ಹೊಸದಿಲ್ಲಿ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಭಾರೀ ಇರಿಸು ಮುರಿಸು ಉಂಟುಮಾಡುವ ರೀತಿಯಲ್ಲಿ ಅವರ ಮಹಾ ಘಟಬಂಧನದ ಪ್ರಧಾನ ಮಿತ್ರ ಪಕ್ಷವಾಗಿರುವ ಆರ್‌ಜೆಡಿ ಇದರ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಂಬಂಧಿಸಿದ ಹಲವಾರು ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸುಮಾರು 1,000 ಕೋಟಿ ರೂ. ಗಳ ಬೇನಾಮಿ ಆಸ್ತಿಪಾಸ್ತಿ ವಹಿವಾಟನ್ನು ಲಾಲು ಅವರ ಕಂಪೆನಿಗಳು ನಡೆಸಿವೆ ಎನ್ನಲಾಗಿದೆ.
ದಿಲ್ಲಿ, ಗುರುಗ್ರಾಮ ಸೇರಿದಂತೆ ಸುಮಾರು 21 ತಾಣಗಳಲ್ಲಿರುವ, ಲಾಲು ಪ್ರಸಾದ್ ಯಾದವ್‌ಗೆ ಸಂಬಂಧಿಸಿರುವ ಕಂಪೆನಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪುತ್ರಿ – ಸಂಸದೆ ಮೀಸಾ ಭಾರತಿ ಮತ್ತು ಬಿಹಾರ ಸರಕಾರದಲ್ಲಿ ಸಚಿವರಾಗಿರುವ ಲಾಲು ಅವರ ಇಬ್ಬರು ಪುತ್ರರು ಸುಮಾರು 1,000 ಕೋಟಿ ರೂ.ಗಳ ಅಕ್ರಮ ಬೇನಾಮಿ ಭೂವ್ಯವಹಾರ ನಡೆಸಿರುವುದಾಗಿ ಬಿಜೆಪಿ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಐಟಿ ದಾಳಿಗಳು ನಡೆದಿವೆ.
ಲಾಲು ಅವರ ಕಟುಂಬ ಸದಸ್ಯರು ಆರಂಭಿಸಿರುವ ಹಲವಾರು ಕಂಪೆನಿಗಳ ಮಾಲಕರ ವಿಳಾಸವನ್ನು ಲಾಲು ಅವರ ಅಧಿಕೃತ ನಿವಾಸವಿರುವ ವಿಳಾಸದಲ್ಲಿ ಕಾಣಿಸಲಾಗಿದೆ ಎಂದು ಕಳೆದ ವಾರವಷ್ಟೇ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಆಪಾದಿಸಿದ್ದರು.
ಕೇವಲ ಬೇನಾಮಿ ಭೂವ್ಯವಹಾರಗಳನ್ನು ಮಾಡುವ ಸಲುವಾಗಿ ಲಾಲು ಅವರ ಕುಟುಂಬ ಸದಸ್ಯರು ಹುಟ್ಟುಹಾಕಿರುವ ಈ ಕಂಪೆನಿಗಳಲ್ಲಿ ಯಾವುದೇ ನೌಕರರಲ್ಲಿ; ಯಾವುದೇ ಔದ್ಯಮಿಕ ಚಟುವಟಿಕೆಗಳು ನಡೆದಿಲ್ಲ ಮತ್ತು ಯಾವುದೇ ಮೊತ್ತದ ವಹಿವಾಟು ನಡೆದಿಲ್ಲ ಎಂಬುದು ಈಗ ಬಹಿರಂಗವಾಗಿದೆ.
ಈ ಬಗೆಯ ಬೇನಾಮಿ ಆಸ್ತಿಪಾಸ್ತಿ ಹಗರಣದಲ್ಲಿ ಪಟ್ಟಾನದಲ್ಲಿ ಮೈದಳೆಯುತ್ತಿರುವ 7.5 ಲಕ್ಷ ಚದರಡಿ ಸ್ಥಳಾವಕಾಶದ ಬಿಹಾರದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಕೂಡ ಸೇರಿದೆ.
ಹಿರಿಯ ಬಿಜೆಪಿ ನಾಯಕರಾದ ರವಿ ಶಂಕರ್ ಪ್ರಸಾದ್, ಗಿರಿರಾಜ್ ಸಿಂಗ್, ರಾಜೀವ್ ಪ್ರತಾಪ್ ರೂಡಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಲಾಲು ಕುಟುಂಬದ ಅಕ್ರಮ ಬೇನಾಮಿ ಭೂವ್ಯವಹಾರಗಳ ಬಗ್ಗೆ ಹಾಗೂ ಆ ಬಗೆಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೌನದ ಬಗ್ಗೆ ಪದೇ ಪದೇ ವಾಕ್‌ದಾಳಿ ನಡೆಸುತ್ತಲೇ ಬಂದಿದ್ದಾರೆ.
ಲಾಲು ಮತ್ತು ಆತನ ಕುಟುಂಬದವರ ಮೇಲೆ ಇನ್ನಾದರೂ ಕಾನೂನು ಕ್ರಮತೆಗೆದುಕೊಳ್ಳುವಿರೋ ಇಲ್ಲವೋ ಎಂದು ಪ್ರಸಾದ್ ಅವರು ನಿತೀಶ್‌ಗೆ ಈಚೆಗೆ ನೇರ ಚ್ಯಾಲೆಂಜ್ ಹಾಕಿದ್ದರು.