Advertisement

ಬಹುನಿರೀಕ್ಷಿತ ಮಂಗಳೂರು ವೀಕೆಂಡ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜನೆ ವಿಳಂಬ,ಚುನಾವಣೆಯೂ ಅಡ್ಡಿ

11:20 AM Feb 27, 2023 | Team Udayavani |

ಮಂಗಳೂರು: ಕೋವಿಡ್‌ ಅನಂತರದ ದಿನಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಮತ್ತು ಜಿಲ್ಲೆಯ ವ್ಯಾಪಾರ ವಹಿವಾಟನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲು ಉದ್ದೇಶಿಸಿದ್ದ ಬಹುನಿರೀಕ್ಷಿತ ವೀಕೆಂಡ್‌ ಸ್ಟ್ರೀಟ್‌ ಫೆಸ್ಟಿವಲ್‌ ಮತ್ತಷ್ಟು ವಿಳಂಬವಾಗಲಿದೆ. ಹಿಂದಿನ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ನಗರದ ಹಂಪನಕಟ್ಟೆ ಕ್ಲಾಕ್‌ಟವರ್‌ ಬಳಿ ಯಿಂದ ಎ.ಬಿ.ಶೆಟ್ಟಿ ವೃತ್ತದ ವರೆಗಿನ ಲೂಪ್‌ ರಸ್ತೆ (ಏಕಮುಖ ರಸ್ತೆ)ಯ ಎರಡೂ ಬದಿಯಲ್ಲಿ ವಾರಾಂತ್ಯದಲ್ಲಿ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜನೆಗೆ ಉದ್ದೇಶಿಸಿದ್ದರು. ಆಹಾರ ಮಳಿಗೆಗಳು, ಕರಕುಶಲ ವಸ್ತುಗಳ ಮಾರಾಟ, ಮಕ್ಕಳಿಗೆ ಮನರಂಜನೆ ಹೀಗೆ ಒಂದು ಸಂತೆಯ ಮಾದರಿಯಲ್ಲಿ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜಿ ಸುವುದು ಉದ್ದೇಶವಾಗಿತ್ತು.

Advertisement

ಈ ಕುರಿತು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲೂ ಚರ್ಚೆಯಾಗಿ ಕೆಲವೊಂದು ಸಲಹೆ ಸೂಚನೆ ಮೂಲಕ ಯೋಜನೆ ಸಿದ್ಧವಾಗಿತ್ತು. ಆದರಂತೆ ಕದ್ರಿ ಪಾರ್ಕ್‌ನ ನೂತನ ಸ್ಮಾರ್ಟ್‌ ರಸ್ತೆ, ಕ್ಲಾಕ್‌ ಟವರ್‌ ಲೂಪ್‌ ರಸ್ತೆ ಈ ಎರಡೂ ಕಡೆಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಒಂದು ವಾರ ಕದ್ರಿಯಲ್ಲಿ ಆಯೋಜನೆಗೊಂಡರೆ ಇನ್ನೊಂದು ವಾರ ಕ್ಲಾಕ್‌ ಟವರ್‌ ಈ ರೀತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿತ್ತು. ಆದರೆ ಅನಂತರದ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಜಿಲ್ಲಾಧಿಕಾರಿಯವರೂ ವರ್ಗಾವಣೆಗೊಂಡರು.

ಚುನಾವಣೆ ಹಿನ್ನೆಲೆ ಸದ್ಯ ಅಸಾಧ್ಯ

ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿ ಯಿಂದ ಪ್ರತಿವರ್ಷ ಜಿಲ್ಲಾಡಳಿತ ವತಿಯಿಂದ ಆಯೋಜನೆಗೊಳ್ಳುತ್ತಿದ್ದ ಕರಾವಳಿ ಉತ್ಸವ- ಬೀಚ್‌ ಉತ್ಸವ ಈ ಬಾರಿಯೂ ಆಯೋಜನೆಗೊಂಡಿಲ್ಲ. ವೀಕೆಂಡ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜನೆ ಮೂಲ ಕವಾದರೂ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿ
ಸಲಾಗಿತ್ತಾದರೂ ಅದೂ ಸಾಧ್ಯವಾಗಿಲ್ಲ. ನೂತನ ಜಿಲ್ಲಾಧಿಕಾರಿಯವರು ಈ ನಿಟ್ಟಿನಲ್ಲಿ ಉತ್ಸುಕತೆ ತೋರಿಸಿದ್ದರು. ಆದರೆ ಇನ್ನು ಕೆಲವೇ ದಿನಗಳಲ್ಲಿ ನೀತಿ ಸಂಹಿತೆ ಜಾರಿ ಯಾಗುವುದರಿಂದ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಈಗಾಗಲೇ ನೀತಿ ಸಂಹಿತೆಗೆ ಒಳಪಟ್ಟಿರುವುದರಿಂದ ಆಯೋಜನೆ ದೂರದ ಮಾತು. ಚುನಾವಣೆ ಮುಗಿಯುತ್ತಲೇ ಮುಂಗಾರು ಆರಂಭವಾಗಲಿದ್ದು, ಮಳೆ ನಿಂತ ಬಳಿಕ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಆಯೋಜನೆ ನಿರ್ಧಾರವಾಗಲಿದೆ.

ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜನೆಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚುನಾವಣೆ ಇರುವುದರಿಂದ ಸದ್ಯ ಆಯೋಜನೆ ಕಷ್ಟ. ಚುನಾವಣೆ ನಂತರದಲ್ಲಿ ಮಳೆಗಾಲ ಆರಂಭವಾಗುವುದರಿಂದ ಮಳೆಗಾಲ ಮುಗಿದ ಬಳಿಕ ಆಯೋಜಿಸುವ ಚಿಂತನೆಯಿದೆ.
-ಮಾಣಿಕ್ಯ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

Advertisement

ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ

ಸ್ಟ್ರೀಟ್‌ ಫೆಸ್ಟಿವಲ್‌ ಪರಿಕಲ್ಪನೆ ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಭಾರತದ ಕೆಲವು ನಗರಗಳಲ್ಲೂ ಇತ್ತೀಚಿನ ದಿನಗಳಲ್ಲಿ ವಿವಿಧ ಮಾದರಿಗಳಲ್ಲಿ ಸ್ಟ್ರೀಟ್‌ ಫೆಸ್ಟಿವಲ್‌ನಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಂಗಳೂರಿಗೆ ಹೊಸದಾಗಿರುವ ಈ ಕಾರ್ಯಕ್ರಮ ಪ್ರತಿ ವಾರಾಂತ್ಯ ಆಯೋಜನೆಗೊಳ್ಳಬೇಕಾದ ಅಗತ್ಯವಿದೆ. ಈಗಾಲೇ ಹೊಟೇಲ್‌ ಮಾಲಕರ ಸಂಘ ಸಹಿತ, ವಿವಿಧ ಸಂಘ – ಸಂಸ್ಥೆಗಳು ಸ್ಟ್ರೀಟ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಉತ್ಸುಕತೆ ತೋರಿಸಿವೆ ಎನ್ನುತ್ತಾರೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next