Advertisement

ಹೆಚ್ಚು ಖರ್ಚಾದ ತಿಂಗಳ ಸಬ್ಸಿಡಿ ಬಾಕಿ

12:07 AM Aug 02, 2021 | Team Udayavani |

ಕುಂದಾಪುರ: ಮತ್ತೂಂದು ಮೀನುಗಾರಿಕೆ ಋತು ಆರಂಭಗೊಂಡಿದೆ. ಆದರೆ ಆಳ ಸಮುದ್ರ ಮೀನುಗಾರರಿಗೆ ಕಳೆದ ಋತುವಿನಲ್ಲಿ ಹೆಚ್ಚು ಡೀಸೆಲ್‌ ವ್ಯಯವಾಗಿದ್ದ ಜನವರಿ ಮತ್ತು ಫೆಬ್ರವರಿ ತಿಂಗಳ ಸಬ್ಸಿಡಿ ಸರಕಾರದಿಂದ ಇನ್ನೂ ಸಿಕ್ಕಿಲ್ಲ. ಇದರಿಂದ ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಮೀನುಗಾರರಿಗೆೆ ಪ್ರತೀ ಲೀಟರ್‌ ಡೀಸೆಲ್‌ಗೆ 14-15 ರೂ. ಸಬ್ಸಿಡಿಯನ್ನು ಸರಕಾರ ಪಾವತಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ 1,600 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 953 ಮಂದಿ ಇದರ ಫಲಾನುಭವಿಗಳಿದ್ದಾರೆ.

ಕಳೆದ ಆಗಸ್ಟ್‌ನಿಂದ ಡಿಸೆಂಬರ್‌ ಮತ್ತು ಮಾರ್ಚ್‌ ನಿಂದ ಮೇ ತಿಂಗಳ ವರೆಗಿನ ಸಬ್ಸಿಡಿ ಹಣ ಪಾವತಿ ಯಾಗಿದೆ. ಆದರೆ ಕಳೆದ ವರ್ಷ ಪ್ರತಿಕೂಲ ಹವಾಮಾನ, ಕೊರೊನಾ, ಕಾರ್ಮಿಕರ ಕೊರತೆ, ಡೀಸೆಲ್‌ ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ಅಷ್ಟೇನೂ ಫಲದಾಯಕ ಮೀನುಗಾರಿಕೆ ನಡೆದಿರಲಿಲ್ಲ.

ಇಡೀ ಋತುವಿನಲ್ಲಿ ಗರಿಷ್ಠ ಮೀನುಗಾರಿಕೆ ನಡೆದದ್ದು ಡಿಸೆಂಬರ್‌ನಿಂದ ಫೆಬ್ರವರಿಯ ವರೆಗೆ ಮಾತ್ರ. ಇದಕ್ಕನುಗುಣವಾಗಿ ಗರಿಷ್ಠ ಡೀಸೆಲ್‌ ಕೂಡ ಬಳಕೆಯಾಗಿತ್ತು.

ಒಂದು ಬೋಟ್‌ ಒಮ್ಮೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸಂದರ್ಭ 400ರಿಂದ 500 ಲೀ. ಡೀಸೆಲ್‌ ವ್ಯಯವಾಗುತ್ತದೆ. ಜನವರಿ- ಫೆಬ್ರವರಿ ಬಾಕಿಯಾದ ಸಬ್ಸಿಡಿ ಮೊತ್ತವು ಪ್ರತೀ ಪರ್ಸಿನ್‌ ಬೋಟ್‌ಗೆ ಕನಿಷ್ಠ 1 ಲಕ್ಷ ರೂ., ಟ್ರಾಲ್‌ ಬೋಟ್‌ಗೆ ಕನಿಷ್ಠ 1.30 ಲಕ್ಷ ರೂ. ಮತ್ತು ತ್ರಿಸೆವೆಂಟಿಗೆ ಕನಿಷ್ಠ 60-70 ಸಾವಿರ ರೂ.ಗಳಷ್ಟಿದೆ.

Advertisement

ಹೊಸ ಮೀನುಗಾರಿಕೆ ಋತು ಆರಂಭವಾಗಿದ್ದರೂ ಯಾರಲ್ಲೂ ಬೋಟುಗಳನ್ನು ಕಡಲಿಗೆ ಇಳಿಸಲು ಉತ್ಸಾಹವಿಲ್ಲ. ಡೀಸೆಲ್‌, ದುರಸ್ತಿ, ಬಲೆ, ಮತ್ತಿತರ ಸಲಕರಣೆ ಅಳವಡಿಕೆ ಸಹಿತ ಲಕ್ಷಾಂತರ ರೂ. ಬೇಕು. ಜನವರಿ- ಫೆಬ್ರವರಿ ತಿಂಗಳ ಸಬ್ಸಿಡಿ ಸಿಕ್ಕರೆ ಮೀನುಗಾರರಿಗೆ ಪ್ರಯೋಜನವಾಗಲಿದೆ.  – ರಮೇಶ್‌ ಕುಂದರ್‌,  ಪರ್ಸಿನ್‌ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ

ಸಬ್ಸಿಡಿ ಹಣದ ವಿವರ ಪಟ್ಟಿ ಮಾಡಿ ಸುಮಾರು 70 ಕೋ.ರೂ. ನೀಡ ಬೇಕಿರುವ ಬಗ್ಗೆ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಎಪ್ರಿಲ್‌ ನಲ್ಲಿ ಕೇವಲ 30 ಕೋ.ರೂ. ಬಿಡುಗಡೆ ಯಾಗಿದೆ. ಆಗಿನ ಸಿಎಂ ಬಿಎಸ್‌ವೈ ಮತ್ತು ಮಾಜಿ ಸಚಿವ ಅಂಗಾರ ಹಣ ಬಿಡುಗಡೆಗೆ ಸೂಚಿಸಿದ್ದಾರೆ.          – ಎ. ರಾಮಾಚಾರಿ, ಮೀನುಗಾರಿಕೆ ಇಲಾಖೆ ರಾಜ್ಯ ನಿರ್ದೇಶಕರು

ಕಳೆದ ಬಾರಿ ಹೆಚ್ಚು ಮೀನುಗಾರಿಕೆ ನಡೆದದ್ದು ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಮಾತ್ರ. ಸಬ್ಸಿಡಿ ಪಾವತಿ ಬಾಕಿ ಬಗ್ಗೆ ಬಗ್ಗೆ ಹಿಂದಿನ ಸಚಿವರಿಗೆ ಮನವಿ ಮಾಡಿದ್ದೆವು. ಆರ್ಥಿಕ ಮುಗ್ಗಟ್ಟಿದ್ದರೂ ಮೀನುಗಾರರ ಕಷ್ಟ ಅರಿತು, ಆದಷ್ಟು ಬೇಗ ಆ ಹಣ ಪಾವತಿಸಿದರೆ ಅನುಕೂಲವಾಗಲಿದೆ. ನವೀನ್‌, ಮೀನುಗಾರರು,  ಮಂಗಳೂರು

 

- ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next