ಇರುವೆಗಳ ಸಭೆ ನಡೆಯುತ್ತಿತ್ತು. ಕಪ್ಪಿರುವೆ, ಕಟ್ಟಿರುವೆ, ದೇವರ ಇರುವೆ, ಕೆಂಪಿರುವೆ ಎಲ್ಲವೂ ಸೇರಿದ್ದವು. ಒಟ್ಟೂ ಇರುವೆ ಸಮುದಾಯದ ವಾರ್ಷಿಕ ಸಭೆ. ಇರುವೆಯ ನಾಯಕ ಮಾತನಾಡುತ್ತಿದ್ದ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ, ತಮ್ಮ ಆಹಾರಗಳಿಗೆ ಕುತ್ತು ಬರುತ್ತಿರುವ ಬಗ್ಗೆ, ಮನುಷ್ಯರು ನಮ್ಮನ್ನು ಕೊಲ್ಲಲು/ದೂರವಿಡಲು ಬಳಸುತ್ತಿರುವ ನಾನಾ ಮಾರ್ಗಗಳ ಬಗ್ಗೆ ಹೀಗೆ ಎಲ್ಲದರ ಬಗ್ಗೆಯೂ ಅವನು ಮಾಹಿತಿ ನೀಡುತ್ತಿದ್ದ. ಎಲ್ಲ ಇರುವೆಗಳೂ ಭಾಷಣವನ್ನು ಕೇಳುತ್ತಿದ್ದವು. ಹಾಗಾಗಿ, ಬೇರೆ ಯಾವ ಭಾಗದಲ್ಲೂ ಇರುವೆಗಳು ಇರಲಿಲ್ಲ.
ಅಷ್ಟರಲ್ಲಿ ಒಂದು ಇರುವೆ ಬಡಬಡನೆ ಓಡೋಡಿ ಬಂದಿತು. ಸಭೆಗೆ ತಡವಾಗಿದ್ದರಿಂದ ಇದು ಓಡೋಡಿ ಬರುತ್ತಿದೆ ಎಂದು ಎಲ್ಲರೂ ಅಂದುಕೊಂಡರು. ಆದರೆ, ಅದು ಯಾವುದೋ ಸುದ್ದಿಯನ್ನು ಹೊತ್ತು ತಂದಿತ್ತು. ಹಿಂದಿನ ಸಾಲಿಗೆ ಬಂದ ಆ ಇರುವೆ ತನ್ನ ಗೆಳೆಯನಲ್ಲಿ, ‘ಅಲ್ಲೊಂದು ಮನೆಯ ಗೋದಾಮಿನಲ್ಲಿ ಸಕ್ಕರೆ ರಾಶಿ ಇದೆ. ಇಲ್ಲಿರುವ ನಮಗೆಲ್ಲರಿಗೂ ಸಾಕಾಗುವಷ್ಟು ಇದೆ. ಏನು ಮಾಡೋದು’ ಎಂದು ಕೇಳಿತು. ಅದಕ್ಕೆ ‘ಸದ್ಯಕ್ಕೆ ಸುಮ್ಮನಿರು. ಸಭೆ ನಡೆಯುತ್ತಿದೆ’ ಎಂದು ಹೇಳಿದ ಗೆಳೆಯ.
ಇದಕ್ಕೇಕೋ ಸಮಾಧಾನವಾಗಲಿಲ್ಲ. ಮುಂದಿನ ಸಾಲಿನಲ್ಲಿ ಮತ್ತೊಬ್ಬ ಗೆಳೆಯನಿಗೆ ಅದೇ ವಿಷಯ ತಿಳಿಸಿತು. ಅಲ್ಲೂ ಸಿಕ್ಕ ಉತ್ತರವೆಂದರೆ, ‘ಹತ್ತು ನಿಮಿಷ, ಸಭೆ ಮುಗಿದ ಕೂಡಲೇ ಹೊರಡೋಣ’ . ಮತ್ತೂ ಬೇಸರವಾಯಿತು ಅದಕ್ಕೆ. ಮತ್ತೆ ಮುಂದಿನ ಸಾಲಿಗೆ ಹೋಯಿತಾದರೂ ಯಾರೂ ಕಿವಿಗೊಡಲಿಲ್ಲ. ಹಾಗೆಂದು ಇದು ಉತ್ಸಾಹ ಕಳೆದುಕೊಳ್ಳಲಿಲ್ಲ.
ಮತ್ತೆ ಮುಂದಿನ ಸಾಲಿಗೆ ಹೋಗಿ ಒಬ್ಬ ಹಿರಿಯನನ್ನು ಹುಡುಕಿ, ‘ಅಜ್ಜ, ಅಲ್ಲೊಂದು ಮನೆಯ ಗೋದಾಮಿನಲ್ಲಿ ಸಾಕಷ್ಟು ಸಕ್ಕರೆ ಇದೆ. ಇಲ್ಲಿರುವವರಿಗೆಲ್ಲಾ ಸಾಕಾಗುವಷ್ಟು ಇದೆ. ಈಗಲೇ ಬಂದರೆ ತರಬಹುದು’ ಎಂದು ವಿವರಿಸಿತು. ಅಜ್ಜ ಎರಡು ಕ್ಷಣ ಯೋಚಿಸಿದ. ಬಳಿಕ ಎದ್ದು ನಿಂತು ತನ್ನ ಮುಖಂಡನನ್ನು ಕುರಿತು, ‘ಸ್ವಾಮಿ, ನನ್ನ ಮೊಮ್ಮಗಳು ಒಂದು ಸುದ್ದಿ ತಂದಿದ್ದಾಳೆ’ ಎಂದು ವಿಷಯ ತಿಳಿಸಿತು.
ಕೂಡಲೇ ನಾಯಕ ಮಾತನಾಡುತ್ತಿದ್ದುದನ್ನು ನಿಲ್ಲಿಸಿ, ‘ಎಲ್ಲರೂ ಈಗಲೇ ಹೊರಡಬೇಕು. ನಾವು ನಂತರ ಮಾತನಾಡೋಣ. ಈಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳೋಣ. ಎಲ್ಲರೂ ಸಾಲಾಗಿ ಅವಳನ್ನು ಹಿಂಬಾಲಿಸಿ. ಎಲ್ಲರೂ ಹೋಗಿ ಸಕ್ಕರೆ ಮೂಟೆಯನ್ನು ತರೋಣ’ ಎಂದು ಸೂಚಿಸಿದ. ಎಲ್ಲರೂ ಸಾಲಾಗಿ ಹೊರಟರು ಸಕ್ಕರೆ ಗೋದಾಮಿಗೆ.
ಬದುಕಿನಲ್ಲಿ ಎಲ್ಲದಕ್ಕೂ ಆದ್ಯತೆ ಎಂಬುದಿರುತ್ತದೆ. ಅದನ್ನು ಸರಿಯಾಗಿ ಗಮನಿಸಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಯಶಸ್ಸು.
– ಮಿಲರೇಪ