ಬಜಗೋಳಿ: ಬಜಗೋಳಿ ಪೇಟೆಯ ಬಳಿಯ ಗುರ್ಗಲ್ ಗುಡ್ಡ ಬಳಿಯ ಮೋರಿ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗುರ್ಗಲ್ ಗುಡ್ಡ ಬಳಿಯ ಮೋರಿಯು ಕುಸಿದು ಹೊಂಡ ನಿರ್ಮಾಣವಾಗಿದೆ.
ಈ ರಸ್ತೆಯ ಮೂಲಕ ಧರ್ಮಸ್ಥಳ ಸಂಚರಿಸುವ ಬಹುತೇಕ ವಾಹನಗಳು ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಈ ಮೂಲಕವೇ ಸಂಚರಿಸುತ್ತಿವೆ.
ಈ ಮೋರಿ ಅವ್ಯವಸ್ಥೆ ಕುರಿತು ಉದಯವಾಣಿ ಪ್ರತಿಕೆ ಈ ಹಿಂದೆ ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ಬಳಿಕ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಮೋರಿಯ ಬಳಿ ನಿರ್ಮಾಣವಾದ ಬೃಹತ್ ಗುಂಡಿಗಳನ್ನು ಮುಚ್ಚಿ ಮೋರಿಯ ಎರಡು ಪಾರ್ಶ್ವದಲ್ಲಿ ತಡೆಗೋಡೆ ನಿರ್ಮಿಸಿತ್ತು. ಆದರೆ ಮೋರಿಯ ಬಳಿ ಗುಂಡಿಗೆ ಹಾಕಲಾದ ಜಲ್ಲಿ ಕಲ್ಲುಗಳು ಎದ್ದಿವೆ.
ರಾತ್ರಿ ಸಂಚರಿಸುವ ವಾಹನಗಳು ಮೋರಿ ಕುಸಿದು ಹೊಂಡವನ್ನು ಅರಿಯದೆ ಹಲವು ಅವಘಡ ಸಂಭವಿಸಿವೆ. ಇನ್ನಾದರೂ ಗುರ್ಗಲ್ ಗುಡ್ಡ ಬಳಿಯ ಕುಸಿದ ಮೋರಿ ದುರಸ್ತಿಪಡಿಸಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಎರಡು ವರ್ಷಗಳಿಂದ ನಿರಂತರ ಸಮಸ್ಯೆ
ಗುರ್ಗಲ್ ಗುಡ್ಡ ಬಳಿಯ ಮೋರಿಯು ಕುಸಿತದಿಂದ ಎರಡು ವರ್ಷಗಳಿಂದ ನಿರಂತರ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರಿಗೆ ತೊಂದರೆಯುಂಟಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು.
- ಸತೀಶ್ ಪೂಜಾರಿ,
ರಿಕ್ಷಾ ಚಾಲಕರು