ಹೊಸದಿಲ್ಲಿ: ಸಿಖ್ ಸಮುದಾಯದ ವಿರುದ್ಧ ಕ್ಯಾಬಿನೆಟ್ ಸಮಿತಿಯ ಸಭೆ ವಿಡಿಯೋ ಎಂದು ಬಿಂಬಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಮರುದಿನವೇ, ಈ ದೃಶ್ಯಾವಳಿಗಳು ಪಾಕಿಸ್ಥಾನದಿಂದ ಬಂದಿರುವುದು ಎಂದು ದೆಹಲಿ ಪೊಲೀಸರು ಶನಿವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮಾನಿಟರ್ ಮಾಡಿದ ಸಮಯದಲ್ಲಿ, ನಕಲಿ ಮಾರ್ಫ್ ಮಾಡಿದ ವೀಡಿಯೊವನ್ನು ಕೆಲವು ಟ್ವಿಟರ್ ಖಾತೆಗಳು ಹಂಚಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಸ್ತವವಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರ ಡಿಸೆಂಬರ್ 9, 2021 ರಂದು ನಡೆದ ಕ್ಯಾಬಿನೆಟ್ ಸಮಿತಿಯ ಸಭೆಯ ವೀಡಿಯೊ ಇದಾಗಿದ್ದು, ವಿವಿಧ ಸುದ್ದಿ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸುಲಭವಾಗಿ ಲಭ್ಯವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ್ವೇಷವನ್ನು ಉತ್ತೇಜಿಸಿ, ಕೋಮು ಸೌಹಾರ್ದತೆ ಹಾಲು ಮಾಡುವ ದುರುದ್ದೇಶದಿಂದ, ವಿಡಿಯೋವನ್ನು ಮಾರ್ಫ್ ಮಾಡಲಾಗಿದೆ. ಹೊಸ ವಾಯ್ಸ್‌ಓವರ್ ನೀಡಿ ಸಭೆಯು ಸಿಖ್ ಸಮುದಾಯದ ವಿರುದ್ಧವಾಗಿದೆ ಎಂದು ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೆಹಲಿ ಪೊಲೀಸರು ಟ್ವಿಟರ್ ನಲ್ಲಿ ವದಂತಿಗಳನ್ನು ಹರಡಬೇಡಿ ಮತ್ತು ಇಂತಹ ಫೇಕ್ ವೀಡಿಯೊಗಳನ್ನು ಫಾರ್ವರ್ಡ್ ಮಾಡಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ. ಅಧಿಕೃತವಲ್ಲದ ವದಂತಿಗಳನ್ನು ಮತ್ತು ಫಾರ್ವರ್ಡ್ ವೀಡಿಯೊಗಳನ್ನು ಹರಡದಂತೆ ದೆಹಲಿ ಪೋಲೀಸ್ ಇಲಾಖೆ ನಿಮ್ಮನ್ನು ಒತ್ತಾಯಿಸುತ್ತದೆ. ಸುಳ್ಳನ್ನು ಸೃಷ್ಟಿಸುವ ಯಾವುದೇ ಪ್ರಯತ್ನವು ಕಾನೂನಿನ ಪ್ರಕಾರ ಕ್ರಮವನ್ನು ಎದುರಿಸಬೇಕಾಗುತ್ತದೆ, ”ಎಂದು ಟ್ವೀಟ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.