Advertisement

ಕೋವಿಡ್‌ ಕಾಲದಲ್ಲಿ ಒಂದು ಭಿನ್ನ ಗುಪ್ತ ಕಾರ್ಯಾಚರಣೆ

01:11 PM Apr 15, 2020 | sudhir |

ಟೆಲ್‌ ಅವೀವ್‌: ಗುಪ್ತಚರ ಪಡೆಗಳ ಕಾರ್ಯವೇನಿದ್ದರೂ ರಹಸ್ಯ ಕಾರ್ಯಾಚರಣೆ ನಡೆಸುವುದು, ಮಾಹಿತಿಗಳನ್ನು ಕಲೆ ಹಾಕುವುದು ಇತ್ಯಾದಿ. ವೈದ್ಯಕೀಯ ಲೋಕಕ್ಕೂ ಗುಪ್ತಚರ ಸಂಸ್ಥೆಗಳಿಗೂ ಅಂಥ ನಿಕಟ ಸಂಬಂಧವೇನೂ ಇರುವುದಿಲ್ಲ. ಆದರೆ ಇಸ್ರೇಲ್‌ನ ಜಗದ್ವಿಖ್ಯಾತ ಗುಪ್ತಚರ ಪಡೆ ಮೊಸಾದ್‌ ಮಾತ್ರ ಇದಕ್ಕೊಂದು ಅಪವಾದ.

Advertisement

ಇಸ್ರೇಲ್‌ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ಅದಕ್ಕೆ ಬೆಂಗಾವಲಾಗಿ ನಿಂತದ್ದು ಮೊಸಾದ್‌. ಇಸ್ರೇಲ್‌ನ ಆರೋಗ್ಯ ಸಚಿವ ಯಾಕೊವ್‌ ಲಿಟ್ಜ್ ಮ್ಯಾನ್‌ ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ಮೊಸಾದ್‌ ಮುಖ್ಯಸ್ಥ ಯೊಸ್ಸಿ ಕೊಹೆನ್‌ ಆಸ್ಪತ್ರೆಯಲ್ಲೇ ಇದ್ದರು. ಇದು ಮೊಸಾದ್‌ ಯಾವ ರೀತಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಇಲಾಖೆ ಕೈಜೋಡಿಸಿತ್ತು ಎನ್ನುವುದಕ್ಕೊಂದು ನಿದರ್ಶನ.

ಕೋವಿಡ್‌ ಶುಶ್ರೂಷೆಗೆ ಅಗತ್ಯವಿದ್ದ ವೈದ್ಯಕೀಯ ಪರಿಕರಗಳು ಮತ್ತು ಉಪಕರಣಗಳನ್ನು ತರಿಸಿಕೊಳ್ಳಲು ಮೊಸಾದ್‌ ಇಸ್ರೇಲ್‌ ಸರಕಾರಕ್ಕೆ ಸಹಾಯ ಮಾಡಿದೆ. ಈ ಕಾರ್ಯದಲ್ಲಿ ತನಗಿರುವ ಅಂತಾರಾಷ್ಟ್ರೀಯ ಪ್ರಭಾವಳಿಯನ್ನು ಪೂರ್ಣವಾಗಿ ಬಳಸಿಕೊಂಡಿದೆ. ಈ ಮೂಲಕ ಗುಪ್ತಚರ ಪಡೆಗಳು ಅಗತ್ಯ ಬಂದಾಗ ದೇಶಕ್ಕೆ ಈ ರೀತಿಯಲ್ಲೂ ಸೇವೆ ಸಲ್ಲಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.

ಆರಂಭದಲ್ಲಿ ಇಸ್ರೇಲ್‌ನಲ್ಲೂ ಕೋವಿಡ್‌ ಹಾವಳಿ ತುಸು ತೀವ್ರ ವಾಗಿಯೇ ಇತ್ತು. ಆದರೆ ಕ್ಷಿಪ್ರವಾಗಿ ಸರಕಾರ ಕೋವಿಡ್‌ ಹರಡುವುದನ್ನು ತಡೆಯುವಲ್ಲಿ ಸಫ‌ಲವಾಯಿತು. ಹೀಗಾಗಿ ಸುಮಾರು 11,000 ಸೋಂಕಿತರಷ್ಟೇ ಆ ದೇಶದಲ್ಲಿದ್ದಾರೆ. 103 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಇಸ್ರೇಲ್‌ನ ಅತಿ ದೊಡ್ಡ ಆಸ್ಪತ್ರೆಯಾಗಿರುವ ಶೆಬಾ ಮೆಡಿಕಲ್‌ ಸೆಂಟರ್‌ನ ಮಹಾ ನಿರ್ದೇಶಕ ಪ್ರೊ| ಯಿಟÏಕ್‌ ಕ್ರೈಸ್‌ಗೆ ಕಾರ್ಯಕ್ರಮವೊಂದರಲ್ಲಿ ಮೊಸಾದ್‌ ಮುಖ್ಯಸ್ಥ ಕೊಹೆನ್‌ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಮಾತುಕತೆಯ ಸಂದರ್ಭದಲ್ಲಿ ಕ್ರೈಸ್‌ ಇಸ್ರೇಲ್‌ನಲ್ಲಿ ಕೋವಿಡ್‌ ವಿರುದ್ಧ ಹೋರಾಡಲು ವೈದ್ಯಕೀಯ ಪರಿಕರಗಳ ಕೊರತೆಯಿರುವ ವಿಷಯವನ್ನು ಪ್ರಸ್ತಾವಿಸಿದರು. ಆಗಲೇ ಕೊಹೆನ್‌ ಮನಸಿನಲ್ಲಿ ಈ ಆಪತ್ತಿನ ಸಂದರ್ಭದಲ್ಲಿ ದೇಶಕ್ಕೆ ಹೇಗೆ ನೆರವಾಗಬಹುದು ಎಂಬ ಯೋಜನೆ ರೂಪುಗೊಳ್ಳಲಾರಂಭಿಸಿತು. ಅನಂತರದ ದಿನಗಳಲ್ಲಿ ಕೊಹೆನ್‌ ಶೆಬಾ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸತೊಡಗಿದರು.

Advertisement

ವೆಂಟಿಲೇಟರ್‌, ಟೆಸ್ಟಿಂಗ್‌ ಕಿಟ್‌, ರಕ್ಷಣಾ ಉಡುಗೆ ಇತ್ಯಾದಿಗಳನ್ನು ವಿದೇಶಗಳಿಂದ ತರಿಸಿಕೊಳ್ಳುವಲ್ಲಿ ಮೊಸಾದ್‌ ನಿಭಾಯಿಸಿದ ಪಾತ್ರ ಅಪಾರ. ಕೊಹೆನ್‌ ತನ್ನ ಖಾಸಗಿ ಸಂಪರ್ಕಗಳನ್ನೂ ಈ ಉದ್ದೇಶಕ್ಕಾಗಿ ಬಳಸಿಕೊಂಡರು. ಇಸ್ರೇಲ್‌ ಜತೆಗೆ ರಾಜತಾಂತ್ರಿಕ ಸಂಬಂಧ ಹೊಂದಿದ ಕೆಲವು ಅರಬ್‌ ದೇಶಗಳಿಂದಲೂ ವೈದ್ಯಕೀಯ ಉಪಕರಣಗಳನ್ನು ತರಿಸಿಕೊಳ್ಳಲಾಗಿತ್ತು. ಮೊಸಾದ್‌ನ ಸಹಾಯವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೊಸಾದ್‌ ವಿಶ್ವದ ಚಾಣಾಕ್ಷ ಗುಪ್ತಚರ ಪಡೆ
ಮೊಸಾದ್‌ ಎನ್ನುವುದು ವಿಶ್ವದಲ್ಲೇ ಅತ್ಯಂತ ಶಕ್ತಿಯುತ ಮತ್ತು ಚಾಣಾಕ್ಷ ಗುಪ್ತಚರ ಪಡೆ. ಅತ್ಯಂತ ಕಠಿನ ತರಬೇತಿ ಪಡೆದವರು ಇದರಲ್ಲಿರುತ್ತಾರೆ. ಶತ್ರು ನೆಲದೊಳಕ್ಕೆ ನುಗ್ಗಿ ದಾಳಿ ಮಾಡುವುದೇ ಮೊಸಾದ್‌ನ ವೈಶಿಷ್ಟé. 1949ರಲ್ಲಿ ಸ್ಥಾಪನೆಯಾದ ಈ ಗುಪ್ತಚರ ಪಡೆ ನಡೆಸಿದ ಕೆಲವು ಕಾರ್ಯಾಚರಣೆಗಳು ಜೇಮ್ಸ್‌ಬಾಂಡ್‌ ಸಿನೆಮಾಗಳಿಗಿಂತಲೂ ಹೆಚ್ಚು ರೋಚಕವಾಗಿವೆ. ಇಸ್ರೇಲ್‌ ಮೈಮುಟ್ಟಲು ಬಂದವರು ಯಾರೇ ಆಗಿದ್ದರು ಅವರನ್ನು ಅವರ ದೇಶಕ್ಕೆ ಹೋಗಿ ಕೊಂದು ಹಾಕುವ ಕೆಚ್ಚು ಇರುವ ಪಡೆ ಮೊಸಾದ್‌. ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ಗೂ ಮೊಸಾದ್‌ ನಡೆಸಿರುವ ಈ ಮಾದರಿಯ ಕೆಲವು ಕಾರ್ಯಾಚರಣೆಗಳೇ ಸ್ಫೂರ್ತಿ ಎನ್ನಲಾಗುತ್ತಿದೆ. ಮೊಸಾದ್‌ ನಡೆಸಿದ ಕಾರ್ಯಾಚರಣೆಯ ಮೇಲೆ ಹಲವು ಹಾಲಿವುಡ್‌ ಸಿನೇಮಾಗಳು ಬಂದಿವೆ. ಎಷ್ಟೇ ಬಲಿಷ್ಠ ದೇಶವಾಗಿದ್ದರೂ ಇಸ್ರೇಲ್‌ ತಂಟೆಗೆ ಹೋಗಲು ಹೆದರುವುದು ಮೊಸಾದ್‌ನಿಂದಾಗಿ.

Advertisement

Udayavani is now on Telegram. Click here to join our channel and stay updated with the latest news.

Next