Advertisement

ನಗರದ ಹಲವೆಡೆ ಸೊಳ್ಳೆ ಉತ್ಪತ್ತಿ ತಾಣಗಳು: ಆತಂಕದಲ್ಲಿ ಜನತೆ

10:48 PM Aug 06, 2019 | mahesh |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಕದ್ರಿ ಕೈಬಟ್ಟಲು ರಸ್ತೆ ಸರಿ ಮಾಡಿ
ಕರಾವಳಿ ಲೇನ್‌ನಿಂದ ಕದ್ರಿ ಕೈಬಟ್ಟಲು ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯನ್ನು ಇತ್ತೀಚೆಗೆ ಮಾಡಲಾಗಿದೆ. ಕಾಮಗಾರಿ ಮಾಡುವ ಸಂದರ್ಭ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಕಾಮಗಾರಿ ಮುಗಿದ ಬಳಿಕ ಆ ರಸ್ತೆಯನ್ನು ಹಾಗೆಯೇ ಬಿಡಲಾಗಿದ್ದು, ಬಳಿಕ ರಸ್ತೆಯಲ್ಲಿ ಉಂಟಾದ ಹೊಂಡ ಗುಂಡಿಗೆ ಮಣ್ಣುಹಾಕಿ ತಾತ್ಕಾಲಿಕ ತೇಪೆ ಹಾಕಲಾಗಿದೆ. ಬಳಿಕ ವಾಹನಗಳು ಹೋಗುತ್ತಿದ್ದ ಕಾರಣ ಹಾಗೂ ಮಳೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಈ ರಸ್ತೆಯಲ್ಲಿ ಮತ್ತೆ ಹೊಂಡ ಗುಂಡಿ ಉಂಟಾಗಿದೆ. ವಾಹನ ಸವಾರರು ಇಲ್ಲಿಂದ ಸಂಚರಿಸಲು ಪರದಾಡುವಂತಾಗಿದೆ. ಕಾಮಗಾರಿ ಮಾಡಿದ ಅನಂತರ ಆ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡದೆ ಇರುವ ಕಾರಣದಿಂದ ಇಂತಹ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟವರು ಶೀಘ್ರ ಸ್ಪಂದಿಸಬೇಕಾಗಿದೆ.
-ಡೆನಿಸ್‌ ಲೋಬೋ, ಕದ್ರಿ ಕೈಬಟ್ಟಲು

ವಿ.ಟಿ. ರಸ್ತೆ-ಖಾಲಿ ಸೈಟ್‌ಗಳು ಸೊಳ್ಳೆ ಆಶ್ರಯತಾಣ
ನಗರದಲ್ಲಿ ಡೆಂಗ್ಯೂ-ಮಲೇರಿಯಾ ಪ್ರಕರಣಗಳು ಹತೋಟಿಗೆ ಬರುತ್ತಿದ್ದರೂ, ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಇನ್ನೂ ಕೂಡ ನಗರದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಬಾರದು. ಇನ್ನೂ ಕೂಡ ನಗರದ ಬಹುತೇಕ ಅರ್ಧಕ್ಕೆ ಕಾಮಗಾರಿ ನಿಂತ ಸೈಟ್‌ಗಳಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಲಕ್ಷಣಗಳಿವೆ. ನಗರದ ವಿ.ಟಿ.ರಸ್ತೆಯ ನಲಂದ ವಿದ್ಯಾಸಂಸ್ಥೆಯ ಹೊರಭಾಗದಲ್ಲಿ ಇಂತಹ ಖಾಲಿ ಸೈಟ್‌ ಇದ್ದು, ಅಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಲಕ್ಷಣಗಳಿವೆ. ಶಾಲಾ ವಿದ್ಯಾರ್ಥಿಗಳು ಇಲ್ಲಿ ಅಧಿಕವಿರುವ ಕಾರಣದಿಂದ ಡೆಂಗ್ಯೂ-ಮಲೇರಿಯಾ ಅಪಾಯ ಇಲ್ಲಿ ಬಹುತೇಕವಿದೆ.
-ಸ್ಥಳೀಯರು, ವಿ.ಟಿ.ರಸ್ತೆ

ಕುಳಾಯಿಯಲ್ಲಿ ತೋಡು ಕ್ಲೀನ್‌ ಆಗಲಿ’
ರಾ.ಹೆ. 66ರ ಕುಳಾಯಿಯ ವಿದ್ಯಾನಗರದಲ್ಲಿ ತೋಡಿನ ಹೂಳು ತೆಗೆಯದೆ ಮಳೆ ನೀರು ಇಲ್ಲಿ ಸರಾಗ ವಾಗಿ ಹರಿಯದೆ ಸಮಸ್ಯೆ ಸೃಷ್ಟಿಯಾಗಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿ ಆಗುವ ತಾಣವಾಗಿದೆ. ಇಲ್ಲಿ ಕೆಲವು ಮನೆಗಳು ಇರುವ ಕಾರಣದಿಂದ ಇನ್ನಾದರೂ ಆಡಳಿತ ವ್ಯವಸ್ಥೆಯವರು ಈ ತೋಡು ಸ್ವತ್ಛ ಮಾಡಲು ಮನಸ್ಸು ಮಾಡಬೇಕು. ಮಳೆ ನೀರು ಇಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾದರೆ ಸಮಸ್ಯೆ ಪರಿಹಾರವಾಗುತ್ತದೆ.
– ರಮೇಶ್‌ ಅಳಪೆ, ಕುಳಾಯಿ

ಉರ್ವ ಮಾರ್ಕೆಟ್‌; ತ್ಯಾಜ್ಯ ನೀರು ತೋಡಿಗೆ
ಉರ್ವದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಯಿಂದ ಅಕ್ಕಪಕ್ಕದ ಮನೆಯವರಿಗೆ ಈಗ ಸಮಸ್ಯೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ-ಗಲೀಜು ನೀರು ಪಕ್ಕದ ತೋಡಿನಲ್ಲಿ ಹರಿಯುವ ಪರಿಣಾಮ ಈ ಭಾಗ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಕೆಲವು ವರ್ಷದಿಂದ ಇಲ್ಲಿ ತ್ಯಾಜ್ಯಗಳ ರಾಶಿಯಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಅಕ್ಕಪಕ್ಕದ ಹಲವು ಮನೆಗಳ ನಿವಾಸಿಗಳಿಗೆ ಡೆಂಗ್ಯೂ-ಮಲೇರಿಯಾ ಬಂದು ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿಯೂ ವಿಶೇಷವೆಂದರೆ ಒಂದೇ ಮನೆಯ ಒಬ್ಬ ವ್ಯಕ್ತಿಗೆ ಎರಡು-ಮೂರು ಸಲ ಇದೇ ವರ್ಷ ಮಲೇರಿಯಾ ಬಂದಿದೆ. ಉರ್ವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತ್ಯಾಜ್ಯ-ಕಸದ ನಿರ್ವಹಣೆ ಸರಿಯಾಗಿ ನಡೆಯದ ಕಾರಣದಿಂದ ಅಕ್ಕಪಕ್ಕದ ಮನೆಯವರಿಗೆ ಈ ಸಮಸ್ಯೆ ಬಂದಿದೆ. ಈ ಬಗ್ಗೆ ಶಾಸಕ-ಕಾರ್ಪೊರೇಟರ್‌ ಸೇರಿದಂತೆ ಆಡಳಿತ ನಡೆಸುವವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ.
ರೂಪಾಲಿ, ಉರ್ವ ಮಾರ್ಕೆಟ್‌

Advertisement

ಪಂಪ್‌ವೆಲ್‌ ಪರಿಸರದಲ್ಲಿ ತ್ಯಾಜ್ಯ ರಾಶಿ
ಮಂಗಳೂರಿನ ಹೆಬ್ಟಾಗಿಲು ಎಂದು ಕರೆಯಲ್ಪಡುವ ಪಂಪ್‌ವೆಲ್‌ನಲ್ಲಿ ಸ್ವತ್ಛತೆ ಎಂಬುದು ಮರೀಚಿಕೆಯಾಗಿದೆ. ದಿನೇ ದಿನೇ ಇಲ್ಲಿ ಜನರ ಸಂಖ್ಯೆ ಅಧಿಕವಾಗಿ, ಮಾಲಿನ್ಯವೂ ಹೆಚ್ಚಾಗುತ್ತಿದೆ. ಒಂದು ಬದಿಯಲ್ಲಿ ಕಸ ವಿಲೇವಾರಿ ಮಾಡುವ ವಾಹನ ದಿಂದ ಇನ್ನೊಂದು ವಾಹನಕ್ಕೆ ತುಂಬಿಸುವ ವೇಳೆಯಲ್ಲಿ ಹೊರಬರುವ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದು ಈ ವ್ಯಾಪ್ತಿಯಲ್ಲಿ ವಾಸನೆಯೇ ತುಂಬಿಕೊಂಡಿದೆ. ಜತೆಗೆ ಕಸದ ಹಾಗೂ ಪೈಪ್‌ಗ್ಳ ರಾಶಿ ಪಕ್ಕದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವ ಪರಿಸ್ಥಿತಿ ಇದೆ.
-ಮುಹಮ್ಮದ್‌ ನೌಶಾದ್‌ ಯು.ಎಂ., ಮಂಗಳೂರು

ಆರ್ಯಸಮಾಜ ರಸ್ತೆ ದುರವಸ್ಥೆ
ಬಲ್ಮಠದ ಆರ್ಯ ಸಮಾಜ ರಸ್ತೆ ಸದ್ಯ ವಾಹನ ಸಂಚಾರಕ್ಕೆ ಬಹು ತ್ರಾಸದ ರಸ್ತೆಯಾಗಿ ಪರಿಣಮಿಸಿದೆ. ಡ್ರೈನೇಜ್‌ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಆ ಬಳಿಕ ಈ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ರಸ್ತೆಯನ್ನು ಅಗೆದ ಬಳಿಕ ಎರ್ರಾಬಿರ್ರಿ ಹೊಂಡಗಳು ತುಂಬಿ ಇಲ್ಲಿ ವಾಹನಗಳು ಸಂಚಾರ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ, ಈ ಭಾಗದಲ್ಲಿ ಹಲವು ವಸತಿ ಸಮುಚ್ಚಯಗಳು ಇರುವ ಕಾರಣದಿಂದ ಹೆಚ್ಚಿನ ಜನರು ಈ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಆದರೆ, ಕಳೆದ ಹಲವು ದಿನಗಳಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಮಳೆ ನೀರು ನಿಂತು ರಸ್ತೆಯ ಗುಂಡಿಗಳು ಕಾಣುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಈ ರಸ್ತೆ ದುರಸ್ತಿಗೆ ಕ್ರಮ ವಹಿಸಲಿ.
-ಸ್ಥಳೀಯ ನಾಗರಿಕರು, ಆರ್ಯಸಮಾಜ ರಸ್ತೆ

ಮೈದಾನ ಎರಡನೇ ಕ್ರಾಸ್‌ನಲ್ಲಿ ಕಸದ ರಾಶಿ
ಸ್ಟೇಟ್‌ಬ್ಯಾಂಕ್‌ ಪರಿಸರದ ಮೈದಾನ ಎರಡನೇ ಕ್ರಾಸ್‌ನ ರಸ್ತೆಯ ಬದಿಯಲ್ಲಿ ಕಸದ ರಾಶಿ ತುಂಬಿದ್ದು, ವಿಲೇವಾರಿ ಇಲ್ಲಿ ಅಪರೂಪವಾಗಿದೆ. ಅದರಲ್ಲಿಯೂ ಮಳೆಗಾಲದ ಸಂದರ್ಭದಲ್ಲಿ ಕಸದ ರಾಶಿ ತುಂಬಿರುವಾಗ ಮಳೆ ನೀರು ಹರಿದು ಗಲೀಜು ವಾತಾವರಣ ಉಂಟಾಗುತ್ತಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಮುಂಭಾಗದಲ್ಲಿ ಇಂತಹ ಕಸ ಬೀಳುವ ಜಾಗವೊಂದಿದ್ದು, ಪಾಲಿಕೆ-ಆ್ಯಂಟನಿ ಸಂಸ್ಥೆಯವರು ಇದನ್ನು ಕ್ಲೀನ್‌ ಮಾಡುವ ನೆಲೆಯಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು.
-ಸ್ಥಳೀಯರು, ಮೈದಾನ ಕ್ರಾಸ್‌ ರಸ್ತೆ

ಇಲ್ಲಿಗೆ ಕಳುಹಿಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com

Advertisement

Udayavani is now on Telegram. Click here to join our channel and stay updated with the latest news.

Next