ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ಥಾನ DLS ನಿಯಮದ ಅನ್ವಯ 21 ರನ್ ಗಳ ಜಯ ಸಾಧಿಸಿದ್ದು, ಗೆಲುವಿನಲ್ಲಿ ಪಾಕ್ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.
ಆರಂಭದಿಂದಲೂ ಅಬ್ಬರಿಸಿದ ಫಖರ್ ಜಮಾನ್ 81ಎಸೆತಗಳಲ್ಲಿ ಔಟಾಗದೆ 126 ರನ್ ಗಳಿಸಿದರು. ಬರೋಬ್ಬರಿ 11 ಸಿಕ್ಸರ್ ಮತ್ತು 8 ಬೌಂಡರಿ ಬಾರಿಸಿದರು. ಏಕದಿನ ಇತಿಹಾಸದಲ್ಲಿ ಪಾಕಿಸ್ಥಾನದ ಬ್ಯಾಟ್ಸ್ ಮ್ಯಾನ್ ಒಬ್ಬರು ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ತನ್ನ ಹೆಸರಿಗೆ ಬರೆಸಿಕೊಂಡರು.
ಈ ಹಿಂದೆ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಶಾಹಿದ್ ಅಫ್ರಿದಿ ಅವರು 1996 ರಲ್ಲಿ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ 11 ಸಿಕ್ಸರ್ ಬಾರಿಸಿದ್ದರು.
ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್ ಮ್ಯಾನ್ ಒಬ್ಬರು ಹೆಚ್ಚಿನ ಸಿಕ್ಸರ್ ಬಾರಿಸಿದ ದಾಖಲೆ ಇಯಾನ್ ಮಾರ್ಗನ್ ಅವರ ಹೆಸರಿನಲ್ಲಿದೆ. 2019 ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 17 ಸಿಕ್ಸರ್ ಬಾರಿಸಿದ್ದರು.
ವಿಶ್ವಕಪ್ ಆವೃತ್ತಿಯಲ್ಲಿ ಪಾಕಿಸ್ಥಾನ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಫಖರ್ ಜಮಾನ್ ಅವರ ಹೆಸರಿನಲ್ಲಿ ದಾಖಲಾಯಿತು.ಈ ಬಾರಿ 18 ಸಿಕ್ಸರ್ ಬಾರಿಸಿದ್ದಾರೆ.
ಏಕದಿನ ವಿಶ್ವಕಪ್‌ಗಳಲ್ಲಿ ಪಾಕಿಸ್ಥಾನದ ಅತ್ಯಧಿಕ ರನ್ ಗಳ ಜತೆಯಾಟ (ಯಾವುದೇ ವಿಕೆಟ್ ಗೆ)ದ ದಾಖಲೆಯನ್ನು ಫಖರ್ ಜಮಾನ್ ಮತ್ತು ಬಾಬರ್ ಅಜಮ್ (194*) ತಮ್ಮ ಹೆಸರಿಗೆ ಬರೆಸಿಕೊಂಡರು. 1999 ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನ್ಯೂಜಿ ಲ್ಯಾಂಡ್ ವಿರುದ್ಧ ಸಯೀದ್ ಅನ್ವರ್ ಮತ್ತು ಡಬ್ಲ್ಯೂ ವಸ್ತಿ 194 ರನ್ ಜತೆಯಾಟವನ್ನು ಆಡಿದ್ದರು.