Advertisement

ಚರಂಡಿಯಾಗದೇ ಸೊಳ್ಳೆಕಾಟ ತಪ್ಪದು

01:01 AM Feb 07, 2020 | Sriram |

ಕುಂದಾಪುರ: ಚಿಕನ್‌ಸಾಲ್‌ ರಸ್ತೆಯಲ್ಲಿ ಹೋದ ನಂತರ ಒಳರಸ್ತೆಯಲ್ಲಿ ಸಾಗಿದರೆ ಸಿದ್ದನಾಯಕನ ರಸ್ತೆ ದೊರೆಯತ್ತದೆ. ಸ್ವಲ್ಪ ದೂರ ಕಾಂಕ್ರೀಟ್‌ ರಸ್ತೆ ಇದೆ. ಅದಾದ ಬಳಿಕ ಕಾಂಕ್ರಿಟ್‌ ರಸ್ತೆ ಮುಕ್ತಾಯವಾಗುತ್ತದೆ. ಕಾಂಕ್ರಿಟ್‌ ರಸ್ತೆ ಮುಗಿದಲ್ಲಿಂದ ಚರಂಡಿ ವಾಸನೆ ಆರಂಭ. ಹಾರುತ್ತಿರುವ ಸೊಳ್ಳೆಗಳು, ಕೀಟಗಳು, ನೀರಿನಲ್ಲಿ ಜಿನುಗುತ್ತಿರುವ ಹುಳಕಡ್ಡಿಗಳು.

Advertisement

ಇದು ವಾರ್ಡ್‌ನಲ್ಲಿ ” ಸುದಿನ’ಕ್ಕಾಗಿ ಚಿಕನ್‌ಸಾಲ್‌ ವಾರ್ಡ್‌ನ ಸುತ್ತಾಟಕ್ಕೆ ಹೋದಾಗ ಕಂಡುಬಂದ ದೃಶ್ಯ. ಪುರಸಭೆಯೊಳಗಿನ ಒಂದೊಂದೇ ಪ್ರದೇಶದ ವಾಸ್ತವ ಚಿತ್ರಣವನ್ನು ಈ ಅಂಕಣ ಮೂಲಕ ಕಟ್ಟಿಕೊಡಲಾಗುತ್ತಿದೆ. ಜತೆಗೆ ಜನತೆಯ ಬೇಡಿಕೆಯನ್ನು ಮುಂದಿಡಲಾಗುತ್ತಿದೆ. ಅನುದಾನದ ಕೊರತೆಯಿದೆ, ಸದಸ್ಯರಿಗೆ ಇನ್ನೂ ಅಧಿಕಾರ ದೊರೆತಿಲ್ಲ ಈ ಎಲ್ಲ ಲುಪ್ತವನ್ನು ಇಟ್ಟುಕೊಂಡೇ ಜನರ ಬೇಡಿಕೆ ಏನೇನಿದೆ, ಎಷ್ಟು ಈಡೇರದೇ ಬಾಕಿಯಾಗಿದೆ ಎಂದು ಆಡಳಿತದ ಗಮನಕ್ಕೆ ತರುವ ಪ್ರಯತ್ನ ಇದು.

ಸ್ಲಾಬ್‌ ಬೇಕು
ಚರಂಡಿಗೆ ಸ್ಲಾಬ್‌ ಅಳವಡಿಸಿ ಮುಚ್ಚಿಗೆ ಮಾಡಿದರೆ ವಾಸನೆಯಾದರೂ ನಿಲ್ಲಬಹುದು. ಸೊಳ್ಳೆ ಉತ್ಪತ್ತಿ ಕಡಿಮೆಯಾಗಬಹುದು. ಮಕ್ಕಳು, ವೃದ್ಧರು ಓಡಾಡುವಾಗ ಭಯವಾಗುವುದು ತಪ್ಪಬಹುದು. ಈಗ ಸಂಜೆಯಾಗುತ್ತಿದ್ದಂತೆ ಅದೇ ಚಿಂತೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು. ಚರಂಡಿಗೆ ಸ್ಲಾಬ್‌ ಅಳವಡಿಸಿದರೆ ರಸ್ತೆಯಾಗಿಯೂ ಉಪಯೋಗವಾಗುತ್ತದೆ. ಈಗಾಗಲೇ ಇಲ್ಲಿ ಅಂತಹ ಪ್ರಯೋಗ ಮಾಡಲಾಗಿದೆ. ಸ್ವಲ್ಪ ಖಾಸಗಿ ಜಾಗದ ಅವಶ್ಯವಿದೆ. ಹಾಗೆ ಸಮಸ್ಯೆ ಇತ್ಯರ್ಥವಾಗಿ ಸ್ಲಾಬ್‌ ಹಾಕಿದರೆ ಈ ರಸ್ತೆ ಮೂಲಕ ರಾಮಮಂದಿರ ತಲುಪಬಹುದು.

ನೀರು ಹರಿಯದ ಚರಂಡಿ
ಚರಂಡಿ ಎಂದರೆ ಕೊಳಚೆ ನೀರು ಹರಿದು ಹೋಗಬೇಕು. ಆದರೆ ಇಲ್ಲೊಬ್ಬ ಬುದ್ಧಿವಂತ ಚರಂಡಿಯ ಮೇಲೆ ಸ್ಲಾಬ್‌ ಹಾಕುವ ಕಾಮಗಾರಿ ಮಾಡಿ ಉಳಿಕೆಯಾದ ಎಲ್ಲ ಸಿಮೆಂಟ್‌ ಮಿಕ್ಸಿಂಗನ್ನು ಚರಂಡಿಗೆ ಚೆಲ್ಲುವ ಮೂಲಕ ನೀರೇ ಹರಿಯದಂತೆ ಮಾಡಿದ್ದಾನೆ. ಇದರಿಂದಾಗಿ ಮಳೆಗಾಲ ಇರಲಿ, ಕಡು ಬೇಸಗೆಯೇ ಇರಲಿ, ಇಲ್ಲಿಯಂತೂ ಕೊಳಚೆ ನೀರು ನಿಂತಿರುತ್ತದೆ. ಹಾಸ್ಟೆಲ್‌ ನೀರು, ಫ್ಲಾಟ್‌ಗಳ ಕೊಳಚೆ ನೀರು, ಮನೆಮನೆಗಳ ತ್ಯಾಜ್ಯ ನೀರು ಸಿದ್ದಾನಯಕರ ರಸ್ತೆ ಬದಿಯ ಚರಂಡಿಯಲ್ಲಿ ಬಂದು ಸಂಗ್ರಹವಾಗುತ್ತದೆ. ಸೊಳ್ಳೆಗಳ ಉತ್ಪತ್ತಿಯಾಗಲು ಇಲ್ಲಿ ಸಂಜೆವರೆಗೆ ಕಾಯಬೇಕಿಲ್ಲ. ನಟ್ಟನಡು ಹಗಲಿನ ಬಿಸಿಲಲ್ಲೂ ಗುಜುಗುಜು ಎಂದು ನೀರು ತುಂಬಾ ಹುಳ, ಸೊಳ್ಳೆ. ಪುರಸಭೆಯಾದರೋ ಯಾಕೆ ಸುಮ್ಮನಿದೆಯೋ, ಆರೋಗ್ಯ ಇಲಾಖೆ ಗಮನಕ್ಕೆ ಇದು ಬಂದಿಲ್ಲವೇ, ಪುರಸಭೆಯಲ್ಲೂ ಆರೋಗ್ಯ ವಿಭಾಗ ಇದ್ದರೂ ಯಾಕೆ ಕೈ ಕಟ್ಟಿ ಕುಳಿತಿದೆಯೋ ಗೊತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಕಳೆದ ಮೂವತ್ತು ವರ್ಷಗಳಿಂದ ಇಲ್ಲಿದ್ದೇವೆ. ಆದರೆ 2018ರಲ್ಲಿ ಈ ಕಾಮಗಾರಿಯಾದ ಬಳಿಕದಿಂದ ಸಮಸ್ಯೆ ಆರಂಭವಾಗಿದೆ. ಇದರ ಪರಿಹಾರಕ್ಕೆ ಈವರೆಗೆ ಯಾರೂ ಬಂದಿಲ್ಲ ಎನ್ನುತ್ತಾರೆ ಇಲ್ಲಿನವರು.

ಆಗಬೇಕಾದ್ದೇನು?
ಪುರಸಭೆಗೆ ದೂರು ನೀಡಿದರೆ ಜೆಸಿಬಿ ತಂದು ನೀರು ಹರಿಯಲು ಅನುವು ಮಾಡಿಕೊಡುತ್ತಾರೆ. ಅದೂ ವರ್ಷಕ್ಕೆ ಕೆಲವು ಸಲ ಮಾತ್ರ. ಸಮಸ್ಯೆ ಮಾತ್ರ ನಿತ್ಯನೂತನ. ಸ್ಲಾಬ್‌ನ ಅಡಿಗೆ ಜೆಸಿಬಿ ಯಂತ್ರದ ಹಲ್ಲುಗಳು ಹೋಗದ ಕಾರಣ ಅಲ್ಲಿರುವ ಸಿಮೆಂಟ್‌ನ್ನು ತೆಗೆಯಲು ಸಾಧ್ಯವಾಗಿಲ್ಲ. ಇದನ್ನು ಪೂರ್ಣಪ್ರಮಾಣದಲ್ಲಿ ತೆಗೆಯದ ಹೊರತು ಸಮಸ್ಯೆಗೆ ಇತಿಶ್ರೀ ಹಾಡಲು ಕಷ್ಟವಿದೆ.

Advertisement

ಎಲ್ಲೆಲ್ಲಿ
ಮೈಲಾರೇಶ್ವರ ದೇವಸ್ಥಾನದ ಎದುರು, ಸಂಗಮ್‌ನಿಂದ ರಿಂಗ್‌ರೋಡ್‌ವರೆಗೆ, ರಾಯಲ್‌ ಸಭಾಭವನ ಬಳಿ ಚರಂಡಿ ವ್ಯವಸ್ಥೆಯಾಗಬೇಕಿದೆ. ಮೈಲಾರೇಶ್ವರ ದೇವಸ್ಥಾನ ಬಳಿ, ಬೀರಿಕೇರಿ ಬಳಿ, ರಾಯಲ್‌ ಸಭಾಭವನ ರಸ್ತೆ, ಜೈಹಿಂದ ಹೋಟೆಲ್‌ನಿಂದ ಬಹದ್ದುರ್‌ಶಾ ಕೂಡುರಸ್ತೆ, ರಿಂಗ್‌ರೋಡ್‌, ಕ್ರಾಸ್ಟೋ ಗ್ಯಾರೇಜ್‌ ಹಿಂದಿನ ರತಸ್ತೆ, ಸಿದ್ದನಾಯಕನ ರಸ್ತೆ, ಸಂಗಂ ಬಳಿ ರಸ್ತೆ ಅಭಿವೃದ್ಧಿಯಾಗಬೇಕಿದೆ.

ಇಂಟರ್‌ಲಾಕ್‌ ಹಾಕಲಿ
ರಸ್ತೆ ಬದಿ ಎತ್ತರವಾಗಿದೆ. ಇಂಟರ್‌ಲಾಕ್‌ ಹಾಕಿ ಧೂಳು ತಪ್ಪಿಸಬೇಕಿದೆ. ನಳ್ಳಿ ನೀರು ಅನೇಕ ಬಾರಿ ಸಮಸ್ಯೆಯಾಗುತ್ತಿದೆ. ನಿಧಾನಕ್ಕೆ ಬರುತ್ತಿದೆ.
-ಕೆ.ಜಿ.ಭಾಸ್ಕರ್‌, ಚಿಕ್ಕನ್‌ಸಾಲ್‌ ರಸ್ತೆ

ಚರಂಡಿ ಕಾಮಗಾರಿ ಆಗಬೇಕು
ಮೂಲಸೌಕರ್ಯ ಪರವಾಗಿಲ್ಲ. ಸದಸ್ಯರ ಸ್ಪಂದನೆಯೂ ಚೆನ್ನಾಗಿದೆ. ಕಾಂಕ್ರೀಟ್‌ ರಸ್ತೆ ಎತ್ತರವಾಗಿರುವ ಕಾರಣ ಇಂಟರ್‌ಲಾಕ್‌ ಹಾಕಿದರೆ ಸಮಸ್ಯೆ ನಿವಾರಣೆಯಾದೀತು. ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟವಾಗುತ್ತಿದೆ. ರಸ್ತೆ ಕಾಮಗಾರಿಗಳು ಆಗಬೇಕಿದೆ. ಚರಂಡಿ ಕಾಮಗಾರಿ ನಡೆಯಬೇಕು.
-ಅರುಣ್‌ ಕುಮಾರ್‌ ಬಾಣ, ಅಧ್ಯಕ್ಷರು, ಮೈಲಾರೇಶ್ವರ ಯುವಕ ಮಂಡಲ

ಅನುದಾನ ಇಲ್ಲ
ಅನುದಾನ ಬಂದರೆ ಸಾಕಷ್ಟು ಅಭಿವೃದ್ಧಿ ಮಾಡಬೇಕಿರುವ ಕಾಮಗಾರಿಗಳ ಪಟ್ಟಿ ಮಾಡಲಾಗಿದೆ. ಅನುದಾನ ಲಭ್ಯತೆ ಮೇರೆಗೆ ಕಾಮಗಾರಿ ಮಾಡಲಾಗುತ್ತಿದೆ. ತುರ್ತು ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ. ಚರಂಡಿ ಹಾಗೂ ರಸ್ತೆಗೆ ಕೆಲವು ಕೋ.ರೂ. ಅಗತ್ಯವಿದೆ.
-ಸಂತೋಷ್‌ ಶೆಟ್ಟಿ,
ಸದಸ್ಯರು, ಪುರಸಭೆ

ಆಗಬೇಕಾದ್ದೇನು?
-ಸೊಳ್ಳೆಹಬ್ಬುತ್ತಿರುವ ಚರಂಡಿಗೆ ಸ್ಲಾಬ್‌
-ರಸ್ತೆಗಳ ನಿರ್ಮಾಣ
-ರಸ್ತೆಬದಿ ಇಂಟರ್‌ಲಾಕ್‌ ಅಳವಡಿಕೆ

Advertisement

Udayavani is now on Telegram. Click here to join our channel and stay updated with the latest news.

Next