Advertisement

ಕುಸಿಯುತ್ತಿರುವ ಸಚ್ಚೇರಿಪೇಟೆ ಕಜೆ ರಸ್ತೆಯ ಮೋರಿ

10:12 PM Jul 20, 2019 | Sriram |

ವಿಶೇಷ ವರದಿ-ಬೆಳ್ಮಣ್‌: ಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಳ ಪದವು ಮಾರ್ಗದಿಂದ ಸಚ್ಚೇರಿಪೇಟೆ ಕಜೆ ಮಾರಿಗುಡಿ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಮೋರಿಯೊಂದು ಕುಸಿಯುತ್ತಿದ್ದು, ವಾಹನ ಸವಾರರು ಭೀತಿ ಎದುರಿಸುತ್ತಿದ್ದಾರೆ.

Advertisement

ಹಲವು ವರ್ಷಗಳ ಹಿಂದೆ ಇಲ್ಲಿ ರಸ್ತೆ ನಿರ್ಮಾಣಗೊಂಡ ವೇಳೆ ಮೋರಿ ಕಟ್ಟಲಾ ಗಿತ್ತು. ಅದೀಗ ಮಳೆ ನೀರಿನ ರಭಸಕ್ಕೆ ಕುಸಿಯುತ್ತಿದೆ. ಇದನ್ನು ಸರಿಪಡಿಸದೇ ಇದ್ದಲ್ಲಿ ರಸ್ತೆಯೂ ಕುಸಿಯುವ ಸಾಧ್ಯತೆ ಇದೆ.

ಒಂದು ಭಾಗ ಕುಸಿತ
ಮೋರಿಯ ಒಂದು ಬದಿ ಕುಸಿದಿದ್ದು, ಸಿಮೆಂಟ್‌ನ ಪೈಪ್‌ ಕೂಡ ತುಸು ದೂರ ಕೊಚ್ಚಿ ಹೋಗಿದೆ. ಮೋರಿಯ ತಡೆಗೋಡೆಯೂ ಕುಸಿದು ಕಲ್ಲುಗಳು ಚೆಲ್ಲಾಪಿಲ್ಲಿಯಾಗಿವೆ. ಮೋರಿ ಕುಸಿಯುತ್ತಿರುವುದರಿಂದ ರಸ್ತೆಯೂ ಬಿರುಕುಬಿಟ್ಟಿದೆ.

ಕಜೆ ಮಾರಿಗುಡಿ ಸಂಪರ್ಕ ರಸ್ತೆ
ಈ ರಸ್ತೆಯು ಮುಂಡ್ಕೂರು, ಬೆಳ್ಮಣ್‌ ಭಾಗದ ಭಕ್ತರಿಗೆ ಐತಿಹಾಸಿಕ ಕಜೆ ಮಾರಿಗುಡಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಈ ಭಾಗದಲ್ಲಿ ಹಲವಾರು ಮನೆಗಳಿದ್ದು ಜನರ ಸಂಚಾ ರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಬೆಳ್ಮಣ್‌, ಬೋಳ, ಕೆದಿಂಜೆ, ಮಂಜರಪಲ್ಕೆ ಹಾಗೂ ಮುಂಡ್ಕೂರು ಭಾಗದ ಜನರು ಮೂಡುಬಿದಿರೆಯನ್ನು ಸೇರಲು ಹೆಚ್ಚಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹಲವು ವಾಹನಗಳು ಇದೇ ಮಾರ್ಗದಲ್ಲಿ ಓಡಾಟ ನಡೆಸುತ್ತವೆ. ಹೀಗಾಗಿ ಕೂಡಲೇ ಕುಸಿದ ಮೋರಿಯ ದುರಸ್ತಿ ಕಾರ್ಯ ನಡೆಯಲಿ ಎನ್ನುವುದು ಇಲ್ಲಿನ ನಿವಾಸಿಗಳ ಒತ್ತಾಯ. ಒಂದು ವೇಳೆ ಮೋರಿ ಸಂಪೂರ್ಣ ಕುಸಿದರೆ ಕಜೆ ಪರಿಸರವನ್ನು ಸಂಪರ್ಕಿಸುವ ರಸ್ತೆಯೂ ಕಡಿತಗೊಳ್ಳಲಿದೆ.

ಎಚ್ಚರಿಕೆ ಫಲಕ
ಮೋರಿ ಕುಸಿದಿರುವ ಬಗ್ಗೆ ರಸ್ತೆ ಬದಿ ರೀಪಿನ ಬೇಲಿ ಮತ್ತು ಒಂದು ಬ್ಯಾನರನ್ನು ಉಡುಪಿ ಜಿ.ಪಂ. ಎಂಜಿನಿಯರಿಂಗ್‌ ಇಲಾಖೆ ಅಳವಡಿಸಿದ್ದು ಬಿಟ್ಟರೆ ಮೋರಿಯ ದುರಸ್ತಿಯ ಬಗ್ಗೆ ಇಲ್ಲಿಯ ವರೆಗೂ ಕ್ರಮವನ್ನು ಕೈಗೊಂಡಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಶಾಲಾ ವಾಹನಗಳು, ವಿದ್ಯಾರ್ಥಿಗಳು ತೆರಳುತ್ತಿರುವುದರಿಂದ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Advertisement

ಮೋರಿ ಕುಸಿದು ಭಾರೀ ಅವಘಡ ಸಂಭವಿಸುವ ಮುನ್ನ ಸ್ಥಳೀಯಾಡಳಿತ ಹಾಗೂ ಇಲಾಖೆ ಎಚ್ಚೆತ್ತು ಹೊಸತೊಂದು ಮೋರಿ ನಿರ್ಮಾಣ ಮಾಡಬೇಕೆನ್ನುವ ಆಗ್ರಹ ಗ್ರಾಮಸ್ಥರದ್ದು.

ಜಿ.ಪಂ.ಗೆ ಮನವಿ
ಮೋರಿಯ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಲಾಗುವುದು.
-ಶ‌ಶಿಧರ ಆಚಾರ್ಯ,
ಮುಂಡ್ಕೂರು ಗ್ರಾ.ಪಂ.ಪಿಡಿಒ

ಸ್ಪಂದಿಸುವ ಭರವಸೆ
ಈ ಮೋರಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡ ಲಾಗಿದೆ. ಸ್ಪಂದಿಸುವ ಭರವಸೆ ಇದೆ.
-ಉದಯ ಕಜೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next