Advertisement

ಐಟಿ ದಾಳಿಗೆ ಬಹುತೇಕ ತೆರೆ

06:50 AM Jan 06, 2019 | Team Udayavani |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ನಟ ಮತ್ತು ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ್ದ ದಾಳಿಗೆ ಶನಿವಾರ ಬಹುತೇಕ ತೆರೆ ಬಿದ್ದಿದೆ.

Advertisement

ನಟ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಯಶ್‌, ಸುದೀಪ್‌ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು, ಜಯಣ್ಣ , ವಿಧಾನ ಪರಿಷತ್‌ ಸದಸ್ಯ ಸಿ.ಆರ್‌.ಮನೋಹರ್‌ ಮನೆ ಮೇಲಿನ ದಾಳಿ ಶನಿವಾರ ಸಂಜೆ ವೇಳೆಗೆ ಮುಕ್ತಾಯಾವಾಗಿದೆ. ಆದರೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮನೆ ಮತ್ತು ಕಚೇರಿ ಮೇಲೆ ದಾಳಿ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ದಾಳಿ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ನಟರು ಹಾಗೂ ನಿರ್ಮಾಪಕರ ಮನೆ, ಕಚೇರಿಗಳಲ್ಲಿ ಪತ್ತೆಯಾದ ದಾಖಲೆಗಳನ್ನು ಹತ್ತಾರು ಬ್ಯಾಗ್‌ಗಳಲ್ಲಿ ಕೊಂಡೊಯ್ದ ಐಟಿ ಅಧಿಕಾರಿಗಳು, ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ವಿವಿಧ ಬ್ಯಾಂಕ್‌ಗಳಲ್ಲಿ ನಟ, ನಿರ್ಮಾಪಕರ ಹೆಸರಿನಲ್ಲಿರುವ ಠೇವಣಿ ಹಾಗೂ ನಿಶ್ಚಿತ ಠೇವಣಿ ಹಣದ ಮೊತ್ತ ಹಾಗೂ ತಮ್ಮ ಪತ್ನಿ, ಮಕ್ಕಳ ಹೆಸರಿನಲ್ಲಿ ನಡೆಸುತ್ತಿರುವ ಪ್ರೊಡಕ್ಷನ್‌ ಹೌಸ್‌ಗಳು, ಕಂಪೆನಿಗಳು, ಉದ್ಯಮಗಳ, ನಿವೇಶನ, ವಿವಿಧ ಕಂಪೆನಿಗಳ ಮೇಲಿನ ಬಂಡವಾಳ ಹೂಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಸದಾಶಿವನಗರದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ನಿವಾಸದಲ್ಲಿ ಕೆಲ ಆಸ್ತಿಗೆ ಸಂಬಂಧಿಸಿದ ಪತ್ರ ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ಅವರ ಬ್ಯಾಂಕ್‌ ಖಾತೆ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಪುನೀತ್‌ ವಿವಿಧೆಡೆ ಹೊಂದಿರುವ ನಿವೇಶನ ಹಾಗೂ ಕೆಲ ಪ್ರೊಡಕ್ಷನ್‌ ಕಂಪೆ‌ನಿಗಳು, ಆಡಿಯೋ ಕಂಪೆನಿಗಳ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪುನೀತ್‌ ಹಾಗೂ ಪತ್ನಿ ಅಶ್ವಿ‌ನಿ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಗವಾರದ ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪದ‌ ಶಿವರಾಜ್‌ಕುಮಾರ್‌ ನಿವಾಸದಲ್ಲಿದ್ದ ಹಲವು ದಾಖಲೆಗಳನ್ನೂ ನಾಲ್ಕೈದು ಬ್ಯಾಗ್‌ಗಳಲ್ಲಿ ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಶಿವರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಗೀತಾ ಹಾಗೂ ಪುತ್ರಿಯರ ಹೆಸರಿನಲ್ಲಿ ಪ್ರೊಡಕ್ಷನ್‌ ಹೌಸ್‌ಗಳನ್ನು ನಡೆಸುತ್ತಿದ್ದು, ಇವುಗಳ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

Advertisement

ಆಸ್ತಿ ದಾಖಲೆ, ಚಿನ್ನಾಭರಣ: ಯಶ್‌ ಮನೆಯಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಇವರು ಹೊಂದಿರುವ ಬ್ಯಾಂಕ್‌ ಖಾತೆಗಳ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಸುದೀಪ್‌ ಅವರ ಜೆ.ಪಿ.ನಗರ ನಿವಾಸದಲ್ಲಿ ಕೆಲ ಕಂಪೆನಿಗಳಿಗೆ ಅವರು ಬಂಡವಾಳ ಹೂಡಿಕೆ ಮಾಡಿರುವ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, ತಾವು ನಿರ್ಮಿಸಿದ ಸಿನಿಮಾಗಳು, ರಿಯಾಲಿಟಿ ಶೋಗೆ ಪಡೆಯುವ ಸಂಭಾವನೆ ಎಷ್ಟು ಎಂಬೆಲ್ಲ ಮಾಹಿತಿಯನ್ನು ಲಿಖೀತವಾಗಿಯೇ ಪಡೆದುಕೊಳ್ಳಲಾಗಿದೆ.

ನಿರ್ಮಾಪಕ ವಿಜಯ್‌ ಕಿರಂಗದೂರ್‌, ಜಯಣ್ಣ, ಸಿ.ಆರ್‌.ಮನೋಹರ್‌ ನಿವಾಸಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವ ದಾಖಲೆಗಳು ಸಿಕ್ಕಿವೆ ಎಂದು ಐಟಿ ಮೂಲಗಳು ತಿಳಿಸಿವೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನಿವಾಸ ಮತ್ತು ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಿರುವ ಐಟಿ ಅಧಿಕಾರಿಗಳು, ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಅವರನ್ನು ರಾಜಾಜಿನಗರದಲ್ಲಿರುವ ಅವರ ಕಚೇರಿಗೆ ಕರೆದೊಯ್ದು ವಿಚಾರಣೆ ಕೂಡ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next