ಬೆಂಗಳೂರು: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷದ ಆಗಮನವಾಗಿದೆ. ಕಳೆದ ವರ್ಷ ಕನ್ನಡ ಚಿತ್ರರಂಗ ಸಿಹಿಯ ರುಚಿ ನೋಡಿದಕ್ಕಿಂತ ಕಹಿಯ ಅನುಭವವನ್ನು ಪಡೆದುಕೊಂಡದ್ದೇ ಹೆಚ್ಚು.
ತೆರೆಕಂಡ ನೂರಾರು ಸಿನಿಮಾಗಳ ಪೈಕಿ ತಲೆಯಲ್ಲಿ ಉಳಿದ ಸಿನಿಮಾಗಳು ಕೇವಲ ಕೈಲೆಕ್ಕಕ್ಕೆ ಸಿಗುವಷ್ಟು ಅಷ್ಟೇ. ದ್ವಿತೀಯಾರ್ಧದಲ್ಲಿ ಬಂದ ಕೆಲ ಸಿನಿಮಾಗಳು ಥಿಯೇಟರ್ ಕ್ಕಿಂತ ಓಟಿಟಿಯಲ್ಲೇ ಹೆಚ್ಚು ಸದ್ದು ಮಾಡಿತ್ತು.
ವರ್ಷಾಂತ್ಯಕ್ಕೆ ಬಂದ ಚಿತ್ರಗಳು ಥಿಯೇಟರ್ ನಲ್ಲಿ ಸದ್ದು ಮಾಡುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಗಳಿಕೆ ಕಾಣುತ್ತಿದೆ.
ಈ ವರ್ಷ ಒಂದಕ್ಕಿಂತ ಒಂದು ನಿರೀಕ್ಷೆಯ ಸಿನಿಮಾಗಳು ತೆರೆ ಕಾಣಲಿದೆ. ಪ್ರೇಕ್ಷಕರ ನಿರೀಕ್ಷೆ ನೂರರಷ್ಟು ಇರುವ ದೊಡ್ಡ ಸಿನಿಮಾಗಳು ಈ ವರ್ಷವೇ ತೆರೆ ಕಾಣಲಿದೆ. ಯಾವೆಲ್ಲ ಕನ್ನಡ ಚಿತ್ರಗಳು 2025ರಲ್ಲಿ ತೆರೆ ಕಾಣಲಿದೆ ಎನ್ನುವುದರ ಒಂದು ಪಟ್ಟಿ ಇಲ್ಲಿದೆ.
ಟಾಕ್ಸಿಕ್: (Toxic Movie):
ಯಶ್ (Actor Yash) ಅವರ ʼಕೆಜಿಎಫ್ʼ ಕನ್ನಡ ಚಿತ್ರರಂಗದತ್ತ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಯಶಸ್ಸು ಸಾಧಿಸಿದ ʼಕೆಜಿಎಫ್ʼ ಬಳಿಕ ಯಶ್ ಕಾಣಿಸಿಕೊಳ್ಳಲಿರುವ ʼಟಾಕ್ಸಿಕ್ʼ ಅನೌನ್ಸ್ ಆದ ದಿನದಿಂದಲೇ ಬಹುನಿರೀಕ್ಷಿತ ಸಿನಿಮಾವಾಗಿ ಬಿಟ್ಟಿದೆ. ಈಗಾಗಲೇ ಚಿತ್ರೀಕರಣವನ್ನು ವೇಗವಾಗಿ ಮುಗಿಸಿರುವ ʼಟಾಕ್ಸಿಕ್ʼ ಇದೇ ಮಾರ್ಚ್ ಏ.10 ರಂದು ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎಂದು ಯಶ್ ಅವರೇ ಹೇಳಿದ್ದಾರೆ.
ಈ ವರ್ಷವೇ ಸಿನಿಮಾ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ. ಮಾಲಿವುಡ್ ನ ಗೀತು ಮೋಹನ್ ದಾಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಕಾಂತಾರ ಚಾಪ್ಟರ್ -1 (Kantara: Chapter 1 ) :
ʼಕೆಜಿಎಫ್ʼ ಬಳಿಕ ಕನ್ನಡ ಚಿತ್ರರಂಗ ಮತ್ತೊಮ್ಮೆ ಜಗತ್ತಿನೆಲ್ಲೆಡೆ ಸುದ್ದಿಯಾದದ್ದು ʼಕಾಂತಾರʼ ಸಿನಿಮಾದ ಮೂಲಕ. ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಆ ಬಳಿಕ ಇತರೆ ಭಾಷೆಯಲ್ಲಿ ಡಬ್ ಆಗಿ ಮೋಡಿ ಮಾಡಿದ ʼಕಾಂತಾರʼ ರಿಷಬ್ ಶೆಟ್ಟಿ (Rishab Shetty) ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.
ʼಕಾಂತಾರ ಚಾಪ್ಟರ್-1ʼ ಬಗ್ಗೆ ಬಹು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈಗಾಗಲೇ ಶೂಟಿಂಗ್ ಹಂತದಲ್ಲೇ ಸುದ್ದಿಯಾಗಿರುವ ಚಿತ್ರ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಧೂಳು ಎಬ್ಬಿಸುತ್ತಿರುವ ʼಪುಷ್ಪ-2ʼ ಚಿತ್ರದ ದಾಖಲೆಯನ್ನು ʼಕಾಂತಾರ-1ʼ ಬ್ರೇಕ್ ಮಾಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
‘ಬಿಲ್ಲಾ ರಂಗ ಬಾಷಾʼ(Billa Ranga Baashaa):
ʼಮ್ಯಾಕ್ಸ್ʼ 2024ರ ಕೊನೆಯಲ್ಲಿ ಬಂದು ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಗಳಿಕೆಯನ್ನು ತಂದುಕೊಟ್ಟಿದೆ. ಮ್ಯಾಕ್ಸಿಮಮ್ ಆಗಿಯೇ ಮಾಸ್ ಪ್ರೇಕ್ಷಕರ ಮನಸ್ಸು ಗೆದ್ದು ಕಿಚ್ಚ ಸುದೀಪ್ (Kiccha Sudeep) ʼವಿಕ್ರಾಂತ್ ರೋಣʼ ದ ಬಳಿಕ ಮತ್ತೊಮ್ಮೆ ಸ್ಯಾಂಡಲ್ ವುಡ್‌ನಲ್ಲಿ ಗೆದ್ದು ಬೀಗಿದ್ದಾರೆ.
ಅನೂಪ್ ಭಂಡಾರಿ ಸುದೀಪ್ ಜತೆ ಮಾಡಲಿರುವ ʼಬಿಲ್ಲಾ ರಂಗ ಬಾಷಾʼ ಕಳೆದ ಕೆಲ ಸಮಯದಿಂದ ದೊಡ್ಡದಾಗಿಯೇ ಸೌಂಡ್ ಮಾಡುತ್ತಿದೆ. ಇವತ್ತಲ್ಲ ನಾಳೆ ಅಪ್ಡೇಟ್ ಸಿಗುತ್ತದೆ ಎನ್ನುವ ನಿರೀಕ್ಷೆ ಅಭಿಮಾನಿಗಳದ್ದು.
ʼಬಿಲ್ಲಾ ರಂಗ ಬಾಷಾʼ ಈ ವರ್ಷ ಶೂಟ್ ಆರಂಭವಾಗಿ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆದರೆ ಅಚ್ಚರಿಪಡಬೇಕಿಲ್ಲ.
ಇದಲ್ಲದೆ ಸುದೀಪ್ – ಕೆಆರ್‌ಜಿ ನಿರ್ಮಾಣದ ಸಿನಿಮಾ ಇದೇ ವರ್ಷ ಬರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
45: (45 Movie) :
ಕನ್ನಡದಲ್ಲಿ ಬರುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮಲ್ಟಿಸ್ಟಾರ್ಸ್ ಸಿನಿಮಾಗಳಲ್ಲಿ ʼ45ʼ ಕೂಡ ಒಂದಾಗಿದೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ (Arjun Janya) ಡೈರೆಕ್ಟರ್ ಕ್ಯಾಪ್ ತೊಟ್ಟು ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ (Raj B. Shetty) ಜತೆಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಈಗಾಗಲೇ ರಿಲೀಸ್‌ಗೂ ಮುನ್ನವೇ ಸಖತ್ ಸೌಂಡ್ ಮಾಡಿದೆ. ಇದೇ ವರ್ಷ ಚಿತ್ರ ತೆರೆ ಕಾಣಲಿದೆ. ಆ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಮೆಗಾಹಿಟ್ ನಿರೀಕ್ಷೆಯ ಸಾಲಿಗೆ ಈ ಚಿತ್ರವೂ ಸೇರಿದೆ.
ʼಕೆಡಿʼ (KD – The Devil):
ಧ್ರುವ ಸರ್ಜಾ (Dhruva Sarja) ಅವರ ʼಮಾರ್ಟಿನ್ʼ ದೊಡ್ಡ ನಿರೀಕ್ಷೆ ಹುಟ್ಟಿಸಿ ನಿರಾಸೆ ಹುಟ್ಟಿಸಿತ್ತು. ಜೋಗಿ ಪ್ರೇಮ್ (Prem) ಜತೆಗಿನ ʼಕೆಡಿʼ ಧ್ರುವ ಅವರಿಗೆ ಬಿಗ್ ಬ್ರೇಕ್ ತಂದುಕೊಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಬಹಳ ದಿನಗಳಿಂದ ಹರಿದಾಡುತ್ತಿದೆ.
ಬಾಲಿವುಡ್ ದಿಗ್ಗಜರಾದ ಸಂಜಯ್ ದತ್ (Sanjay Dutt), ಶಿಲ್ಪಾ ಶೆಟ್ಟಿ (Shilpa Shetty) ಸೇರಿದಂತೆ ಅನೇಕ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಸಿನಿಮಾದ ʼಶಿವʼ ಹಾಡು ಹಿಟ್ ಆಗಿ ಟ್ರೆಂಡ್ ಲಿಸ್ಟ್‌ಗೆ ಸೇರಿದೆ. ಇದೇ ವರ್ಷ ಚಿತ್ರ ತೆರೆ ಕಾಣಲಿದೆ.
‘ಯುವರ್ಸ್ ಸಿನ್ಸಿಯರ್ಲಿ ರಾಮ್’ (‘Yours Sincerely Ram’):
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಜತೆಯಾಗಿ ನಟಿಸುತ್ತಿರುವ ಈ ಚಿತ್ರದ ಪೋಸ್ಟರ್ ಗಳು ಈಗಾಗಲೇ ಕುತೂಹಲ ಹೆಚ್ಚಾಗಿಸಿದೆ. ವಿಭಿನ್ನ ಕಥಾಹಂದರದಲ್ಲಿ ಬರುತ್ತಿರುವ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾವನ್ನು ‘ಮಾನ್ಸೂನ್ ರಾಗ’, ‘ರಂಗನಾಯಕ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ವಿಖ್ಯಾತ್ ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರ ಇದೇ ವರ್ಷ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
‘ಸಿಟಿ ಲೈಟ್ಸ್’ (‘City Lights’):
ʼಭೀಮʼ ಚಿತ್ರದ ಬಳಿಕ ದುನಿಯಾ ವಿಜಯ್ (Duniya Vijay) ʼಸಿಟಿ ಲೈಟ್ಸ್ʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದ್ವಿತೀಯ ಪುತ್ರಿ ಮೊನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇವರ ಜತೆ ವಿನಯ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಪರಾಕ್ (Parak Movie):
ʼಬಘೀರʼ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಶ್ರೀಮರಳಿ (Srimurali) ʼಪರಾಕ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಹಾಲೇಶ್ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಸ್ಟೋರಿ ಲೈನ್ ಇರುವ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಮಾರ್ಚ್‌ನಲ್ಲಿ ಚಿತ್ರ ಸೆಟ್ಟೇರಲಿದೆ.
ಡೆವಿಲ್ (Devil):
ʼಕಾಟೇರʼ ಬಳಿಕ ದರ್ಶನ್ ಕಾಣಿಸಿಕೊಳ್ಳಬೇಕಿದ್ದ ʼಡೆವಿಲ್ʼ ವರ್ಷದ ಚಂದನವನದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಎಲ್ಲವೂ ಸರಿಯಾಗಿದ್ದರೆ ಈಗಾಗಲೇ ಚಿತ್ರ ರಿಲೀಸ್ ಆಗಿರಬೇಕಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ʼಡೆವಿಲ್ʼ ಡಬ್ಬಿಂಗ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇನ್ನೊಂದು ಕಡೆ ಫೆಬ್ರವರಿ 15ರ ಬಳಿಕ ʼಡೆವಿಲ್ʼ ಚಿತ್ರೀಕರಣ ಆರಂಭಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
‘ರಿಚರ್ಡ್ ಆಂಟೊನಿ’ (Richard Anthony):
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rishab Shetty) ನಿರ್ದೇಶನ ಮಾಡಿ, ನಟಿಸುತ್ತಿರುವ ‘ರಿಚರ್ಡ್ ಆಂಟೊನಿʼ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆಯನ್ನು ಹೆಚ್ಚಾಗಿಯೇ ಇಡಲಾಗಿದೆ. ಇದು ರಕ್ಷಿತ್ ಅವರ ಡ್ರೀಮ್ ಪ್ರಾಜೆಕ್ಟ್ ʼಉಳಿದವರು ಕಂಡಂತೆʼ ಸಿನಿಮಾವನ್ನು ಮೆಚ್ಚಿದ ಪ್ರೇಕ್ಷಕರಿಗೆ ಈ ಸಿನಿಮಾದ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇದೆ.
ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮವನ್ನು ರಕ್ಷಿತ್ ಶೆಟ್ಟಿ ಹಾಕುತ್ತಿದ್ದಾರೆ. ಚಿತ್ರೀಕರಣ ಇನ್ನು ಆರಂಭವಾಗಿಲ್ಲದಿದ್ರೂ ಈ ವರ್ಷ ರಿಲೀಸ್ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
‘ಉತ್ತರಕಾಂಡʼ (Uttarakaanda Movie):
ಡಾಲಿ ಧನಂಜಯ್ (Dhananjay), ಶಿವರಾಜ್ ಕುಮಾರ್ ಹಾಗೂ ಇತರೆ ಪ್ರಮುಖರು ನಟಿಸುತ್ತಿರುವ ʼಉತ್ತರಕಾಂಡʼ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗೆ ರಿಲೀಸ್ ಆಗಬೇಕಿತ್ತು.
ಆದರೆ ಒಂದಲ್ಲ ಒಂದು ಕಾರಣದಿಂದ ಚಿತ್ರಕ್ಕೆ ವಿಘ್ನವಾಗುತ್ತಿದೆ. ಶೂಟಿಂಗ್ ಹಂತದಲ್ಲಿರುವ ʼಉತ್ತರಕಾಂಡʼ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇತರೆ ಪ್ರಮುಖ ಚಿತ್ರಗಳು: ಇವಿಷ್ಟು ಮಾತ್ರವಲ್ಲದೆ ಚಂದನವನದಲ್ಲಿ ಈ ವರ್ಷ ಇತರೆ ಪ್ರಮುಖ ಸಿನಿಮಾಗಳು ರಿಲೀಸ್ ಆಗಲಿವೆ.
ಆರ್. ಚಂದ್ರು ಅವರ ‘ಕಬ್ಜ 2’, ಶಿವರಾಜ್ ಕುಮಾರ್ ನಟಿಸಿ ಹೇಮಂತ್ ರಾವ್ ನಿರ್ದೇಶಿಸುತ್ತಿರುವ ‘ಭೈರವನ ಕೊನೆ ಪಾಠ’, ‘777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್ ಹೊಸ ಸಿನಿಮಾ, ಡೇರ್ ಡೆವಿಲ್ ಮುಸ್ತಾಫʼ ನಿರ್ದೇಶಕ ಶಶಾಂಕ್ ಸೋಗಲ್ – ಡಾಲಿ ಧನಂಜಯ್ ಅವರ ʼಜಿಂಗೋʼ, ಶ್ರೀನಿ – ಶಿವರಾಜ್ ಅವರ – ʼಎ ಫಾರ್ ಆನಂದ್ʼ ಸೇರಿದಂತೆ ಇತರೆ ಚಿತ್ರಗಳು ರಿಲೀಸ್ ಆಗಲಿವೆ.