ ಮುಖದಲ್ಲಿ ಏನೋ ಸಂತೃಪ್ತಿ. ನನಗೂ ಸಮಾಧಾನ. ಆದ್ರೆ ಗೂಡಂಗಡಿ ಏನಾಗುತ್ತೋ! ಬೇರೆ ಯಾರಾದರೂ ಇಂತಹ ಮಂದಿ ಬರಬಹುದೇನೋ- ಮನಸ್ಸಿನಲ್ಲಿ ಇಂಥ ಪ್ರಶ್ನೆಗಳ ಇಣುಕಾಟ ತಡೆಯಲಾಗಲಿಲ್ಲ.

ಮರುದಿನ ಸ್ವಲ್ಪ ಬೇಗ ಹೋಗಬೇಕಿತ್ತು. ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ಹೊರಟೆ. ಇನ್ನೂ ಸರಿಯಾಗಿ ಬೆಳಕು ಹರಡಿರಲಿಲ್ಲ. ಗೂಡಂಗಡಿಯ ಬಳಿ ನೋಡಿದರೆ ತುಳಸಿ. ಸೆರಗು ಬಿಗಿದು ಅಂಗಡಿ ಖಾಲಿ ಮಾಡಿಸುತ್ತಿದ್ದಳು. ಯಾರೋ ಇಬ್ಬರು ಎಲ್ಲಾ ಕೊಂಡ‌ುಕೊಂಡವರಿರಬೇಕು. ಪಿಕ್‌ಅಪ್‌ ವಾಹನಕ್ಕೆ ಸಾಮಾನು ಏರಿಸುತ್ತಿದ್ದರು. ನಿಂತು ನೋಡಿ ಮಾತನಾಡುವುದಕ್ಕೆ ಸಮಯ ಇರಲಿಲ್ಲ. ಗಮನಿಸಿಲ್ಲ ಎಂಬಂತೆ ಮುಂದೆ ಹೋದೆ. ತೆಳುವಾಗಿ ಹರಡಿದ ಬೆಳಕಿನಲ್ಲಿ ತುಳಸಿ ಕೂಡ ನನ್ನನ್ನು ಗಮನಿಸಲಿಲ್ಲ ಅಂತ ಕಾಣಿಸುತ್ತೆ. ಮತ್ತೆ ನನಗೆ ಆ ವಿಷಯ ಮರೆತು ಹೋಯಿತು.

ತಿಂಗಳ ಕೊನೆಯ ದಿನ. ರಜೆಯ ಕಾರಣದಿಂದ ಏಳುವಾಗಲೇ ಲೇಟು. ಡಬ್ಬದಲ್ಲಿ ಸಕ್ಕರೆ ಮುಗಿದಿದ್ದು ನೆನಪಾಗಿರಲಿಲ್ಲ. ತರೋಣ ಎಂದು ಹೊರಗೆ ಕಾಲಿಟ್ಟೆ. ದಾರಿಯಲ್ಲಿ ನಾಲ್ಕು ಹೆಜ್ಜೆ ನಡೆದಿದ್ದೆ ಅಷ್ಟೆ. ಅಚ್ಚರಿಯಾಯಿತು! ಏನಿದು ಜನಸಂದಣಿ ! ಹೆಜ್ಜೆಯ ವೇಗ ದ್ವಿಗುಣಿಸಿತು. ಜನ‌ರ ನಡುವೆ ಜಾಗ ಮಾಡಿ ಮೆಲ್ಲ ತಲೆ ತೂರಿಸಿದೆ.

ಅರೇ ! ಕಲ್ಲಿನ ಮೇಲೆ ಕುಳಿತ ತುಳಸಿ. ಮತ್ತದೇ ಪೂರ್ತಿ ಹಲ್ಲು ತೋರಿಸುವ ನಗು. ಬುಟ್ಟಿಯ ತುಂಬ ಮೀನು. ಅದರ ಬೆಳಕು ಸುತ್ತ ನಿಂತವರ ಮುಖದಲ್ಲಿ ಮೂಡಿಸಿದ ಹೊಳಪು. ತುಳಸಿ ಈಗಷ್ಟೇ ವಿದೇಶದಿಂದ ಪ್ರವಾಸ ಮುಗಿಸಿ ಬಂದವಳ ಹಾಗಿದ್ದಳು. ಅದೇ ಚರಪರ ಮಾತು. ದಾರಿ ಗಿಜಿಗುಟ್ಟುತ್ತಿತ್ತು. ಸಂಜೆ ಆರಾಮದಲ್ಲಿ ಮಾತನಾಡಿಸುವ ಎಂದು ಮೆಲ್ಲನೆ ಅಲ್ಲಿಂದ ಹೊರ ಬಂದೆ. ಮನಸ್ಸು ಮಾತನಾಡಿತು. ಇದಕ್ಕೆ ಇರಬೇಕು, ಕೆಲವು ಕಡೆ ದೇವರು ಗುಡಿ-ಗೋಪುರದ ಗೊಡವೆಯಿಲ್ಲದೇ ನಿಂತಿರುವುದು.

ನನ್ನ ಪಾದಗಳು ಹೊಸ ಹುರುಪಿನಿಂದ ಮುಂದೆ ಸಾಗಿದ ಹಾಗೆ ಅಲ್ಲೇನೋ ನಡೆದೇ ಇಲ್ಲವೆಂಬಂತೆ ತುಳಸಿಯ ಏರು ಸ್ವರ, ನಡೆದು ಹೋಗುವವರ ಮೊಗದ ನಗು ಸಹಜವಾಗಿತ್ತು. ಆ ದಿನ ರಾತ್ರಿಯೂ ಬೀದಿ ಬದಿಯ ಮನೆ-ಮನಗಳು ನೆಮ್ಮದಿಯಾಗಿದ್ದರೂ ತುಳಸಿಯ ಮನೆಯಲ್ಲಿ ಮಾತ್ರ ಒಂದೆೇ ಬಟ್ಟಲನ್ನ. ”ಮಗನಾದರೂ ಸರಿ, ಜೈಲಲ್ಲಿರಲಿ. ಬಿಡಿಸುವುದು ಬೇಡ. ಹಸಿ ಮೀನು ತಿಂದು ಬದುಕಿಯೇನು. ಊರ ಜನರ ಬದುಕ ಕೆಡಿಸುವ ಮಗ ಬೇಕಾಗಿಲ್ಲ ನನಗೆ” ತುಳಸಿ ಪೊಲೀಸ್‌ ಸ್ಟೇಷನ್‌ ಬಾಗಿಲಲ್ಲಿ ನಿಂತು ನನಗೆಂದ ಮಾತು ಮತ್ತೆ ಮತ್ತೆ ಕೇಳಿಸಿತು.

ಆ ನಂತರ ಆಕೆಯನ್ನು ನಾನು ಏಕವಚನದಲ್ಲಿ ಕರೆಯಲಿಲ್ಲ. ತುಳಸಮ್ಮನಾದಳು; ನನ್ನನ್ನನುಸ‌ರಿಸಿ ಇಡೀ ನಮ್ಮ ಊರಿಗೆ.

-ರಾಜಶ್ರೀ ಪೆರ್ಲ

Advertisement

Udayavani is now on Telegram. Click here to join our channel and stay updated with the latest news.

Next