ಬೆಂಗಳೂರು: ಕಳೆದ 8- 10 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದ್ದು ಆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ವಿಷಮ ಶೀತ ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು, ಪ್ರಯಾಣ ಇತಿಹಾಸವಿಲ್ಲದರಲ್ಲೂ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥಯ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದರು.
ಅಶೋಕ್ ಗೊಂದಲ: ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಅವರು ಈ ಪ್ರದೇಶಗಳನ್ನು ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಸೋಮವಾರ ಹೇಳಿಕೆ ನೀಡಿದರು. ಇದರಿಂದ ಈ ಪ್ರದೇಶಗಳು ಲಾಕ್‌ಡೌನ್ ಆಗಲಿದೆಯೇ ಅಥವಾ ಸೀಲ್‌ಡೌನ್‌ಗೆ ಸೀಮಿತವಾಗಲಿದೆಯೇ ಎಂಬ ಬಗ್ಗೆ ಗೊಂದಲ ಮೂಡಿತ್ತು. ವಾಸ್ತವದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಬಹುತೇಕ ಎರಡೂ ಒಂದೇ. ವ್ಯಾಪ್ತಿ ತೀವ್ರತೆಗೆ ಸಂಬಂಧಪಟ್ಟಂತೆ ತುಸು ಭಿನ್ನವಾಗಿವೆ. ಎರಡೂ ವ್ಯವಸ್ಥೆಯಲ್ಲೂ ಸ್ಥಳೀಯರ ಓಡಾಟ, ಹೊರಗಿನ ಪ್ರದೇಶದವರಿಗೆ ಪ್ರವೇಶ ನಿರ್ಬಂಧವಿರುತ್ತದೆ. ಆ ಪ್ರದೇಶಕ್ಕೆ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿರುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಕೊಳೆಗೇರಿ ಪ್ರದೇಶವೂ ಸೀಲ್‌ಡೌನ್: ನಗರದಲ್ಲಿ ಹೆಚ್ಚು ಜನ ಸಾಂದ್ರತೆ ಇರುವ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಲ್ಲಿ ಆದ್ಯತೆಯ ಮೇರೆಗೆ ಆಯಾ ಪ್ರದೇಶವನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಸೆಲ್ ಮಾರುಕಟ್ಟೆ ಬಂದ್?: ಮೊದಲ ಹಂತದಲ್ಲಿ ಐದು ಪ್ರದೇಶ ಗಳಾದ ಮೇಲೆ ಎರಡನೇ ಹಂತದಲ್ಲಿ ಶಿವಾಜಿನಗರದ ರಸೆಲ್ ಮಾರುಕಟ್ಟೆ ಸೇರಿದಂತೆ ಹೆಚ್ಚು ಜನ ಓಡಾಡುವ ಪ್ರದೇಶಗಳನ್ನು ಸೀಲ್‌ಡೌನ್ ಮಾಡ ಲು ಪಾಲಿಕೆ ಚಿಂತನೆ ನಡೆಸಿದೆ. ಈ ಹಂತದಲ್ಲಿ ನಗರದಲ್ಲಿನ ಪ್ರಮುಖ ಮಾರುಕಟ್ಟೆಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕಲಾಸಿ ಪಾಳ್ಯ ಮಾರುಕಟ್ಟೆ ಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದ್ದು, ಕೆ.ಆರ್. ಮಾರುಕಟ್ಟೆಯನ್ನು ಇಲ್ಲಿನ ವ್ಯಾಪಾ ರಿಗಳು ಸ್ವಯಂ ಪ್ರೇರಿತವಾಗಿ ಜುಲೈ 1ರವರೆಗೆ ಸೀಲ್‌ಡೌನ್ ಮಾಡಲು ನಿರ್ಧರಿಸಿದ್ದಾರೆ.
ನಿಯಮ ಮೀರಿದರೆ ಶಿಸ್ತುಕ್ರಮ: ಹೊರರಾಜ್ಯದಿಂದ ಹಾಗೂ ವಿದೇಶದಿಂದ ಬರುವವರು ಕಡ್ಡಾಯವಾಗಿ 14ದಿನ ಕ್ವಾರಂಟೈನ್‌ನಲ್ಲಿರುವಂತೆ ಅಕ್ಕಪಕ್ಕದ ಮನೆಯವರು ಹಾಗೂ ವಸತಿ ಸಮುತ್ಛಯಗಳ ಅಸೋಸಿಯೇಷನ್‌ನವರು ಎಚ್ಚರ ವಹಿಸುವ ಮೂಲಕ ಸಹಕರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಮಾರ್ಗಸೂಚಿ ಹೊರಡಿಸಿರುವ ಪಾಲಿಕೆ ನಗರದ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರು ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್ ಆಗಬೇಕು. ಯಾರಾದರು ಈ ನಿಯಮ ಉಲ್ಲಂಘನೆ ಮಾಡಿದರೆ, ಅಕ್ಕಪಕ್ಕದ ಮನೆಯವರು ಹಾಗೂ ವಸತಿ ಸಮುತ್ಛಯಗಳ ಅಸೋಸಿಯೇಷನ್‌ನವರು ಬಿಬಿಎಂಪಿ ಸಹಾಯವಾಣಿ, ಪೊಲೀಸ್ ನಿಯಂತ್ರಣ ಕೊಠಡಿ ಅಥವಾ 97777 77684 ನಂಬರ್‌ಗೆ ವಾಟ್ಸಾಪ್, ಟೆಲಿಗ್ರಾಮ್ ಸಂದೇಶದ ಮೂಲಕ ಮಾಹಿತಿ ನೀಡಲು ಕೋರಿದ್ದಾರೆ.
ಆ್ಯಂಬುಲೆನ್ಸ್‌ಗಾಗಿ ಕಾಯುವ ಸ್ಥಿತಿ: ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗಿದೆ. ಈ ಮಧ್ಯೆ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಸಕಾಲದಲ್ಲಿ ಆ್ಯಂಬುಲೆನ್ಸ್‌ಗಳು ಸಿಗುತ್ತಿಲ್ಲ! ಕಳೆದ ಒಂದು ವಾರದಿಂದ ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಶತಕ ಬಾರಿಸುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 73 ಆ್ಯಂಬುಲೆನ್ಸ್‌ಗಳಿದ್ದು, ಇದರಲ್ಲಿ 7 ಆ್ಯಂಬುಲೆನ್ಸ್ ಗಳನ್ನು ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಬಳಸಲಾಗುತ್ತಿದೆ. ಅಲ್ಲದೆ, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಷ್ಟಾದರೂ ರೋಗಿಯನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸುವುದಕ್ಕೆ ಮೂರರಿಂದ ನಾಲ್ಕು ಗಂಟೆ ಸಮಯವಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.