Advertisement

ಬಹುತೇಕ ಯೋಜನೆ ಅನುಷ್ಠಾನ

05:50 PM Feb 15, 2018 | Team Udayavani |

ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಸರ್ಕಾರದ ಅವಧಿಯ ಕಡೆಯ ಆರನೇ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.

Advertisement

ಫೆ.16ರಂದು 2018-19ನೇ ಸಾಲಿನ ಆಯವ್ಯಯ ಮಂಡಿಸುವುದರೊಂದಿಗೆ ರಾಜ್ಯದಲ್ಲಿ ದಾಖಲೆಯ 13 ಆಯವ್ಯಯ ಮಂಡಿಸಿದ ಕೀರ್ತಿಗೆ ಭಾಜನರಾಗಲಿದ್ದಾರೆ. 2017-18ನೇ ಸಾಲಿನ ಆಯವ್ಯಯದಲ್ಲಿ ಮೈಸೂರು ಜಿಲ್ಲೆಗೆ ಹಲವು ಯೋಜನೆಗಳನ್ನು ಘೋಷಿಸಿದ್ದರು. ಅವುಗಳಲ್ಲಿ ಬಹಳಷ್ಟು ಅನುಷ್ಠಾನಗೊಂಡಿದ್ದು, ಇನ್ನೂ ಕೆಲವು ಕಾಗದದಲ್ಲೇ ಉಳಿದಿವೆ.

ಬಹುಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಬರುವವರಿಗಾಗಿ ನಗರದ ಮೇಟಗಳ್ಳಿಯಲ್ಲಿನ ಪಿ.ಕೆ. ಸ್ಯಾನಿಟೋರಿಯಂ ಆವರಣದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ವಿಭಜಿತ ತಾಲೂಕಿಗೆ ಬೇಕಿದೆ ಸೌಲಭ್ಯ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸ ತಾಲೂಕುಗಳ ರಚನೆ ಸಂಬಂಧ ಎಚ್‌.ಡಿ.ಕೋಟೆ ತಾಲೂಕನ್ನು ವಿಭಜಿಸಿ ರಚಿಸಲಾದ ಸರಗೂರು ತಾಲೂಕು ಕಾರ್ಯಾರಂಭ ಮಾಡಿದ್ದು, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

ಇನ್ನು ನಗರದ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದಲ್ಲಿ 24 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಎರಡನೇ ಸಂಘಟಿತ ನೇಯ್ಗೆ ಕಾರ್ಖಾನೆಯನ್ನು ಸ್ಥಾಪಿಸಲು ಕರ್ನಾಟಕ ರೇಷ್ಮೆ ಉದ್ಯಮ ನಿಗಮಕ್ಕೆ 5 ಕೋಟಿಗಳ ರೂ.ಗಳ ಅನುದಾನ ನೀಡಲಾಗುವುದು ಎಂದು ಹೇಳಲಾಗಿತ್ತು. 

Advertisement

ಬಜೆಟ್‌ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, 24.07 ಕೋಟಿ ಪೈಕಿ ಮೊದಲ ಹಂತದಲ್ಲಿ 5 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಮುಂದಿನ 5-6 ತಿಂಗಳಲ್ಲಿ ನೂತನ ಘಟಕ ಕಾರ್ಯಾ ರಂಭವಾಗಲಿದೆ. ಮುಂದಿನ 5-6 ತಿಂಗಳಲ್ಲಿ ನೂತನ ಘಟಕ ಕಾರ್ಯಾರಂಭವಾಗಲಿದ್ದು, ಹೊಸ ಘಟಕ ಆರಂಭದಿಂದ ಶೇ.50 ಉತ್ಪಾದನೆ ಹೆಚ್ಚಲಿದೆ ಎಂದು ಕೆಎಸ್‌ಐಸಿ ಅಧ್ಯಕ್ಷರೂ ಆದ ಶಾಸಕ ಎಂ.ಕೆ. ಸೋಮಶೇಖರ್‌ ಹೇಳುತ್ತಾರೆ.

ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳಿಸೋಗೆ ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಹುಣಸೂರು ತಾಲೂಕಿನಲ್ಲಿ ಹನಗೋಡು ಸರಣಿ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 45 ಕೋಟಿ ವೆಚ್ಚದ ನಂಜನಗೂಡು ತಾಲೂಕಿನ ಹುರಾ ಮತ್ತು 28 ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ.

ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿಲ್ಲ: 2014-15ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ಶೇ.40 ಭಾರತ ಸರ್ಕಾರದ ನೆರವಿನೊಂದಿಗೆ 310 ಕೋಟಿ ರೂ.ಗಳ ವೆಚ್ಚದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯನ್ನು ಈ ವರ್ಷ ಆರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತಾದರೂ ಆ ಕಾರ್ಯ ಕೈಗೂಡಿಲ್ಲ.

ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್‌ ಟೆಂಡರ್‌ ಹಂತದಲ್ಲಿದೆ. ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ಆಡಿಯೋ ವಿಡಿಯೋ ಕಾಲೇಜಿನಲ್ಲಿ 10.96 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ 6 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಬೇಕಿದೆ. ಒಂದು ಕೋಟಿ ವೆಚ್ಚದ ಟೆನಿಸ್‌ ಅಕಾಡೆಮಿ ಇನ್ನೂ ಆರಂಭವಾಗಿಲ್ಲ. 

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನ ವರುಣಾ ಕೆರೆಯಲ್ಲಿ ಜಲಕ್ರೀಡಾ ಕೇಂದ್ರವನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಲಾಗಿತ್ತು, ಆ ಕಾರ್ಯ ಈಗ ಟೆಂಡರ್‌ ಹಂತದಲ್ಲಿದೆ. ಮೈಸೂರು ನಗರದ ಸುತ್ತಲಿನ 22 ಕಿಮೀ ಉದ್ದದ ರಸ್ತೆಗಳನ್ನು 117 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗಿದೆ.

ಭಾರತ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನಲ್ಲಿ ಸಿಲ್ಕ್ ಮೆಗಾ ಕ್ಲಸ್ಟರನ್ನು ಸ್ಥಾಪನೆ ಮಾಡುವುದಾಗಿ ಹೇಳಲಾಗಿತ್ತು. ಇದಕ್ಕಾಗಿ 11 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಯಾದರೂ ಸಿಡಿಪಿಯಲ್ಲಿ ಈ ಜಾಗ ವಸತಿ ವಲಯದಲ್ಲಿ ಬರುವುದರಿಂದ ಕ್ಲಸ್ಟರ್‌ ಸ್ಥಾಪನೆ ಸಾಧ್ಯವಾಗಿಲ್ಲ. ಉದ್ದೇಶಿತ ಏರೋ ನ್ಪೋರ್ಟ್ಸ್ ಹಬ್‌ ಇನ್ನಷ್ಟೇ ಆಗಬೇಕಿದೆ. 

ಬಜೆಟ್‌ ಹೊರತಾಗಿಯೂ ಇಂದಿರಾ ಕ್ಯಾಂಟೀನ್‌
ಕಳೆದ ಬಜೆಟ್‌ನಲ್ಲಿ ಮಂಡನೆಯಾಗದ ಹೊರತಾಗಿಯೂ ಇಂದಿರಾ ಮೈಸೂರು ನಗರದಲ್ಲಿ 11 ಇಂದಿರಾ ಕ್ಯಾಟೀನ್‌ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ತಾಲೂಕು ಕೇಂದ್ರದಲ್ಲಿ ತಲಾ ಒಂದೊಂದು ಇಂದಿರಾ ಕ್ಯಾಟೀನ್‌ ಆರಂಭಿಸಲು ನಿರ್ಧರಿಸಲಾಗಿದೆ.

ಮೆಗಾ ಸಿಲ್ಕ್ ಪಾರ್ಕ್‌ ನಿರ್ಮಾಣಕ್ಕೆ 11 ಎಕರೆ ಭೂಮಿ ಮಂಜೂರಾಗಿದೆ. ಆದರೆ, ಸಿಡಿಪಿಯಲ್ಲಿ ಈ ಭೂಮಿ ವಸತಿ
ವಲಯದಲ್ಲಿ ಬರುವುದರಿಂದ, ಸಿಡಿಪಿ ಯಲ್ಲೇ ಮಾರ್ಪಾಡಾಗಿ ಕೈಗಾರಿಕಾ ಪ್ರದೇಶ ಎಂದು ಸರ್ಕಾರದಿಂದ ನಿರ್ದೇಶನ
ಬರಬೇಕಿದೆ. 
ಜನಾರ್ದನ್‌, ಉಪ ನಿರ್ದೇಶಕ, ಜವಳಿ ಇಲಾಖೆ

„ ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next