ಲಾಲ್‌ಬಾಗ್: ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಂತೆ ಎಚ್ಚೆತ್ತುಕೊಂಡಿರುವ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
“ನಗರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಅಬ್ಬರ- ಕಾರ್ಯಾಚರಣೆಗೆ ಇಳಿಯದ ಪಾಲಿಕೆ ಆರೋಗ್ಯ ಇಲಾಖೆ’ ಎಂಬ ಶೀರ್ಷಿಕೆಯಲ್ಲಿ ಉದಯವಾಣಿ “ಸುದಿನ’ ಡಿ. 8ರಂದು ವರದಿ ಪ್ರಕಟಿಸಿತ್ತು.
ಇದರಂತೆ ನಗರದ ವಿವಿಧ ಕಡೆಗಳಲ್ಲಿ ಫಾಗಿಂಗ್ ನಡೆಸಲು ಸಿಬಂದಿ ನೇಮಕ ಮಾಡಲಾಗಿದೆ. ಸೊಳ್ಳೆ ಉತ್ಪಾದನ ಸ್ಥಳಗಳ ಪರಿಶೀಲಿಸಿ ಅಲ್ಲಿ ಫಾಗಿಂಗ್/ ಕೀಟನಾಶಕ ಸಿಂಪಡಿಸಿ ಸೊಳ್ಳೆ ನಿರ್ಮೂಲನೆಗೆ ಬೇಕಾಗುವ ಅಗತ್ಯ ಕಾರ್ಯ ಅನುಷ್ಠಾನಕ್ಕೆ ಪಾಲಿಕೆ ಆರೋಗ್ಯ ಇಲಾಖೆ ಮುಂದಾಗಿದೆ. ಅಕ್ಟೋಬರ್‌ನಲ್ಲಿ ನಗರದಲ್ಲಿ 16 ಡೆಂಗ್ಯೂ ಪ್ರಕರಣಗಳಿದ್ದರೆ, ನವೆಂಬರ್‌ನಲ್ಲಿ ಈ ಸಂಖ್ಯೆ ಏರಿಕೆಯಾಗಿದ್ದು, 23 ಪ್ರಕರಣಗಳು ವರದಿಯಾಗಿದೆ.
ಹೀಗಾಗಿ ಡೆಂಗ್ಯೂ ಅಬ್ಬರ ಹತೋಟಿಗೆ ಸಂಬಂಧಿಸಿ ಮೇಯರ್ ಜಯಾನಂದ ಅಂಚನ್ ಅವರ ಸೂಚನೆಯ ಮೇರೆಗೆ ಪಾಲಿಕೆ ಆರೋಗ್ಯ ಅಧಿಕಾರಿ ಡಾ| ಮಂಜಯ್ಯ ಶೆಟ್ಟಿ ನೇತೃತ್ವದಲ್ಲಿ ಇಲಾಖೆಯ ತಂಡ ಕಾರ್ಯಾಚರಣೆ ಆರಂಭಿಸಿದೆ. ಉದಯವಾಣಿ “ಸುದಿನ’ ಜತೆಗೆ ಮಾತ ನಾಡಿದ ಡಾ| ಮಂಜಯ್ಯ ಶೆಟ್ಟಿ ಅವರು, “ಡೆಂಗ್ಯೂ ಹತೋಟಿಯ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಬೆಳಗ್ಗೆ ಸ್ಪ್ರೆ, ಸಂಜೆ ವೇಳೆಗೆ ಫಾಗಿಂಗ್ ಮಾಡಲಾಗುತ್ತಿದೆ. ನಗರದ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. 10 ಮಂದಿ ಎಂಪಿಎಬ್ಲ್ಯು ಸೂಪರ್ ವೈಸರ್‌ಗಳನ್ನು, 60 ಹೆಲ್ತ್ ವರ್ಕರ್ಸ್‌ಗಳು, 21 ಸಿಬಂದಿ ಇದೇ ಕಾರ್ಯಗಳಿಗೆ ನೇಮಕ ಮಾಡಲಾಗಿದೆ. ಸೊಳ್ಳೆ ಉತ್ಪಾದನ ತಾಣಗಳ ನಿರ್ಮೂಲನೆಗೆ ಅವರಿಗೆ ಸೂಚನೆ ನೀಡಲಾಗಿದೆ’ ಎಂದರು.