Advertisement

ಭರ್ತಿಯಾಗಬೇಕಿದೆ ಬಹುತೇಕ ಕೆರೆಗಳು; ಬಳಕೆಗೆ ಸೀಮಿತವಾದ ಕೆರೆಗಳು-192

05:24 PM Jun 20, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಜಿಲ್ಲೆ ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಜತೆಗೆ ನೆರೆ ಹಾಗೂ ಬರಗಾಲದಂತಹ ಪರಿಸ್ಥಿತಿ ಅನುಭವಿಸಿದೆ. ಇದರಿಂದ ಕೆಲ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರೆ, ಇನ್ನೂ ಕೆಲವು ಕೆರೆಗಳು ನೀರಿಲ್ಲದೇ ಬತ್ತಿ ಹೋದ ಉದಾಹರಣೆ ಸಾಕಷ್ಟಿವೆ. ಜಿಲ್ಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 22 ಕುಡಿಯಲು ಯೋಗ್ಯವಾದ ಕೆರೆಗಳು, 192 ಬಳಕೆಗೆ ಸೀಮಿತವಾದ ಕೆರೆಗಳು ಸೇರಿ ಒಟ್ಟು 214 ಕೆರೆಗಳಿದ್ದು, ಬಹುತೇಕ ಕೆರೆಗಳು ಮಳೆಯ ನೀರನ್ನೇ ನೆಚ್ಚಿಕೊಂಡಿವೆ. ಆದರೆ ಸದ್ಯ ಮುಂಗಾರು ಚಾಲ್ತಿಯಲ್ಲಿದ್ದು, ಕಳೆದ 15 ದಿನಗಳಲ್ಲಿ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಬಹುತೇಕ
ಕೆರೆಗಳು ತುಂಬದಿದ್ದರೂ ತಕ್ಕಮಟ್ಟಿನ ನೀರು ಶೇಖರಣೆಯಾಗಿದೆ.

Advertisement

ಇನ್ನು ತುಂಗ-ಭದ್ರಾ ಎಡದಂಡೆ ಕಾಲುವೆ ಮೂಲಕ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಡಂಬಳ, ಶಿರೋಳ, ತಾಮ್ರಗುಂಡಿ, ನಾಗರಳ್ಳಿ, ಜಂತ್ಲಿ ಶಿರೂರು ಸೇರಿ 15 ಕೆರೆಗಳು, 20ಕ್ಕೂ ಹೆಚ್ಚು ಚೆಕ್‌ ಡ್ಯಾಂಗಳಿಗೆ ಹಾಗೂ ಗದಗ ತಾಲೂಕಿನ ಲಕ್ಕುಂಡಿ, ಸಂಭಾಪುರ, ಕಳಸಾಪುರ, ಕಣಗಿನಹಾಳ ಸೇರಿ 8 ಗ್ರಾಮದ ಕೆರೆಗಳಿಗೆ ಕಳೆದ ಕೆಲ ವರ್ಷಗಳ ಹಿಂದೆ ನದಿ ನೀರು ಹರಿಸಿದ್ದರಿಂದ ಪುನಶ್ಚೇತನಗೊಂಡಿದ್ದವು. ಆದರೆ ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ಕೆರೆಗಳು ನದಿ ನೀರನ್ನು ಕಂಡಿಲ್ಲ.

ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳು 32: ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 9, ಶಿರಹಟ್ಟಿ ತಾಲೂಕಿನಲ್ಲಿ 5, ಗದಗ ತಾಲೂಕಿನಲ್ಲಿ 4 ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ 3 ಸೇರಿ ಜಿಲ್ಲಾದ್ಯಂತ 32 ಕೆರೆಗಳಿದ್ದು, ಇವುಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ, ಜಂತ್ಲಿಶಿರೂರ, ಪೇಠಾಲೂರ ಹಾಗೂ ಶಿರೋಳ ಕೆರೆಗಳಿಗೆ ಮಾತ್ರ ನದಿ ಮೂಲಕ ನೀರು ಹರಿಸಲಾಗುತ್ತಿತ್ತು. ಕಳೆದ ವರ್ಷ ಬರಗಾಲದಿಂದ ನದಿಯಲ್ಲೇ ನೀರಿಲ್ಲದ ಕಾರಣ ನೀರು ಹರಿಸಲಾಗಿಲ್ಲ. ಇದರಿಂದ ಕೆರೆಗಳು ಸಂಪೂರ್ಣ ಖಾಲಿಯಾಗಿವೆ.

ಸಣ್ಣ ನೀರಾವರಿ ಕೆರೆಗಳ ವಿಸ್ತೀರ್ಣ-ಅಚ್ಚುಕಟ್ಟು ಪ್ರದೇಶ: ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನ 11 ಕೆರೆಗಳ 776.76 ಹೆಕ್ಟೇರ್‌ ಪ್ರದೇಶದಲ್ಲಿ 4,330.88 ಹೆಕ್ಟೇರ್‌ ಅಚ್ಚು ಪ್ರದೇಶವಿದೆ. ಶಿರಹಟ್ಟಿ ತಾಲೂಕಿನ 5 ಕೆರೆಗಳ 243.50 ಹೆಕ್ಟೇರ್‌ ಪ್ರದೇಶದಲ್ಲಿ 1,294.70 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ.

ಗಜೇಂದ್ರಗಡ-ರೋಣ ತಾಲೂಕಿನ 9 ಕೆರೆಗಳ 170.78 ಹೆಕ್ಟೇರ್‌ ಪ್ರದೇಶವಿದ್ದು, 905.31 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ತಾಲೂಕಿನ 4 ಕೆರೆಗಳ 126.97 ಹೆಕ್ಟೇರ್‌ ಪ್ರದೇಶವಿದ್ದು, 967 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಲಕ್ಷೇ¾ಶ್ವರ ತಾಲೂಕಿನ 3 ಕೆರೆಗಳ 61.92 ಹೆಕ್ಟೇರ್‌ ಪ್ರದೇಶವಿದ್ದು, 222.69 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಜಿಲ್ಲೆಯಲ್ಲಿ ಒಟ್ಟಾರೆ 32 ಕೆರೆಗಳ ವಿಸ್ತೀರ್ಣ 1,379.93 ಹೆಕ್ಟೇರ್‌ ಪ್ರದೇಶ ಹೊಂದಿದೆ. ಅದರಲ್ಲಿ 7,520.58 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ.

Advertisement

ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನವಿರದ ಕಾರಣ ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳ ಹೂಳೆತ್ತುವುದು ಮತ್ತು ಬೌಂಡರಿಂಗ್‌ ಕ್ರಂಚ್‌ ಹಾಕುವುದು ಸೇರಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅನುದಾನ ಬಿಡುಗಡೆಗೊಂಡ ನಂತರ ಆದ್ಯತೆ ಮೇರೆಗೆ ಹೂಳೆತ್ತುವುದು ಸೇರಿ ಕೆರೆಗಳ ಬೌಂಡರಿಂಗ್‌ ಕ್ರಂಚ್‌ ಹಾಕಲು ಸೂಕ್ತ
ಕ್ರಮ ಕೈಗೊಳ್ಳಲಾಗುವುದು.
●ಎನ್‌. ಚಂದ್ರಶೇಖರ, ಸಹಾಯಕ
ಕಾರ್ಯನಿರ್ವಾಹಕ ಎಂಜಿನಿಯರ್‌, ಸಣ್ಣ ನೀರಾವರಿ.

■ ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next