Advertisement

ನದಿ ಪ್ರವಾಹ ಹಾನಿಯೇ ಹೆಚ್ಚು

05:15 PM May 29, 2022 | Team Udayavani |

ಗದಗ: ಜಿಲ್ಲೆಯಲ್ಲಿ ಮೇಘ ನ್ಪೋಟಗೊಳ್ಳುವುದು, ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿ ಉಂಟಾಗುವ ಅತಿವೃಷ್ಟಿಗಿಂತ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ನದಿಗಳ ಪ್ರವಾಹ ಸೃಷ್ಟಿಸುವ ಹಾನಿಯೇ ಹೆಚ್ಚು. ಈವರೆಗೆ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ನರಗುಂದ ಹಾಗೂ ರೋಣ ತಾಲೂಕುಗಳು ಅಕ್ಷರಶಃ ನಲುಗಿ ಹೋಗಿವೆ. ಈ ಭಾಗದಲ್ಲಿ ಪ್ರವಾಹ ತಡೆಗೆ ಉದ್ದೇಶಿತ ಸೇತುವೆಗಳೇ ಆಸರೆ ಎನ್ನುವಂತಾಗಿದೆ.

Advertisement

ಬಯಲುಸೀಮೆ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ಅಂಚಿನಲ್ಲಿ ತುಂಗಭದ್ರೆ ಹರಿಯುತ್ತಿದ್ದರೆ, ನರಗುಂದ ಮತ್ತು ರೋಣ ತಾಲೂಕು ಗಡಿಯಲ್ಲಿ ಮಲಪ್ರಭಾ ನದಿ ಸಾಗುತ್ತದೆ. ಉಭಯ ನದಿಗಳಿಂದ ಜಿಲ್ಲೆಗೆ ಹೇಳಿಕೊಳ್ಳುವಷ್ಟು ನೀರಾವರಿ ಸೌಲಭ್ಯ ದೊರೆಯದಿದ್ದರೂ ಮಳೆಗಾಲದಲ್ಲಿ ಆ ನದಿಗಳು ಬೋರ್ಗರೆಯುತ್ತವೆ. ಅದರಲ್ಲೂ ಮಲಪ್ರಭಾ ನದಿ ಸೃಷ್ಟಿಸುವ ಆತಂಕ, ಅನಾಹುತಗಳು ಅಷ್ಟಿಷ್ಟಲ್ಲ.

ಅಲ್ಪ ನೀರಿಗೂ ಗ್ರಾಮಗಳು ನಡುಗಡ್ಡೆ: ಹಲವು ದಶಕಗಳ ಬಳಿಕ 2008-09ರಲ್ಲಿ ಮೊದಲ ಬಾರಿಗೆ ಬಯಲು ಸೀಮೆಯಲ್ಲಿ ಉಂಟಾದ ಪ್ರವಾಹದಿಂದ ಜಿಲ್ಲೆಯು ನಡುಗಡ್ಡೆಯಾಗಿತ್ತು. ಅಲ್ಲಿವರೆಗೆ ಈ ಭಾಗದ ಜನರು ಕಂಡು ಕೇಳರಿಯದಷ್ಟು ನದಿಗಳು ಉಕ್ಕಿ ಹರಿದಿದ್ದರಿಂದ ನದಿಗೆ ಹೊಂದಿಕೊಂಡಿದ್ದ ಹತ್ತಾರು ಹಳ್ಳಿಗರು ಸಾವಿನ ದವಡೆಯಿಂದ ಪಾರಾದ ಅನುಭವಾಗಿದ್ದರೆ, ಸಾವಿರಾರು ಮನೆಗಳು ಕುಸಿದಿದ್ದರಿಂದ ನವ ಗ್ರಾಮಗಳಿಗೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ತಂದೊಡ್ಡಿತು.

ಆನಂತರ 2019ರ ಸೆಪ್ಟಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಸುರಿದ ಮಹಾಮಳೆ ಮತ್ತು ಜಿಲ್ಲೆಯಲ್ಲೂ ಅತಿವೃಷ್ಟಿ ಉಂಟಾಗಿದ್ದರಿಂದ ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿಗಳು ಉಕ್ಕಿ ಹರಿದಿದ್ದರಿಂದ ದಶಕದ ಹಿಂದಿನ ಕಹಿ ಅನುಭವ ಮರುಕಳಿಸಿತು. ನವಿಲುತೀರ್ಥ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಜಲಾಶಯಕ್ಕೆ ಗರಿಷ್ಠ ಪ್ರಮಾಣದಲ್ಲಿ ಒಳಹರಿವು ಹೆಚ್ಚುತ್ತಿದ್ದರಿಂದ ಗರಿಷ್ಠ 1.20 ಲಕ್ಷ ಕ್ಯೂಸೆಕ್‌ ವರೆಗೆ ನೀರು ನದಿಗೆ ಹರಿಸಲಾಯಿತು. ಇದರಿಂದ ನರಗುಂದ ಮತ್ತು ರೋಣ ತಾಲೂಕಿನ ಒಟ್ಟು 26 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಆಯಾ ಗ್ರಾಮಗಳ ಜನರು ಮತ್ತೆ ನವಗ್ರಾಮ, ಜಿಲ್ಲಾಡಳಿತ ಆರಂಭಿಸಿದ ಕಾಳಜಿ ಕೇಂದ್ರಗಳಲ್ಲೇ ದಿನ ಕಳೆದರು. ಪ್ರವಾಹ ಇಳಿದ ಬಳಿಕ ಸ್ವಗ್ರಾಮಗಳಿಗೆ ತೆರಳಿದರು. ಅಳಿದುಳಿದ ಮನೆಗಳನ್ನು ಸ್ವಚ್ಛಗೊಳಿಸಿ ಜೀವನ ಮುಂದುವರಿಸಿದರು.

ಬಳಿಕ 2020, 2021ರಲ್ಲೂ ಪ್ರವಾಹದ ಕರಿನೆರಳು ಕಂಡುಬಂದಿತ್ತಾದರೂ ಅದೃಷ್ಟವಶಾತ್‌ ಹೆಚ್ಚಿನ ಹಾನಿ ಸಂಭವಿಸಲಿಲ್ಲ ಎಂಬುದು ಸಮಾಧಾನಕರ ಸಂಗತಿ.

Advertisement

ಮೂಲ ಸೌಕರ್ಯದ್ದೇ ದೊಡ್ಡ ಸಮಸ್ಯೆ: ನರಗುಂದ ತಾಲೂಕಿನ ಮಲಪ್ರಭಾ ನದಿ ಪಾತ್ರದ ಬೂದಿಹಾಳ ಹಾಗೂ ಬೆಣ್ಣೆಹಳ್ಳದ ದಂಡೆಯಲ್ಲಿರುವ ಸುರಕೋಡ ಮತ್ತು ಕುರ್ಲಗೇರಿ, ರೋಣ ತಾಲೂಕಿನ ಮೆಣಸಗಿ, ಗಾಡಗೋಳಿ, ಹೊಳೆಆಲೂರು, ಹೊಳೆಮಣ್ಣೂರು, ಬಿ.ಎಸ್‌. ಬೇಲೇರಿ ಸೇರಿದಂತೆ ಹಲವು ಗ್ರಾಮಗಳನ್ನು ಸ್ಥಾಳಂತರಿಸಲಾಗಿದೆ.

ದಶಕಗಳಿಂದ ಸ್ಥಳೀಯರ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದ ನವ ಗ್ರಾಮಗಳು ಕಳೆದ ಮೂರ್‍ನಾಲ್ಕು ವರ್ಷಗಳಿಂದೀಚೆಗೆ ಉಂಟಾದ ನೆರೆಯಿಂದ ಮತ್ತೆ ನವಗ್ರಾಮಗಳಿಗೆ ಬೇಡಿಕೆ ಬಂದಿದೆ. ಆಯಾ ಗ್ರಾಮಗಳ ಭಾಗಶಃ ಜನರು ನವಗ್ರಾಮಗಳಿಗೆ ಸ್ಥಳಾಂತರಗೊಂಡಿದ್ದರೂ ಹಕ್ಕು ಪತ್ರಗಳ ವಿತರಣೆಯಾಗಿಲ್ಲ. ಈಗಿರುವ ಜನಸಂಖ್ಯೆಗೆ ಅಲ್ಲಿನ ಮನೆಗಳು ಸಾಲುತ್ತಿಲ್ಲ. ನವಗ್ರಾಮಗಳಲ್ಲಿ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯಗಳಿಲ್ಲ ಎಂಬುದು ಸ್ಥಳೀಯರ ಅಳಲು.

ಕನಸಾದ ಒತ್ತುವರಿ ತೆರವು: ಜಿಲ್ಲೆಯಲ್ಲಿ ಪ್ರವಾಹ ತಡೆಗೆ ಮಲಪ್ರಭಾ ನದಿ ಮತ್ತು ಬೆಣ್ಣೆ ಹಳ್ಳ ಒತ್ತುವರಿ ತೆರವುಗೊಳಿಸುವುದು ಏಕೈಕ ಮಾರ್ಗವಾಗಿದೆ. ದಶಕಗಳ ಹಿಂದೆ ಇದ್ದ ವಿಶಾಲವಾದ ನದಿ ಹಾಗೂ ಹಳ್ಳದ ವಿಸ್ತೀರ್ಣ ಈಗಿಲ್ಲ. ಈ ಕುರಿತಂತೆ ಧಾರವಾಡ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಮಲಪ್ರಭಾ ಒತ್ತುವರಿಯಾಗಿರುವ ಬಗ್ಗೆ ಜಿಲ್ಲಾ ಭೂ ದಾಖಲೆಗಳ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದರಾದರೂ, ಒತ್ತುವರಿ ತೆರವು ಕಾರ್ಯಾಚರಣೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಕಡಿದಾದ ಮಾರ್ಗದಲ್ಲಿ ಸಾಗುವ ನದಿ ನೀರು ಪ್ರವಾಹ ಬಂದಾಗ ಅಕ್ಕಪಕ್ಕದ ಊರುಗಳಿಗೆ ನುಗ್ಗುತ್ತದೆ ಎಂಬುದು ಈ ಭಾಗದ ಗ್ರಾಮಸ್ಥರ ಆರೋಪ.

ನೆರೆ ತಡೆಗೆ ನೆರವಾಗುವುದೇ ಸೇತುವೆ?: ಜಿಲ್ಲಾಡಳಿತದ ಮೂಲಗಳ ಪ್ರಕಾರ ಲಖಮಾಪುರ ನಡುಗಡ್ಡೆಯಾಗುವುದನ್ನು ತಡೆಯಲು 2 ಕೋಟಿ ರೂ. ವೆಚ್ಚದಲ್ಲಿ ಮುಖ್ಯರಸ್ತೆಯಿಂದ ಲಖಮಾಪುರಕ್ಕೆ ಸೇತುವೆ ನಿರ್ಮಿಸಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಅದರಂತೆ ಕೊಣ್ಣೂ ರು ಬಳಿ ನದಿ ದಿಕ್ಕು ಬದಲಿಸಿದೆ. ಅಲ್ಲದೇ ಹಳೆಯ ರಸ್ತೆ ಸೇತುವೆ ಇದ್ದರೂ, ಅದು ತಗ್ಗು ಪ್ರದೇಶದಲ್ಲಿದ್ದಿದ್ದರಿಂದ ನೀರಿನ ಹರಿಯುವಿಕೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಹೊಸ ಸೇತುವೆ ನಿರ್ಮಾಣಕ್ಕೆ ರಾ.ಹೆ.ಪ್ರಾಧಿಕಾರದಿಂದ 6 ಕೋಟಿ ರೂ. ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಇದರಿಂದ ನೀರು ಸರಾಗವಾಗಿ ಹರಿಯಲಿದೆ ಎನ್ನುತ್ತಾರೆ ರಾ.ಹೆ.ಪ್ರಾ. ಸಹಾಯಕ ಅಭಿಯಂತರ ರಾಜೇಂದ್ರ.

4485 ಭಾಗಶಃ ಮನೆಗಳು ಹಾನಿ: ಪ್ರವಾಹ ಮತ್ತು ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ 2019ರಲ್ಲಿ 1586, 2021ರಲ್ಲಿ 1965, 2021-22ರಲ್ಲಿ 934 “ಸಿ’ ಕ್ಯಾಟಗರಿ ಮನೆ ಮನೆಗಳಿಗೆ ತಲಾ 50 ಸಾವಿರ ವಿತರಿಸಲಾಗಿದೆ.

2019ರ ನಂತರ ಹೇಳಿಕೊಳ್ಳುವಂತ ಪ್ರವಾಹ ಬಂದಿಲ್ಲ. ಆದರೂ, ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದರೆ ನಮಗೆ ಹೆದರಿಕೆ ಶುರುವಾಗುತ್ತದೆ. ಹೀಗಾಗಿ ನದಿಯ ನೈಜ ವಿಸ್ತೀರ್ಣವನ್ನು ಗುರುತಿಸಿ, ನೀರು ಸರಾಗವಾಗಿ ಹರಿಯುವಂತೆ ಸ್ವತ್ಛ ಮಾಡಿದರೆ, ಬಹತೇಕ ಸಮಸ್ಯೆ ನಿವಾರಣೆಯಾಗುತ್ತದೆ. –ಚಂದ್ರಶೇಖರ ಆರ್‌.ಪಾಟೀಲ, ಹೊಳೆಆಲೂರು ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next