ಬೆಂಗಳೂರು : ‘ಪುನೀತ್ ರಾಜ್ ಕುಮಾರ್ ಅವರು ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್’ ಆಗಿದ್ದರು’ ಎಂದು ಪ್ರಸಿದ್ಧ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಶುಕ್ರವಾರ
ಉದಯವಾಣಿ.ಕಾಮ್ ಜೊತೆ ಮಾತನಾಡುತ್ತ ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಪುನೀತ್ ಅವರೊಂದಿಗಿನ ಒಡನಾಟ ನೆನೆಸಿಕೊಂಡು, ‘ರನ್ ಆಂಟನಿ’ ಚಿತ್ರದಲ್ಲಿ ‘ ಜನಕ್ ಜನಕ್’ ಹಾಡನ್ನು ನಾನೇ ಹಾಡುತ್ತೇನೆ ಅಂತ ಮುಂದೆ ಬಂದಿದ್ದರು. ‘ಹೊಸ ಪ್ರಯೋಗಗಳನ್ನು ಯಾವುದೇ ಮುಲಾಜಿಲ್ಲದೆ ಮಾಡಿ ಸಿನಿಮಾ ಗೆಲ್ಲಿಸಿಕೊಡಿ’ ಅಂದಿದ್ದರು ಎಂದರು.
”ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು. ಅವರು ಕನ್ನಡ ಚಿತ್ರರಂಗದ ಬಹುದೊಡ್ಡ ಭರವಸೆಯಾಗಿದ್ದರು. ಭರವಸೆ ಅಂದರೆ ಅದು ಪುನೀತ್ ಸರ್” ಎಂದರು.
”Dr. Rajkumar’s Learning App ಗೆ ಸಂಗೀತ ಮಾಡಿದ್ದೂ ನಾನೇ. ಬಿಡುಗಡೆಗೆ ಬಂದಿದ್ದಾಗ ಬೇರೆ ಕಡೆ ಕರೆದುಕೊಂಡು ಹೋಗಿ, ಮುಂದಿನ ವಾರ ಸಿಗೋಣ. ಪಿಆರ್ ಕೆ ಪ್ರೊಡಕ್ಷನ್ ಗೆ ಸಿನಿಮೇತರ ಹಾಡುಗಳನ್ನು ನೀವು ಮಾಡಬೇಕು. ಅದರಲ್ಲಿ ನಾನು ಹಾಡುತ್ತೇನೆ, ಅಭಿನಯಿಸುತ್ತೇನೆ ಅಂದಿದ್ದರು” ಎಂದು ಮರೆಯಲಾರದ ನೆನಪುಗಳನ್ನು ಹೊರ ಹಾಕಿದರು.
ಮಂಗಳೂರಿನ ಒಂದು ತಂಡ ಅವರಿಂದ ಒಂದು ಹಾಡು ಬಿಡುಗಡೆ ಮಾಡಿಸಬೇಕೆಂದು ಪ್ರಯತ್ನ ಪಟ್ಟಿತ್ತು. ಅವರನ್ನು ತಲುಪಲು ಸಾಧ್ಯವಾಗದಿದ್ದಾಗ ನನ್ನನ್ನು ಸಂಪರ್ಕಿಸಿದರು. ಒಂದು ಕರೆ ಮಾಡಿದೆ, ಇಂತಿಂತ ಸಮಯಕ್ಕೆ ಬರಲು ಹೇಳಿ ಅಂದರು , ನಂತರ ಬಿಡುಗಡೆ ಗೊಳಿಸಿದ್ದರು ಎಂದು ಒಡನಾಟದ ನೆನಪುಗಳನ್ನು , ಸರಳತೆಯನ್ನು ನೆನಪಿಸಿಕೊಂಡರು.
”ನನಗೆ ಅವರಿಲ್ಲ ಎನ್ನುವುದು ದೊಡ್ಡ ಆಘಾತ” ಎಂದರು.
ಪುನೀತ್ ಅವರ ‘ಪ್ರಥ್ವಿ’ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದರು.ಚಿತ್ರದಲ್ಲಿ ಪುನೀತ್ ಅವರು ಯುವ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಸಂದೇಶ ಚಿತ್ರದಲ್ಲಿತ್ತು.
ಸಹಕಾರ : ಅವಿನಾಶ್ ಕಾಮತ್