ಬೆಂಗಳೂರು: ದೇಶ ಕಟ್ಟಿದ ಮಹಾರತ್ನಗಳಂಥ ಕಂಪನಿಗಳನ್ನೇ ಕೇಂದ್ರ ಸರ್ಕಾರ ಬಿಕರಿಗಿಟ್ಟಿದೆ ಎಂದು ಸಾಹಿತಿ ದೇವನೂರು ಮಹಾದೇವ ಆತಂಕ ವ್ಯಕ್ತಪಡಿಸಿದರು. ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 5ನೇ ಅಖೀಲ ಭಾರತ ಸಮಾವೇಶದಲ್ಲಿ ಮಾತನಾಡಿದರು.
ಎಲ್‌ಐಸಿ, ಬಿಎಸ್‌ಎನ್‌ಎಲ್, ಭಾರತ್ ಪೆಟ್ರೋಲಿಯಂ ಸಂಸ್ಥೆ (ಬಿಪಿಸಿಎಲ್) ಸೇರಿದಂತೆ ಹಲವು ಲಾಭದಾಯಕ ಸರ್ಕಾರಿ ಕಂಪನಿಗಳನ್ನು ಬಿಕರಿ ಮಾಡಲು ಹೊರಟಿದೆ. ಅದು ಇಂಡಿಯಾ ಸೇಲ್ ಎಂಬಲ್ಲಿಗೆ ಬಂದು ನಿಂತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ತಾನು ಉಳಿದುಕೊಳ್ಳಲು ಸಲುವಾಗಿಯೇ ಸಾರ್ವಜನಿಕ ಕ್ಷೇತ್ರದ ಲಾಭದ ಕಂಪನಿಗಳನ್ನು ಹಾಗೂ ನೈಸರ್ಗಿಕ ಸಂಪತ್ತನ್ನು ಬಿಕರಿಗಿಟ್ಟಿರುವುದು ದುರದೃಷ್ಟಕರ ಎಂದರು.
5000 ಕೋಟಿ ರೂ.ಲಾಭದ ಸಂಸ್ಥೆ: ಭಾರತ್ ಪೆಟ್ರೋಲಿಯಂ ಸಂಸ್ಥೆ (ಬಿಪಿಸಿಎಲ್) ಕಳೆದ ಐದು ವರ್ಷಗಳಿಂದ ಸುಮಾರು 5000 ಕೋಟಿ ರೂ.ಹೆಚ್ಚು ಲಾಭಗಳಿಸುತ್ತಾ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಡಿವಿಡೆಂಟ್, ಜಿಎಸ್ಟಿ, ಕಾರ್ಪೊರೇಟ್ ತೆರಿಗೆ ಇತ್ಯಾದಿ ರೂಪದಲ್ಲಿ 30,000 ಕೋಟಿ ರೂ.ಗಳಷ್ಟು ಹಣವನ್ನು ಸಂದಾಯ ಮಾಡಿದೆ. ಇಂತಹ ಲಾಭದಾಯಕ ಕಂಪನಿಯನ್ನು ಕೇವಲ 60,000 ಕೋಟಿ ರೂ.ಗಳಿಗೆ ಬಿಕರಿ ಮಾಡಲು ಹೊರಟಿದೆ. ಸರ್ಕಾರದ ಒಳ ವ್ಯವಹಾರ ಏನೆಂಬುವುದು ತಿಳಿಯುತ್ತಿಲ್ಲ ಎಂದು ದೂರಿದರು.
ಯಾರ ವಿಕಾಸವಾಗುತ್ತಿದೆ?: ಸಾಮಾಜಿಕ ಹೋರಾಟಗಾರ್ತಿ ಮೇದಾ ಪಾಟ್ಕರ್ ಮಾತನಾಡಿ, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಎಲ್‌ಐಸಿ ಮತ್ತು ಬಿಎಸ್‌ಎನ್‌ಎಲ್ ಸೇರಿದಂತೆ ಹಲವು ಸಂಸ್ಥೆಯ ಕಾರ್ಮಿಕರಿಗೆ ಬಲವಂತ ವಾಗಿ ವಿಆರ್‌ಎಸ್ ನೀಡಲು ಹೊರಟಿದೆ. ಆ ಮೂಲಕ ಕಾರ್ಮಿಕರನ್ನು ಹೊರದಬ್ಬುವ ಕೆಲಸ ಮಾಡುತ್ತಿದೆ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದರೆ ಇದೇನಾ ಎಂದು ಪ್ರಶ್ನಿಸಿದರು.
ಲಲಿತ್ ಮೋದಿ, ವಿಜಯ್‌ಮಲ್ಯ ಅಂತಹವರು ಬ್ಯಾಂಕ್‌ಗಳಿಗೆ ವಂಚನೆ ಮಾಡಿ ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಮತ್ತೂಂದು ಕಡೆ ಅನ್ನದಾತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ದೇಶದ ಸಂಪತ್ತು ಲೂಟಿಕೋರರ ಪಾಲಾಗುತ್ತಿದ್ದು, ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಮತ್ತಷ್ಟು ಬಲಿಷ್ಠಗೊಳ್ಳಬೇಕಾಗಿದೆ ಎಂದರು. ಸಂಸದ ಭಗವಂತ ಮಾನ್, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್, ಕಾಮ್ರೇಡ್ ಜೆ.ಎಸ್.ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಲೀನ ಎಂಬ ಚರಮಗೀತೆ: 2019ರಲ್ಲಿ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ 10 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗಳಿಸಿ ನಾಲ್ಕು ದೊಡ್ಡ ಬ್ಯಾಂಕ್‌ಗಳನ್ನು ಮಾಡುವುದಾಗಿ ಘೋಷಿಸಿತು. ಇದರಲ್ಲಿ ಕರ್ನಾಟಕ ಮೂಲದ ಕಾರ್ಪೊರೇಷನ್ ಬ್ಯಾಂಕ್‌ನ್ನು ಯೂನಿಯನ್ ಬ್ಯಾಂಕ್‌ನೊಂದಿಗೂ, ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೂ ವಿಲೀನ ಮಾಡಿತು.
ಮಂಗಳೂರು ಮೂಲದ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಮಾಡಿ ಮುಗಿಸಿತು. ಆ ಹಿನ್ನೆಲೆಯಲ್ಲಿ 27 ರಿಂದ 12ಕ್ಕೆ ಇಳಿಯಿತು. ಬ್ಯಾಂಕ್‌ಗಳ ಎಸ್‌ಬಿಐನೊಂದಿಗೆ ಸುಮಾರು 6,950 ಶಾಖೆಗಳು ಮುಚ್ಚಲಾಯಿತು. ಉದ್ಯೋಗಗಳಿಗೆ ಚಮರಗೀತೆ ಹಾಡುವುದಕ್ಕೆ ಸರ್ಕಾರ ಗೌರವಯುತವಾದ “ವಿಲೀನ ‘ಎಂಬ ಚೆಂದದ ಹೆಸರಿಟ್ಟಿದೆ ಎಂದು ಸಾಹಿತಿ ದೇವನೂರು ಮಹಾದೇವ ಟೀಕಿಸಿದರು.