Advertisement

ಹೆಚ್ಚು ತಂಡಗಳು ಆಡಬೇಕು: ಕೌರ್‌

09:23 AM May 14, 2019 | Sriram |

ಜೈಪುರ: ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ ತಂಡ ಆರಂಭಿಕ ಆವೃತ್ತಿಯ ‘ವನಿತಾ ಐಪಿಎಲ್ ಟಿ20 ಲೀಗ್‌’ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಶನಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅದು ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿತು.

Advertisement

ಈ ಸಂದರ್ಭದಲ್ಲಿ ಮಾತಾಡಿದ ಹರ್ಮನ್‌ಪ್ರೀತ್‌ ಕೌರ್‌, ಈ ಕೂಟದಲ್ಲಿ ಹೆಚ್ಚು ತಂಡಗಳು ಭಾಗವಹಿಸಬೇಕಿದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

‘ಈ ಆರಂಭಿಕ ಪಂದ್ಯಾವಳಿ ವೈಯಕ್ತಿಕವಾಗಿ ನನಗೆ ಬಹಳ ಖುಷಿ ಕೊಟ್ಟಿತು. ನಾನು ಇದರಿಂದ ಬಹಳ ಕಲಿತೆ. ಉಳಿದ ಆಟಗಾರ್ತಿಯರಿಗೂ ಇದರ ಲಾಭ ಲಭಿಸಿದೆ. ನಾವೇನು ನಿರೀಕ್ಷಿಸಿದ್ದೆವೋ ಅದು ಈಡೇರಿದೆ’ ಎಂದು ಕೌರ್‌ ಹೇಳಿದರು.

‘ಭಾರತದಲ್ಲೂ ವನಿತಾ ಟಿ20 ಲೀಗ್‌ ದೊಡ್ಡ ಮಟ್ಟದಲ್ಲಿ ನಡೆಯ ಬೇಕೆಂಬುದು ಎಲ್ಲರ ಅಭಿಲಾಷೆ. ಇದರಲ್ಲಿ ಹೆಚ್ಚು ತಂಡಗಳು ಪಾಲ್ಗೊಳ್ಳಬೇಕು. ಮುಂದಿನ ವನಿತಾ ಟಿ20 ಲೀಗ್‌ ಇದಕ್ಕೆ ಸಾಕ್ಷಿಯಾಗಲಿ’ ಎಂದು ಹರ್ಮನ್‌ಪ್ರೀತ್‌ ಆಶಿಸಿದರು.

ವಿದೇಶಿಗರ ಕುತೂಹಲ
‘ಇಂಥ ಪಂದ್ಯಾವಳಿಯಲ್ಲಿ ವಿದೇಶಿ ಕ್ರಿಕೆಟಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಭಾರತದಲ್ಲಿ ವನಿತಾ ಟಿ20 ಲೀಗ್‌ ಯಾವಾಗ ಆರಂಭ ವಾಗುತ್ತದೆ, ನಾವು ಇದರಲ್ಲಿ ಯಾವಾಗ ಆಡುವುದು… ಎಂದೆಲ್ಲ ವಿದೇಶಿ ಆಟಗಾರ್ತಿಯರು ಕುತೂ ಹಲದಿಂದ ಕೇಳುತ್ತಿರುತ್ತಾರೆ. ಹೀಗಾಗಿ ಈ ಕೂಟದ ಮಹತ್ವವನ್ನು ಎಲ್ಲರೂ ಮನಗಾಣ ಬೇಕು’ ಎಂದು ಕೌರ್‌ ಬಿಸಿಸಿಐಗೆ ಸೂಚನೆಯೊಂದನ್ನು ಮುಟ್ಟಿಸಿದರು.

Advertisement

ಈ ಬಾರಿಯ ಎಲ್ಲ ಪಂದ್ಯಗಳು ಜೈಪುರದ ‘ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆದವು. ಲೀಗ್‌ ಪಂದ್ಯಗಳಿಗೆ ವೀಕ್ಷಕರ ತೀವ್ರ ಅಭಾವವಿತ್ತು. ಆದರೆ ಫೈನಲ್ ಹಣಾಹಣಿಗೆ 15 ಸಾವಿರದಷ್ಟು ವೀಕ್ಷಕರು ಸಾಕ್ಷಿಯಾದರು.

ಅಂತಿಮ ಎಸೆತದಲ್ಲಿ ಜಯ
ಜಿದ್ದಾಜಿದ್ದಿಯಾಗಿ ಸಾಗಿದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಲೋಸಿಟಿ 6 ವಿಕೆಟಿಗೆ 121 ರನ್‌ ಗಳಿಸಿದರೆ, ಸೂಪರ್‌ನೋವಾ 6 ವಿಕೆಟಿಗೆ 125 ರನ್‌ ಬಾರಿಸಿ ಅಂತಿಮ ಎಸೆತದಲ್ಲಿ ಜಯಭೇರಿ ಮೊಳಗಿಸಿತು.

ಅಮೇಲಿಯ ಕೆರ್‌ ಎಸೆದ ಅಂತಿಮ ಓವರಿನ ಮೊದಲ ಎಸೆತ ‘ಡಾಟ್ ಬಾಲ್’. ಮುಂದಿನ ಎಸೆತಕ್ಕೆ 51 ರನ್‌ ಬಾರಿಸಿದ ಕೌರ್‌ ಔಟಾದಾಗ ಪಂದ್ಯದ ಕುತೂಹಲ ಮುಗಿಲು ಮುಟ್ಟಿತು.

ಮುಂದಿನದ್ದೆಲ್ಲ ರಾಧಾ ಯಾದವ್‌ ಸಾಹಸ. ಸತತ 3 ಎಸೆತಗಳಲ್ಲಿ ಅವಳಿ ರನ್‌ ತೆಗೆದ ಅವರು ಪಂದ್ಯವನ್ನು ಸಮಬಲಕ್ಕೆ ತಂದರು. ಕೊನೆಯ ಎಸೆತದಲ್ಲಿ ಒಂದು ರನ್‌ ಬೇಕಿತ್ತು. ಇದು ಕವರ್‌ ವಿಭಾಗದ ಮೂಲಕ ಬೌಂಡರಿ ಗೆರೆ ದಾಟಿತು!

ಗ್ರೌಂಡ್‌ ಶಾಟ್ಸ್‌ ಕೂಡ ಮುಖ್ಯ
‘ಪಂದ್ಯವನ್ನು ಹೇಗೆ ಮುಗಿಸಬೇಕು ಎಂಬ ಪಾಠ ನನಗಿಲ್ಲಿ ಸಿಕ್ಕಿತು. ಎಲ್ಲ ಸಲವೂ ಬೌಂಡರಿ, ಸಿಕ್ಸರ್‌ಗಳ ಯೋಜನೆ ಕ್ಲಿಕ್‌ ಆಗದು. ಗ್ರೌಂಡ್‌ ಶಾಟ್ಸ್‌ ಮೂಲಕವೂ ಯಶಸ್ಸು ಕಾಣಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. ನಾನು ಅರ್ಧದಷ್ಟು ಕರ್ತವ್ಯ ನಿಭಾಯಿಸಿದೆ, ಉಳಿದರ್ಧವನ್ನು ರಾಧಾ ಯಾದವ್‌ ಯಶಸ್ವಿಯಾಗಿ ಮುಗಿಸಿದರು’ ಎಂದು ಕೌರ್‌ ಶ್ಲಾಘಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಲೋಸಿಟಿ-6 ವಿಕೆಟಿಗೆ 121. ಸೂಪರ್‌ನೋವಾಸ್‌-20 ಓವರ್‌ಗಳಲ್ಲಿ 6 ವಿಕೆಟಿಗೆ 125 (ಕೌರ್‌ 51, ಪ್ರಿಯಾ ಪೂನಿಯ 29, ಜೆಮಿಮಾ 22, ರಾಧಾ ಯಾದವ್‌ ಔಟಾಗದೆ 10, ಜಹನಾರಾ ಆಲಂ 21ಕ್ಕೆ 2, ಅಮೇಲಿಯಾ ಕೆರ್‌ 29ಕ್ಕೆ 2).

ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.
ಸರಣಿಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

Advertisement

Udayavani is now on Telegram. Click here to join our channel and stay updated with the latest news.

Next