ರೋಣ: ಗಜೇಂದ್ರಗಡ ಮತ್ತು ರೋಣ ತಾಲೂಕು ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಮೈದಾನದ ಅಭಾವದಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುವಂತಾಗಿದೆ.
ಈ ಎರಡೂ ತಾಲೂಕುಗಳಲ್ಲಿ 158 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 35 ಸರಕಾರಿ ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಸೌಲಭ್ಯಗಳು ಸಿಗದೇ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ. ವಲಯ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತೊಡಕು ಉಂಟಾಗಿದೆ. ಕ್ರೀಡಾಪಟುಗಳು ಕ್ರೀಡೆಯಿಂದ ದೂರ ಉಳಿಯುವಂತಾಗಿದೆ.
ಕ್ರೀಡಾಪಟುಗಳಿಗೆ ತೊಂದರೆ: ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯಕ್ರಮ ಇದ್ದು, ಮಕ್ಕಳ ಭವಿಷ್ಯ ರೂಪಿಸಲು ಕತ್ತರಿ ಬಿದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಓಟ, ಎತ್ತರ ಜಿಗಿತ, ಉದ್ದ ಜಿಗಿತ, ವಿದ್ಯಾರ್ಥಿನಿಯರಿಗೆ ಥ್ರೋಬಾಲ್, ಚೆಸ್, ಯೋಗ, ಬ್ಯಾಡ್ಮಿಟನ್, ಶೆಟ್ಲಕಾಕ್ ಇನ್ನಿತರ ಕ್ರೀಡಾಪಟುಗಳಿಗೆ ಸರಿಯಾಗಿ (ಕೋಚ್)ಮಾರ್ಗದರ್ಶನ ದೊರೆಯದಂತಾಗಿದೆ.
ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ: ತಾಲೂಕಿನ ಪ್ರೈಮರಿ ಹಾಗೂ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಅಂದಾಜು ಆರೇಳು ವರ್ಷಗಳಿಂದ ಖಾಲಿಯಿದ್ದು, ಸರಕಾರ ಭರ್ತಿಗೊಳಿಸುವ ಗೋಜಿಗೆ ಹೋದಂತಿಲ್ಲ. ತಾಲೂಕಿನಲ್ಲಿ ಜಿ.ಎಚ್.ಎಸ್.ಶಾಂತಗೇರಿ, ಜಿ.ಎಚ್.ಎಸ್.ರೋಣ, ಜಿ.ಎಚ್.ಎಸ್.ಮುಗಳಿ, ಜಿ.ಎಚ್.ಎಸ್.ಮುಶಿಗೇರಿ ಸೇರಿದಂತೆ ನಾಲ್ಕು ಸರಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದಂತಾಗಿದೆ. ಹಿಳೆಮಣ್ಣೂರ, ರಾಜೂರ, ಮುಗಳಿ, ಬಮ್ಮಸಾಗರ, ನರೇಗಲ್, ಶಾಂತಗೇರಿ, ಮುದೇನಗುಡಿ, ಕಳಕಾಪೂರ, ಜಿಗಳೂರ ಸೇರಿದಂತೆ ಇನ್ನು ಅನೇಕ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಭರ್ತಿಗೊಳಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ.
ಆಟದ ಮೈದಾನಗಳೇ ಇಲ್ಲ: ತಾಲೂಕಿನ ಮಾಡಲಗೇರಿ, ಇಟಗಿ, ಕಳಕಾಪೂರ,ಹೊನ್ನಿಗನೂರ, ಬಳಗೋಡ, ಕುರಮನಾಳ,ರುದ್ರಾಪೂರ ಸೇರಿದಂತೆ ಇನ್ನು ಅನೇಕ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಟದ ಮೈದಾನ ಅಭಾವ ಇದೆ. ಆಟೋಟಕ್ಕೆ ಅಡಚಣೆ ಎದುರಿಸುವ ಶಾಲೆಗಳಿಗೆ ಮೈದಾನ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ತಾಲೂಕಿನ 15ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ವಿದ್ಯಾರ್ಥಿಗಳಿಗೆ ಕ್ರೀಡಾ ಕೋಚ್ ಸಿಗದ ಪರಿಣಾಮ ತೊಂದರೆ ಉಂಟಾಗಿದೆ. ಸರಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಗೊಳಿಸಬೇಕು.
• ನಂಜುಂಡಯ್ಯ ಎನ್., ಕ್ಷೇತ್ರ ಶಿಕ್ಷಣಾಧಿಕಾರಿ.
ನಮಗೆ ದೈಹಿಕ ಶಿಕ್ಷಕರು ಇಲ್ಲ. ನಮ್ಮ ಶಾಲೆಯಲ್ಲಿ ಇರುವ ಗುರುಗಳೇ ಹೇಳಿಕೊಡುತ್ತಿದ್ದಾರೆ.ಆದರೆ ಮೇಲಿನ ಸಾಹೇಬರು ನಮಗೆ ಆಟದ ಮೈದಾನ ಹಾಗೂ ದೈಹಿಕ ಶಿಕ್ಷಕರನ್ನು ನೇಮಿಸಿದರೆ ನಮಗೆ ಇನ್ನೂ ಹೆಚ್ಚು ಅನಕೂಲವಾಗುತ್ತದೆ.
•ಸ್ವರಸ್ವತಿ ಗಡ್ಡಿ, ಮಾಡಲಗೇರಿ ವಿದ್ಯಾರ್ಥಿನಿ
•ಯಚ್ಚರಗೌಡ ವೆಂ ಗೋವಿಂದಗೌಡ್ರ